
ನಂದೀಶ್ ಭದ್ರಾವತಿ, ದಾವಣಗೆರೆ
ಡಿಸಿಸಿ ಬ್ಯಾಂಕ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ದಾವಣಗೆರೆ ಕೇಂದ್ರ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸುವುದಕ್ಕೆ ಅರ್ಜಿಗಳನ್ನು ತೆಗೆದುಕೊಳ್ಳಲು ಆಕಾಂಕ್ಷಿಗಳು ಮುಂದಾಗಿದ್ದರು.ಸದ್ಯ ಇದಿನಿಂದ ಡಿಸಿಸಿ ಬ್ಯಾಂಕ್ ಪಂದ್ಯಾವಳಿ ಶುರುವಾಗಿದ್ದು, ರೋಚಕ ಪಂದ್ಯದಲ್ಲಿ ಗೆಲ್ಲೋರ್ಯಾರು? ಎಂಬುದಕ್ಕೆ ಜನವರಿ 25 ರಂದು ಉತ್ತರ ಸಿಗಲಿದೆ. ಸದ್ಯ ಉಮೇದುವಾರಿಕೆಗೆ ಕ್ರೀಡಾಪಟುಗಳು ಸಜ್ಜಾಗಿದ್ದು, ಆದರೆ ಪಂದ್ಯ ಸಸ್ಫೇನ್ಸ್ ಯಾಗಿದೆ. ಅಲ್ಲದೇ ಕ್ರೀಡಾಪಟುಗಳು ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಒಟ್ಟು 13 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಅಂದಾಜು 500 ಮತದಾರರು ಮತ ಹಾಕಲಿದ್ದಾರೆ. ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಉಮೇದುವಾರಿಕೆ ಸಲ್ಲಿಸುವುದಕ್ಕೆ ಅರ್ಜಿ ಪಡೆದರು.
ಎದುರಾಳಿಗಳ ಭೇಟಿ, ಚುನಾವಣೆ ಚರ್ಚೆ


ಅರ್ಜಿ ತೆಗೆದುಕೊಳ್ಳಲು ಬಂದವರಿಗೆ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಎದುರಾಳಿಗಳು ಎದುರಾದರು. ಅವರ ಜತೆ ಬೆಂಬಲಿಗರು ಸಹ ಇದ್ದರು. ಈ ಸಂದರ್ಭದಲ್ಲಿ ಒಬ್ಬರೊನ್ನೋಬ್ಬರ ಮುಖ ಒಬ್ಬರು ನೋಡಲಿಲ್ಲ. ಆದರೆ ಜತೆಗೆ ಬಂದವರು ಎದುರಾಳಿ ಜತೆ ಹಸ್ತಲಾಘವ ಮಾಡಿದರು. ಇದೇ ಸಂದರ್ಭದಲ್ಲಿ ನಮಗೆ ಮತ ಹಾಕಬೇಕೆಂದು ಮನವಿ ಮಾಡಿದರು.
ಒಂದೇ ಪಕ್ಷದ ಬೆಂಬಲಿಗರ ನಡುವೆ ಚರ್ಚೆ
ಈ ಚುನಾವಣೆ ಪಕ್ಷ ರಹಿತ ಚುನಾವಣೆಯಾದರೂ, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಬೆಂಬಲ ಬೇಕಿದೆ. ಇದಕ್ಕಾಗಿ ಸ್ಪರ್ಧಾಳುಗಳು ಪಕ್ಷದ ನಾಯಕರ ಮನೆ ಕದ ತಟ್ಟುತ್ತಿದ್ದಾರೆ. ಅಲ್ಲದೇ ಒಂದೇ ಪಕ್ಷದ ಬೆಂಬಲಿಗರು ನಮಗೆ ಬೆಂಬಲ ನೀಡಬೇಕೆಂದು ನಾಯಕರನ್ನು ಒತ್ತಾಯಿಸುತ್ತಿದ್ದಾರೆ. ಇದರಿಂದ ಪಕ್ಷದ ನಾಯಕರು ಅಡ ಕತ್ತರಿಯಲ್ಲಿ ಸಿಲುಕಿ ಹಾಕಿಕೊಂಡಿದ್ದು, ಯಾರಿಗೆ ಬೆಂಬಲ ನೀಡಬೇಕೆಂಬ ಗೊಂದಲದಲ್ಲಿದ್ದಾರೆ. ಇನ್ನು ನಾಯಕರು ಹೇಳುವ ಸ್ಪರ್ಧಾಳುಗಳು ಚುನಾವಣೆ ಅಖಾಡಕ್ಕೆ ಇಳಿಯುವ ಎಲ್ಲ ಲಕ್ಷಣಗಳು ಇದ್ದರೂ, ಅತೃಪ್ತರು ಉಮೇದುವಾರಿಕೆ ಸಲ್ಲಿಸುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.
