ದಾವಣಗೆರೆ : ದಾವಣಗೆರೆ ಡಿಸಿಸಿ ಬ್ಯಾಂಕ್ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಶನಿವಾರ ಅಂತಿಮ ಮತದಾರರ ಪಟ್ಟಿಯನ್ನು ಸೂಚನಾ ಫಲಕಕ್ಕೆ ಹಾಕಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಕೆಲವೇ ನಿಮಿಷಗಳಲ್ಲಿ ಸೂಚನಾ ಫಲಕದಲ್ಲಿದ್ದ ಮತದಾರರಪಟ್ಟಿಯನ್ನು ಹರಿದು ಹಾಕಲಾಗಿದೆ. ಅಲ್ಲದೇ ಈ ಸೂಚನಾಫಲಕವನ್ನು ಎಂಡಿ ನಂಜುಡೇಗೌಡ ರೂಮಿನಲ್ಲಿ ಈ ಫಲಕವನ್ನು ಇಡಲಾಗಿದೆ ಎಂಬ ಮಾಹಿತಿ ಇದೆ.
ಹೈಕೋರ್ಟ್ ಎಂಟುವಾರಗಳಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಮಾಡಲು ಆದೇಶಿಸಿದೆ. ಅಂತೆಯೇ ಈಗಾಗಲೇ ಆರುವಾರಗಳು ಮುಕ್ತಾಯಗೊಂಡಿವೆ. ಹಾಗಾಗಿ ಶನಿವಾರ ಅಂತಿಮ ಮತದಾರರಪಟ್ಟಿಯನ್ನು ಸೂಚನ ಫಲಕಕ್ಕೆ ಅಂಟಿಸಲಾಗಿತ್ತು.
ಆ ಒಂದು ಕರೆ ಫಲಕವನ್ನು ಒಳಗೆ ಇಡಿಸಿತು
ಸೂಚನಾಫಲಕಕ್ಕೆ ಮುಕ್ಕಾಲು ಭಾಗ ಅಂತಿಮ ಮತದಾರರ ಪಟ್ಟಿಯನ್ನು ಅಂಟಿಸಲಾಗಿತ್ತು. ಇನ್ನೇನೂ ಕಾಲು ಭಾಗ ಅಂತಿಮ ಮತದಾರರ ಪಟ್ಟಿಯನ್ನು ಅಂಟಿಸಬೇಕಿತ್ತು. ಅಷ್ಟರೊಳಗೆ ಕರೆಯೊಂದು ಎಂಡಿ ನಂಜುಡೇಗೌಡ ಬಂದಿದೆ. ಈ ಹಿನ್ನೆಲೆಯಲ್ಲಿ ಸೂಚನಾ ಫಲಕದಲ್ಲಿನ ಹಾಳೆ ಹರಿದಿದ್ದಾರೆ. ಬಳಿಕ ಎಂಡಿ ದಾವಣಗೆರೆ ಜಿಲ್ಲಾಧಿಕಾರಿ ವೆಂಕಟೇಶ್ ಬಳಿ ತೆರಳಿದ್ದಾರೆ. ಅಲ್ಲದೇ ಸೂಚನಾ ಫಲಕಕ್ಕೆ ಅಂಟಿಸಿದ್ದ ಅಂತಿಮ ಮತದಾರರ ಪಟ್ಟಿಯ ದಾಖಲೆ ಲಭ್ಯವಾಗಿದೆ.
ಸಿಸಿ ಟಿವಿ ಕ್ಯಾಮೆರಾ ಚೆಕ್ ಮಾಡಲಿ
ಅಂತಿಮ ಮತದಾರರ ಪಟ್ಟಿ ಹರಿದು ಹಾಕಿರುವ ಬಗ್ಗೆ ಯಾರನ್ನಾದರೂ ದಾಖಲೆ ಕೇಳಿದರೆ ನಾವು ಇಂದು ಅಂತಿಮ ಮತದಾರರ ಪಟ್ಟಿಯನ್ನೇ ಹಾಕಿಲ್ಲ. ಸ್ವಲ್ಪ ಕರೆಕ್ಷನ್ ಇತ್ತು ಎನ್ನುತ್ತಾರೆ. ಆದರೆ ಇದಕ್ಕೆ ಸಾಕ್ಷಿ ಎನ್ನುವಂತೆ ಸೂಚನಾ ಫಲಕದಲ್ಲಿ ಹಾಕಿರುವ ಮತದಾರರ ಪಟ್ಟಿ ಹರಿದಿರುವುದಕ್ಕೆ ಅಲ್ಲಿನ ತುಂಡುಗಳು ಸಾಕ್ಷಿಯಾಗಿದೆ.
