ದಾವಣಗೆರೆ : ಟಿಪ್ಪರ್ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಜಿಲ್ಲಾ ಕೇಂದ್ರದ ಸ್ವಾಗತ ಫಲಕಗಳು ಪಿಲ್ಲರ್ ಸಮೇತ ಕಿತ್ತು ಬಂದ ಘಟನೆ ನಗರದ ಹೊರ ವಲಯದ ಬಾತಿ ಸಮೀಪ ಶುಕ್ರವಾರ ರಾತ್ರಿ ಸಂಭವಿಸಿದೆ. ತಾಲೂಕಿನ ಬಾತಿ ಕಡೆಯಿಂದ ನಗರಕ್ಕೆ ಬರುತ್ತಿದ್ದ ಟಿಪ್ಪರ್ ಲಾರಿಯ ಹಿಂಭಾಗವು ಹೈಡ್ರಾಲಿಕ್‌ ಟಿಪ್ಪರ್ ಆಕಸ್ಮಿಕವೋ ಅಥವಾ ಚಾಲಕನ ಅಜಾಗರೂಕತೆಯಿಂದಲೇ ಎದ್ದಿರುವುದನ್ನು ಗಮನಿಸದೇ, ಚಾಲನೆ ಮಾಡಿಕೊಂಡು ಬಂದಿದ್ದರಿಂದ ಜಿಲ್ಲಾ ಕೇಂದ್ರಕ್ಕೆ ಸ್ವಾಗತಿಸುವ ಕೈಮುಗಿದು ಒಳಗೆ ಇದು ಜ್ಞಾನ ಕಾಶಿ ಎಂಬುದಾಗಿ ಇರುವ ಫಲಕದ ಸಮೇತ ಎರಡೂ ಬದಿಯ ಪಿಲ್ಲರ್ ಸಮೇತ ಕಿತ್ತುಕೊಂಡು ಬಂದಿದೆ.

ಚಾಲಕನ ಅಜಾಗರೂಕತೆಯಿಂದಲೋ, ಆಕಸ್ಮಿಕವೋ ಟಿಪ್ಪರ್ ಲಾರಿಯ ಹಿಂಭಾಗದಲ್ಲಿ ಲೋಡ್ ಮಾಡುವ ಹೈಡ್ರಾಲಿಕ್‌ ಟಿಪ್ಪರ್ ಎದ್ದಿದ್ದರಿಂದ ಈ ಅನಾಹುತ ಸಂಭವಿಸಿದೆ. ಅದೃಷ್ಟವಶಾತ್ ಸ್ವಾಗತ ಫಲಕ ಪಿಲ್ಲರ್ ಸಮೇತ ಕಿತ್ತು ಬರುವಾಗ ಅಕ್ಕಪಕ್ಕ, ಹಿಂಭಾಗದಲ್ಲಿ ಯಾವುದೇ ವಾಹನಗಳಾಗಲೀ, ದ್ವಿಚಕ್ರ ವಾಹನ ಸವಾರರಾಗಲೀ ಇರಲಿಲ್ಲ. ಯಾವಾಗ ಟಿಪ್ಪರ್ ಸದ್ದು ಮಾಡಿಕೊಂಡು, ಪಿಲ್ಲರ್ ಸಮೇತ ಸ್ವಾಗತ ಫಲಕ ಕಿತ್ತುಕೊಂಡು ಬಂದಿತೋ ಚಾಲಕ ಲಾರಿ ನಿಲ್ಲಿಸಿ, ನೋಡಿದಾಗ ಇದೆಲ್ಲಾ ಗೊತ್ತಾಗಿದೆ.

ಸಾಮಾನ್ಯವಾಗಿ ಮರಳು, ಜಲ್ಲಿ ಕಲ್ಲು, ಬಟಾಣಿ ಜಲ್ಲಿ, ಎಂ ಸ್ಯಾಂಡ್‌ ಸೇರಿದಂತೆ ಲೋಡ್ ಗಳನ್ನು ಸಾಗಿಸುವ ಟಿಪ್ಪರ್ ಚಾಲಕರು ಲೋಡ್ ಮಾಡಿದ್ದ ವಾಹನವನ್ನು ಅನ್ ಲೋಡ್ ಮಾಡಿದ ನಂತರ ಜಾಗ್ರತೆಯಿಂದ ಟಿಪ್ಪರ್ ಬಟನ್ ಲಾಕ್ ಮಾಡಬೇಕು. ಆದರೆ, ಅರೆಬರೆಯಾಗಿ ಟಿಪ್ಪರ್ ಚಾಲನೆ, ನಿರ್ವಹಣೆ ಕಲಿತವರಿಂದಾಗಿ ಇಂತಹ ಅವಘಡ ಸಂಭವಿಸುವ ಸಾಧ್ಯತೆ ಇದೆ.  ಅಲ್ಲದೇ, ಅನ್ ಲೋಡ್ ಮಾಡಿದ ನಂತರ ಟಿಪ್ಪರ್ ಸರಿಯಾಗಿ ಲಾಕ್ ಮಾಡಿ ಖಚಿತ ಪಡಿಸಿಕೊಳ್ಳಬೇಕು. ಆದರೆ, ಅಂತಹ ಜಾಗ್ರತೆ ವಹಿಸದಿದ್ದರೆ ಇಂತಹ ಅನಾಹುತ ಆಗುತ್ತವೆನ್ನಲಾಗಿದೆ. ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

Share.
Leave A Reply

Exit mobile version