ಶಿವಮೊಗ್ಗ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ನಿರ್ದೇಶಕರ ಆಯ್ಕೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜೂನ್ 28ರಂದು ಡಿಸಿಸಿ ಬ್ಯಾಂಕ್‌ನ ಜಿಲ್ಲಾ ಪ್ರಧಾನ ಕಚೇರಿಯಲ್ಲಿ ಮತದಾನ ನಡೆಯಲಿದೆ.
ನಾಳೆಯಿಂದ ನಾಮಪತ್ರ ಸಲ್ಲಿಕೆ
ಈ ಹಿಂದೆ ಏ.6ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಲೋಕಸಭೆ ಚುನಾವಣೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಬೇಕಿತ್ತು. ಹಾಗಾಗಿ ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಮುಂದೂಡಿತ್ತು. ಈಗ ಹೊಸದಾಗಿ ಅಧಿಸೂಚನೆ ಪ್ರಕಟಿಸಲಾಗಿದೆ. ಜೂ.12ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಜೂ.20ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಎಂದು ಶಿವಮೊಗ್ಗ ಉಪ ವಿಭಾಗಾಧಿಕಾರಿ ಮತ್ತು ಡಿಸಿಸಿ ಬ್ಯಾಂಕ್‌ನ ರಿಟರ್ನಿಂಗ್ ಆಫೀಸರ್ ಜಿ.ಹೆಚ್.ಸತ್ಯನಾರಾಯಣ ತಿಳಿಸಿದ್ದಾರೆ.
ವಿವಿಧ ಕ್ಷೇತ್ರದಿಂದ 13 ನಿರ್ದೇಶಕರ ಆಯ್ಕೆ
ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ವಿವಿಧ ಕ್ಷೇತ್ರಗಳಿಂದ ಒಟ್ಟು 13 ನಿರ್ದೇಶಕರ ಆಯ್ಕೆ ನಡೆಯಲಿದೆ. ಪ್ರತಿ ತಾಲೂಕಿಗೆ ಒಬ್ಬರಂತೆ ವಿವಿಧ ಸಹಕಾರ ಸಂಘಗಳಿಂದ ಚುನಾಯಿಸಲ್ಪಡುವ ಪ್ರತಿನಿಧಿಗಳು, ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು, ಸಂಸ್ಕರಣ ಸಂಘಗಳ ವತಿಯಿಂದ ಇಬ್ಬರು ಸದಸ್ಯರು, ಪಟ್ಟಣ ಸಹಕಾರ ಸಂಘಗಳು ಮತ್ತು ವ್ಯವಸಾಯೇತರ ಸಹಕಾರ ಸಂಘಗಳ ವತಿಯಿಂದ ಇಬ್ಬರು, ಇನ್ನಿತರೆ ಸಹಕಾರ ಸಂಘಗಳ ವತಿಯಿಂದ ಇಬ್ಬರು ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜೂನ್ 12 ರಿಂದ ಜೂನ್ 20ರವರೆಗೆ ಅವಕಾಶವಿದೆ. ಜೂನ್ 21ರಂದು ನಾಮಪತ್ರ ಪರಿಶೀಲನೆ ನಡೆಸಲಾಗುತ್ತದೆ. ಅದೇ ದಿನ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಜೂನ್ 22ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಅದೇ ದಿನ ಪ್ರಕಟಿಸಲಾಗುತ್ತದೆ. ಅಲ್ಲದೆ ಅವಶ್ಯವಿದ್ದಲ್ಲಿ ಚುನಾವಣೆ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುತ್ತದೆ.
ಜೂನ್ 24ರಂದು ಚುನಾವಣೆ ಚಿಹ್ನೆಯೊಂದಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಜೂನ್ 28ರಂದು ಬೆಳಗ್ಗೆ 9 ಗಂಟೆಯಿAದ ಸಂಜೆ 4 ಗಂಟೆವರೆಗೆ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಕಟ್ಟಡದಲ್ಲಿ ಮತದಾನ ನಡೆಯಲಿದೆ. ಮತದಾನ ಮುಗಿಯುತ್ತಿದ್ದಂತೆ ಎಣಿಕೆ ಕಾರ್ಯ ನಡೆಯಲಿದೆ. ಪೂರ್ಣಗೊಳ್ಳುತ್ತಿದ್ದಂತೆ ಫಲಿತಾಂಶ ಪ್ರಕಟಿಸಲಾಗುತ್ತದೆ.