ಉತ್ತರ ಕೊಡದ ಆಡಳಿತಾಧಿಕಾರಿ ಎಡಿಸಿ ಲೋಕೇಶ್ ಪಲಾಯನ
ಸದ್ಯ ಎಡಿಸಿ ಲೋಕೇಶ್ ಡಿಸಿಸಿ ಬ್ಯಾಂಕ್ ನ ಆಡಳಿತಾಧಿಕಾರಿಯಾಗಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಯಾಕೆ ತೆಗೆದು ಹಾಕಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕೊಡದೆ ಪಲಾಯನವಾದರು. ಅವರು ಉತ್ತರ ಕೊಡದೇ ಇರೋದು ನಾನಾ ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಈ ಘಟನೆ ಹಿಂದೆ ಇವರು ಕೂಡಾ ಇದ್ದಾರಾ ಎಂಬ ಅನುಮಾನ ಶುರುವಾಗಿದೆ.
ಚುನಾವಣೆಗೆ ಕೇವಲ ಎರಡು ವಾರ ಬಾಕಿ
ರಾಜ್ಯ ಹೈ ಕೋಟ್ ನ ರಿಟ್ಪಿಟಿಷನ್ ಮೇರೆಗೆ ಇದೇ ಜ.25 ರಂದು ನಿಗಧಿಯಾಗಿದ್ದ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಚುನಾವಣೆಗೆ ಕೇವಲ 2 ವಾರ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಪ್ರಕಟಗೊಂಡಿದ್ದ ಅಂತಿಮ ಮತದಾರರ ಪಟ್ಟಿ ಸೂಚನಾ ಫಲಕದಲ್ಲಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಮಾಯವಾಗಿದೆ.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಸೂಚನಾಫಲಕದಲ್ಲಿ ಬ್ಯಾಂಕ್ ನ 13 ಕ್ಷೇತ್ರಗಳಿಗೆ ಸಂಬಂಧಿಸಿದ ಅಂತಿಮ ಮತದಾರರ ಪಟ್ಡಿಯನ್ನು ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರಕಟಿಸಲಾಗಿತ್ತು.
ಆದರೆ ಕೆಲವೇ ನಿಮಿಷಗಳಲ್ಲಿ ಈ ಪಟ್ಟಿಯನ್ಜು ಹರಿದುಹಾಕಿರುವುದಲ್ಲದೇ ಈ ಸೂಚನಾ ಫಲಕವನ್ನು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರು ತಮ್ಮ ಕೊಠಡಿಗೆ ಇಡೀ ಸೂಚನಾಫಲಕವನ್ನು ಸ್ಥಳಾಂತರಿಸಿ ಬೀಗ ಹಾಕಿದ್ದಾರೆ.
ಪೇಪರ್ ತುಣಕುಗಳು ಸಾಕ್ಷಿ
ಮತದಾರರ ಪಟ್ಟಿ ಹರಿದು ಹಾಕಿರುವುದಕ್ಕೆ ಬ್ಯಾಂಕಿನ ಸೂಚನಾ ಫಲಕದ ಕೆಳಗೆ ಪೇಪರ್ ತುಣುಕುಗಳು ಸಾಕ್ಷಿಯಾಗಿ ಬಿದ್ದಿವೆ. ಈ ಎಲ್ಲ ದೃಶ್ಯಾವಳಿಗಳು ಬ್ಯಾಂಕ್ ನ ಸಿಸಿ ಟಿವಿಯಲ್ಲಿ ದಾಖಲಾಗಿವೆ.
