ನ್ಯಾಮತಿ; ಇಡೀ ಮನುಕುಲ, ಪ್ರಾಣಿ, ಪಕ್ಷಿಗಳನ್ನು ಸೃಷ್ಟಿ ಮಾಡಿದವನು ಭಗವಂತ. ಭಗವಂತನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುವುದು ಜೀವ ತುಂಬುವುವಂತಹದ್ದಲ್ಲ. ಆ ವಿಗ್ರಹಕ್ಕೆ ನಿಮ್ಮ ಭಕ್ತಿಯನ್ನು ತುಂಬುವುದಾಗಿದೆ ಎಂದು ಸಿರಿಗೆರೆ ತರಳುಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮಲ್ಲಿಗೆನಹಳ್ಳಿ ಗ್ರಾಮದಲ್ಲಿ ಶನಿವಾರ ಶ್ರೀಆಂಜನೇಯ ಸ್ವಾಮಿ, ಶ್ರೀಭೂತಪ್ಪ ಸ್ವಾಮಿ, ಶ್ರೀ ದುರ್ಗಾಮ್ಮ ದೇವಿ , ಶ್ರೀಮರಿಯಮ್ಮ ದೇವಿ, ಶ್ರೀಮಾತಂಗೇಶ್ವರಿ ದೇವಿ ದೇಗುಲ ಪ್ರವೇಶ ಮತ್ತು ದೇವರ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆ, ಶ್ರೀಕರಿಯಮ್ಮ ದೇವಿ ದೇಗುಲದ ಕಳಸಾರೋಹಣ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವುದು ನಮ್ಮ ಪರಂಪರೆಯಿಂದ ನಡೆದುಕೊಂಡು ಬಂದಿದ್ದು, ನೀವು ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವುದು ತಪ್ಪಲ್ಲ. ಆದರೆ ನೀವು ಆ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿದ್ದೀರಿ, ಅದು ಪ್ರಾಣ ಪ್ರತಿಷ್ಠಾಪನೆಯಲ್ಲ. ಆ ವಿಗ್ರಹದ ಮೇಲೆ ನಿಮ್ಮ ಭಕ್ತಿಯು ಪ್ರತಿಷ್ಠಾಪನೆಯಾಗಿದೆ ಎಂದರು.
ಇದುವರೆಗೂ ಆ ವಿಗ್ರಹ ಶಿಲೆಯಾಗಿತ್ತು. ಆ ಶಿಲೆ ಈಗ ದೇವರ ಮೂರ್ತಿಯಾಗಿದೆ. ವಿಗ್ರಹ ಪ್ರತಿಷ್ಠಾಪನೆ ಮಾಡಿ ಅದರೊಳಗೆ ಜೀವ ತುಂಬಲಾಗುತ್ತಿದೆ ಎಂದು ನೀವು ಭಾವಿಸಿದ್ದೀರಿ. ಆದರೆ ನೀವು ದೇವರ ಸೃಷ್ಟಿಯೇ ಹೊರತು, ದೇವರನ್ನು ಸೃಷ್ಟಿ ಮಾಡುವವರಲ್ಲ ಎಂದರು.