ಚಿಲ್ಲರ ಸಮಸ್ಯೆ ತಪ್ಪಿದೆ, ಸಮಯ ಉಳಿತಾಯ, ಕ್ಯೂರ್ ಕೋಡ್‌ನ್ನು ಸ್ಕ್ಯಾನ್ ಮಾಡಿ ಹಣ ಪಾವತಿ, ಡಿಜಿಟಲ್ ಪಾವತಿಯಿಂದ ಅನಗತ್ಯ ಜಗಳ ತಪ್ಪಿದೆ. ಎಲೆಕ್ಟ್ರಾನಿಕ್ ಟಿಕೆಟಿಂಗ್, ತಿಂಗಳಿಗೆ 5 ಕೋಟಿ ಹಣ
ಬೆಂಗಳೂರು :
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ನಗದು ರಹಿತ ಪಾವತಿ ವ್ಯವಸ್ಥೆ ಮಾಡಿರುವುದರಿಂದ
ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಜಿಟಲ್ ಟಿಕೆಟಿಂಗ್ ಜಾರಿಗೆ ತಂದ ಮೊದಲ ತಿಂಗಳೊಳಗೆ, ಕೆಎಸ್‌ಆರ್‌ಟಿಸಿಯು ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವಹಿವಾಟಿನ ಮೂಲಕ 5.5 ಕೋಟಿಗೂ ಹೆಚ್ಚು ಸಂಗ್ರಹಿಸಿದೆ.
ಬಹುಕಾಲದ ಪ್ರಯಾಣಿಕರ ಬೇಡಿಕೆಗಳಿಗೆ ಸ್ಪಂದಿಸಿ ಕೆಎಸ್‌ಆರ್‌ಟಿಸಿ ತನ್ನ ಬಸ್ ಸೇವೆಗಳಲ್ಲಿ ನಗದು ರಹಿತ ಪಾವತಿ ವ್ಯವಸ್ಥೆ ಅಳವಡಿಸಿಕೊಂಡಿದೆ. ನವೆಂಬರ್ 6 ರಂದು ಪರಿಚಯಿಸಲಾಗಿದ್ದು, ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳು ಯುಪಿಐ ಪಾವತಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿದೆ. ಒಂದು ಅಂದಾಜಿನ ಪ್ರಕಾರ ನವೆಂಬರ್ 6 ರಿಂದ ನವೆಂಬರ್ 30 ರ ನಡುವೆ ನಿಗಮವು 3.63 ಕೋಟಿ ಸಂಗ್ರಹಿಸಿದೆ. ಡಿಸೆಂಬರ್ ಮೊದಲ ಐದು ದಿನಗಳಲ್ಲಿ, ದೈನಂದಿನ ಸಂಗ್ರಹಣೆ 34 ಲಕ್ಷದಿಂದ 42 ಲಕ್ಷದವರೆಗೆ ಇದ್ದು, ಡಿಸೆಂಬರ್ 3 ರಂದೇ 30,000 ವಹಿವಾಟುಗಳು ದಾಖಲಾಗಿವೆ.
ವಿವಾದ ಅಂತ್ಯ.
ಡಿಜಿಟಲ್ ಪಾವತಿಯಿಂದ ಚಿಲ್ಲರ ಸಮಸ್ಯೆ ತಪ್ಪುತ್ತದೆ. ಅಲ್ಲದೇ ಪ್ರಯಾಣಿಕರು ಮತ್ತು ಕಂಡಕ್ಟರ್‌ಗಳ ನಡುವೆ ಉಂಟಾಗುವ ವಿವಾದಗಳನ್ನು ತಪ್ಪಿಸಿದೆ. ಆದ್ದರಿಂದ ಕೆಎಸ್‌ಆರ್‌ಟಿಸಿ ತನ್ನ ಬಸ್‌ಗಳಲ್ಲಿ ಸುಧಾರಿತ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳನ್ನು (ಇಟಿಎಂ) ಸಜ್ಜುಗೊಳಿಸಿದೆ. ಅಂತೆಯೇ 8,800 ಬಸ್‌ಗಳಲ್ಲಿ 10,000 ಕ್ಕೂ ಹೆಚ್ಚು ಸ್ಮಾರ್ಟ್ ಇಟಿಎಂಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಕಂಡಕ್ಟರ್‌ಗೆ ತರಬೇತಿಯ ನಂತರ ಮತ್ತಷ್ಟು ವಿಸ್ತರಣೆ ನಡೆಯಲಿದೆ.