ದಾವಣಗೆರೆ ಮತ್ತು ಮೈಸೂರು ಡಿಸಿಸಿ ಬ್ಯಾಂಕ್ ನ ಆಡಳಿತ ಮಂಡಳಿಗೆ ಗರಿಷ್ಠ 8 ವಾರಗಳ ಒಳಗೆ ಚುನಾವಣಾ ನಡೆಯಬೇಕೆಂದು ಹೈ ಕೋರ್ಟ್ ವಿಭಾಗೀಯ ಪೀಠ ಆದೇಶಿಸಿತ್ತು. ದಾವಣಗೆರೆ ಜಿಲ್ಲಾ ಬ್ಯಾಂಕ್ ನ ಚುನಾವಣಾ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ಬಂದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಇದೇ ಜ.10 ರಿಂದ ಆರಂಭವಾಗಬೇಕಿತ್ತು. ಆದರೆ ಕೆಲವರ ಹಿತಾಸಕ್ತಿಯ ಒತ್ತಡಕ್ಕೆ ಮಣಿದು ಬ್ಯಾಂಕಿನ ಆಡಳಿತಾಧಿಕಾರಿ, ಚುನಾವಣಾಧಿಕಾರಿ ಮತ್ತು ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ರಿಟರ್ನಿಂಗ್ ಅಧಿಕಾರಿಗಳು ಸರ್ಕಾರದ ಒತ್ತಡಕ್ಕೆ ಮಣಿದು ಇದರಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
21 ದಿನಗಳ ಹಿಂದೆ ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಬೇಕು
ನಿಬಂಧನೆಗಳ ಪ್ರಕಾರ ಚುನಾವಣೆ ದಿನಾಂಕಕ್ಕೆ 21 ದಿನಗಳ ಹಿಂದೆ ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳ ಬೇಕು. ಆದಾಗ್ಯೂ ಸರಿಯಾದ ದಿನಾಂಕಕ್ಕೆ ಪಟ್ಟಿ ಪ್ರಕಟಗೊಂಡಿದೆಯಾದರೂ ಅದನ್ನು ಕೆಲವೇ ನಿಮಿಷಗಳಲ್ಲಿ ಹರಿದು ಹಾಕಿ ಇಡೀ ಸೂಚನಾ ಫಲಕವನ್ನೆ ಎಂಡಿ ತಮ್ಮ ಕಚೇರಿಗೆ ಸ್ಥಳಾಂತರಿಸಿ ಬೀಗ ಕೂಡ ಹಾಕಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಎಂಡಿ ನಂಜುಡೇಗೌಡ ವಿರುದ್ಧ ಆಕ್ರೋಶ
ಈಗಾಗಲೇ ಚುನಾವಣಾ ಆಕಾಂಕ್ಷೆಗಳು ಅಂತಿಮ ಮತದಾರರ ಪಟ್ಟಿ ಕೋರಿ ನಿಗಧಿತ ಶುಲ್ಕತುಂಬಿ ಅರ್ಜಿ ಸಲ್ಲಿಸಿದ್ದರು. ಇದೀಗ ಅಂಟಿಸಿದ ಪಟ್ಟಿಯನ್ನೆ ಹರಿದು ಹಾಕಿರುವುದು ಆಕಾಂಕ್ಷೆಗಳು ಚುನಾವಣಾಧಿಕಾರಿ ಸೇರಿದಂತೆ ಎಂಡಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಚುನಾವಣೆ ಮುಂದೂಡುವ ತಂತ್ರ ಇದಾಗಿದ್ದರೂ, ಹೈಕೋರ್ಟ್ ನ ಆದೇಶ ಪಾಲಿಸಲೇ ಬೇಕು.….
ಕೋಟ್
ಡಿಸಿಸಿ ಬ್ಯಾಂಕ್ ಚುನಾವಣೆ ಇರುವುದಷ್ಟೇ ಗೊತ್ತು. ಅಂತಿಮ ಮತದಾರರಪಟ್ಟಿ ಹಾಕಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ನಮ್ಮ ಬಿಜೆಪಿ ಬೆಂಬಲಿತ ಆಕಾಂಕ್ಷಿಗಳು ಗಮನಕ್ಕೆ ತಂದರೆ ಜಿಲ್ಲಾಧಿಕಾರಿಗಳ ಬಗ್ಗೆ ಚರ್ಚಿಸುತ್ತೇನೆ.
_ ಜಿ.ಎಂ.ಸಿದ್ದೇಶ್ವರ, ದಾವಣಗೆರೆ ಎಂಪಿ
ಚುನಾವಣೆ ಮುಂದೂಡಲು ಯಾವುದೇ ತಂತ್ರ ಅನುಸರಿಸಿದರೂ ಕೋರ್ಟ್ ಆದೇಶ ಪಾಲಿಸಲೇಬೇಕು. ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದ್ರೆ ನ್ಯಾಯಂಗ ನಿಂದನೆ ಆಗುತ್ತದೆ. ಆದ್ದರಿಂದ ನಮ್ಮ ನಾಯಕರ ಬಳಿ ಈ ಘಟನೆ ಬಗ್ಗೆ ಚರ್ಚಿಸುತ್ತೇನೆ.
-ಮುರುಗೇಶ್, ಡಿಸಿಸಿ ಬ್ಯಾಂಕ್ ಚುನಾವಣೆ ಸ್ಪರ್ಧಾಳು