ಉಮೇದುವಾರಿಕೆ ಸಲ್ಲಿಸಲು ಜ್ಯೋತಿಷಿ, ದೇವರ ಮೊರೆ
ಉಮೇದುವಾರಿಕೆ ಸಲ್ಲಿಸಲು ಅಭ್ಯರ್ಥಿಗಳು ಜ್ಯೋತಿಷಿ, ದೇವರ ಮೊರೆ ಹೋಗುತ್ತಿದ್ದಾರೆ. ಇನ್ನು ಜನವರಿ 11 ಕ್ಕೆ ಎಳ್ಳು ಅಮಾವಾಸ್ಯೆವಾದ ಕಾರಣ ಒಳ್ಳೆದಿನವೆಂದು ಸಾಕಷ್ಟು ಜನರು ಉಮೇದುವಾರಿಕೆ ಸಲ್ಲಿಸುವರು. ಇನ್ನು ಕೆಲವರು ಪ್ರಸಾದ ಕೇಳಲು ದೇವರ ಮೊರೆ ಹೋಗಿದ್ದರು.
ಅಭ್ಯರ್ಥಿ ಬರುವಿಕೆಗಾಗಿ ಕಾದು ಕುಳಿತ ಚುನಾವಣಾಧಿಕಾರಿ ನಜ್ಮಾ
ಬೆಳಗ್ಗೆ ಒಂಭತ್ತು ಗಂಟೆಗೆ ಡಿಸಿಸಿ ಬ್ಯಾಂಕ್ ಕಚೇರಿಗೆ ಆಗಮುಸಿದ್ದ ರಿಟರ್ನಿಂಗ್ ಆಫೀಸರ್ ನಜ್ಮಾ ಅಭ್ಯರ್ಥಿ ಬರುವಿಕೆಗಾಗಿ ಕಾದು ಕುಳಿತಿದ್ದರು. ಇದೇ ಸಂದರ್ಭದಲ್ಲಿ ನಾಮಪತ್ರ ಸಲ್ಲುವಿಕೆಗೆ ಬೇಕಾದ ಸೂಚನೆಗಳನ್ನು ಕೊಡುತ್ತಿದ್ದರು. ಮಧ್ಯಾಹ್ನದ ಮೇಲೆ ಎರಡು ನಾಮಪತ್ರಗಳು ಸಲ್ಲಿಕೆಯಾದವು.
ಪ್ರತಿನಿಧಿಗಳೇ ಚುನಾವಣೆ ನಿರ್ಣಾಯಕರು
ಈ ಚುನಾವಣೆಯಲ್ಲಿ ಪ್ರತಿನಿಧಿಗಳೇ ನಿರ್ಣಾಯಕರಾಗಿದ್ದು, ಅವರು ಕೊಡುವ ನಿರ್ಣಯ ಅಂತಿಮವಾಗಿದೆ. ಹಾಗಾಗಿ ಅವರ ಮನವೊಲಿಕೆಗೆ ಆಕಾಂಕ್ಷಿಗಳು ಮುಂದಾಗಿದ್ದಾರೆ. ಅಲ್ಲದೇ ದೇವರ ಪೋಟೋ ಕೊಟ್ಟು ಆಣೆ, ಪ್ರಮಾಣವನ್ನೂ ಮಾಡಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ.
ಚಿಹ್ನೆ ಬಗ್ಗೆ ಚರ್ಚೆ
ಡಿಸಿಸಿ ಬ್ಯಾಂಕ್ ನಲ್ಲಿ ಚುನಾವಣೆ ನಿಮಿತ್ತ ಚಿಹ್ನೆಗಳನ್ನು ಹಾಕಲಾಗಿದ್ದು, ಅಭ್ಯರ್ಥಿಗಳು ಯಾವ ಚಿಹ್ನೆ ತೆಗೆದುಕೊಳ್ಳಬೇಕೆಂಬ ಗೊಂದಲದಲ್ಲಿ ಇದ್ದರು. ಅಲ್ಲದೇ ಚಿಹ್ನೆಗಳ ಬಗ್ಗೆಯೂ ಸಾಕಷ್ಟು ಜನರು ಚರ್ಚೆಗೆ ಮುಂದಾಗಿದ್ದರು. ಬಹುತೇಕರು ಜನರಿಗೆ ಹತ್ತಿರವಾಗುವ ಚಿಹ್ನೆಗಳ ತಲಾಷೆಯಲ್ಲಿದ್ದರು. ಒಟ್ಟಾರೆ ಚುನಾವಣೆ ಮೊದಲ ದಿನ ಅಭ್ಯರ್ಥಿಗಳು ವಾರ್ಮ್ ಅಪ್ ನಲ್ಲಿದ್ದು, ಚರ್ಚೆಯಲ್ಲಿ ತೊಡಗಿದ್ದು ಕಂಡು ಬಂತು.