ಎಬಿಕ್ಸ್ಕ್ಯಾಶ್ ಲಿಮಿಟೆಡ್ ಸಹಯೋಗ
ಕೆಎಸ್‌ಆರ್‌ಟಿಸಿಗೆ ಇಂಟೆಲಿ ಇಂಟಲಿಜೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅಳವಡಿಸಲು ಎಬಿಕ್ಸ್ಕ್ಯಾಶ್ ಲಿಮಿಟೆಡ್ ಗುತ್ತಿಗೆ ಪಡೆದಿದೆ. ಇದರ ಸಹಯೋಗದೊಂದಿಗೆ ಇಟಿಎಂಗಳನ್ನು ಹೊರತರಲಾಗಿದೆ. ಐದು ವರ್ಷಗಳ ಒಪ್ಪಂದ ಮಾಡಲಾಗಿದ್ದು, ನಗದು ರಹಿತ ಟಿಕೆಟಿಂಗ್ ಮತ್ತು ಸಮಗ್ರ ಡಿಜಿಟಲ್ ಪಾವತಿ ಪರಿಹಾರಗಳನ್ನು ಒಳಗೊಂಡಂತೆ ವಿನ್ಯಾಸ, ನಿರ್ವಹಣೆ ಇದೇ ಕಂಪನಿಯದ್ದೇ ಆಗಿರುತ್ತದೆ.
ಒಟ್ಟಿನಲ್ಲಿ ನಗದು ರಹಿತ ಟಿಕೆಟ್ ನೀಡುತ್ತಿರುವುದರಿಂದ ಕೆಎಸ್‌ಆರ್‌ಟಿಸಿಗೆ ಸಾಕಷ್ಟು ಲಾಭ ಬರುತ್ತಿದೆ.
ಕೆಎಸ್‌ಆರ್‌ಟಿಸಿಗೆ ಎಷ್ಟು ಲಾಭ
ನವೆಂಬರ್ 6 ರಿಂದ ನವೆಂಬರ್ 30ಕ್ಕೆ ರೂ.3,63,12,510
ಡಿಸೆಂಬರ್ 1: ರೂ.42,10,649
ಡಿಸೆಂಬರ್ 2: ರೂ.42,32,169
ಡಿಸೆಂಬರ್ 3: ರೂ.38,65,611
ಡಿಸೆಂಬರ್ 4: ರೂ.34,06,995
ಡಿಸೆಂಬರ್ 5: ರೂ.36,44,660
—
ಡಿಜಿಟಲ್ ಪಾವತಿಯಿಂದ ಅನಗತ್ಯ ಜಗಳ ತಪ್ಪಿದೆ. ಈಗ, ನಾನು ಕೇವಲ ಕ್ಯೂರ್ ಕೋಡ್‌ನ್ನು ಸ್ಕ್ಯಾನ್ ಮಾಡಿ ತಕ್ಷಣವೇ ಪಾವತಿಸುತ್ತೇನೆ. ಅಲ್ಲದೇ ನಾನು ಹೆಚ್ಚುವರಿ ಹಣವನ್ನು ಸಾಗಿಸಬೇಕಾಗಿಲ್ಲ.
-ಅಮಿತ್, ಪ್ರಯಾಣಿಕ
—
ಡಿಜಿಟಲ್ ಪಾವತಿ ಉತ್ತೇಜಿಸಲು, ಬಸ್‌ಗಳಲ್ಲಿ ನಗದು ನಿರ್ವಹಣೆ ಕಡಿಮೆ ಮಾಡಲು ಡಿಜಿಟಲ್ ವ್ಯವಸ್ಥೆ ತರಲಾಗಿದ್ದು,
ಒಂದು ತಿಂಗಳಲ್ಲಿ 5.5 ಕೋಟಿ ಸಂಗ್ರಹಿಸಲಾಗಿದೆ. ಇದರಿಂದ ನಿಗಮಕ್ಕೂ ಲಾಭ ಬರಲಿದೆ.
-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