ದಾವಣಗೆರೆ : ಜನಪರ ಕಾಳಜಿಯ ವಿಜ್ಞಾನಿ, ದಾರ್ಶನಿಕ ಪ್ರೊ.ಕೆ.ಸಿದ್ದಪ್ಪ, ಬಹುಮುಖ ಪ್ರತಿಭೆಯ ಕಲಾವಿದ ಎಚ್.ಬಿ.ಮಂಜುನಾಥ ಹಾಗೂ ಕಾಯಕಯೋಗಿ, ಸಮಾಜಮುಖಿ ಚಿಂತಕ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಅವರಿಗೆ ಈ ಬಾರಿ ದಾವಣಗೆರೆ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.
ದಾವಿವಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ವಿವಿಯ ಕುಲಪತಿ ಪ್ರೊ.ಡಿ.ಬಿ. ಕುಂಬಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಜನಪರ ಕಾಳಜಿಯ ವಿಜ್ಞಾನಿ, ದಾರ್ಶನಿಕ ಪ್ರೊ.ಕೆ.ಸಿದ್ದಪ್ಪ: ಬೋಧನೆ, ಸಂಶೋಧನೆ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಡಾ.ಕೆ.ಸಿದ್ದಪ್ಪ ಅವರದು ವಿಶಿಷ್ಟ ವ್ಯಕ್ತಿತ್ವ. ಜ್ಞಾನ, ವಿಜ್ಞಾನಗಳ ಮೂಲಕ ನವ ಸಮಾಜ ನಿರ್ಮಾಣದ ದೂರದೃಷ್ಟಿಯ ಚಿಂತಕರು. ವಿಜ್ಞಾನದ ಜೊತೆ ಅಂತರಶಿಸ್ತೀಯ ಅಧ್ಯಯನಕ್ಕೆ ಚಾಲನೆ ನೀಡಿದ ಸಾಂಘಿಕ ಶಕ್ತಿಯ ಪ್ರವರ್ತಕ. ಅಣು ವಿಜ್ಞಾನಿಯಾದರೂ ಮಾನವೀಯ ಮೌಲ್ಯಗಳಿಗೆ, ಸಮುದಾಯ ಅಭಿವೃದ್ಧಿಯನ್ನು ಉಸಿರಾಗಿಸಿಕೊಂಡು ತಮ್ಮದೇ ಛಾಪು ಮೂಡಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ.
ಡಾ.ಕೆ.ಸಿದ್ದಪ್ಪ ಅವರು ದಾವಣಗೆರೆ ತಾಲ್ಲೂಕಿನ ಕಕ್ಕರಗೋಳ ಗ್ರಾಮದಲ್ಲಿ 1944ರ ಮಾರ್ಚ್ 18ರಂದು ಜನಿಸಿದರು. ನೂರಕ್ಕೂ ಹೆಚ್ಚು ಸದಸ್ಯರಿದ್ದ ಕೂಡು ಕುಟುಂಬದಲ್ಲಿ ಬಾಲ್ಯ ಜೀವನವನ್ನು ಕಳೆದವರು. ಆರಂಭಿಕ ಶಿಕ್ಷಣವನ್ನು ಗ್ರಾಮದ ಏಕೋಪಾಧ್ಯಾಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ, ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದರು. ಪರಮಾಣು ಮತ್ತು ವಿಕಿರಣ ವಿಷಯದಲ್ಲಿ ಸಂಶೋಧನೆ ನಡೆಸಿ ಆಂಧ್ರಪ್ರದೇಶ ವಿಶ್ವವಿದ್ಯಾಲಯದ ಪಿಎಚ್.ಡಿ ಪದವಿ ಪಡೆದರು. ಬೆಂಗಳೂರು ಮತ್ತು ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ 41 ವರ್ಷ ಬೋಧಕರಾಗಿ, ಅದರಲ್ಲಿ 31 ವರ್ಷ ಆಡಳಿತಗಾರನಾಗಿ ಅನುಭವನವಿದೆ. ಇವರ ಮಾರ್ಗದರ್ಶನದಲ್ಲಿ 14 ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಪಡೆದಿದ್ದಾರೆ. 300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಅಂತರರಾಷ್ಟ್ರೀಯ ಪ್ರತಿಷ್ಠಿತ ಜರ್ನಲ್ಗಳಲ್ಲಿ ಪ್ರಕಟವಾಗಿವೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮೈಕ್ರೋಟ್ರಾನ್ ಸೆಂಟರ್ ಸ್ಥಾಪಿಸಿ, ನಿರ್ದೇಶಕರಾಗಿ ಅಂತರಶಿಸ್ತೀಯ ಸಂಶೋಧನೆಗೆ ಆದ್ಯತೆ ನೀಡಿದರು. ಹಲವಾರು ಸಂಶೋಧನಾ ಸಂಸ್ಥೆಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಅಮೆರಿಕ, ಜರ್ಮನಿ, ಸ್ವೀಡನ್, ಫಿನ್ಲ್ಯಾಂಡ್, ಇಟಲಿ, ಯುಗೊಸ್ಲಾವಿಯ ಸೇರಿದಂತೆ ಹಲವು ದೇಶಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ, ಸಂದರ್ಶಕ ವಿಜ್ಞಾನಿಯಾಗಿ ಭೇಟಿ ನೀಡಿದ್ದಾರೆ.
ಪ್ರೊ.ಸಿದ್ದಪ್ಪ ಅವರು 1999-2002ರ ವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಅವಧಿಯಲ್ಲಿ ಆಡಳಿತದಲ್ಲಿ ಶಿಸ್ತು ತಂದು, ಕಂಪ್ಯೂಟರ್ ಕೋರ್ಸ್ ಕಡ್ಡಾಯಗೊಳಿಸಿದರು. ವಿಶ್ವವಿದ್ಯಾಲಯ ಆವರಣದಲ್ಲಿ 5 ಲಕ್ಷಕ್ಕೂ ಹೆಚ್ಚು ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಅಭಿವೃದ್ಧಿಪಡಿಸಿದರು. ಇವರ ಸೇವೆಯನ್ನು ಗುರುತಿಸಿ ಅಮೆರಿಕದ ಸಂಸ್ಥೆಗಳು, ಯುಜಿಸಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು ಪ್ರಶಸ್ತಿ ನೀಡಿ ಗೌರವಿಸಿವೆ. ಜೆಎಸ್ಎಸ್ ಫೌಂಡೇಶನ್ ಫಾರ್ ಸೈನ್ಸ್ ಅಂಡ್ ಸೊಸೈಟಿಯ ಗೌರವ ನಿರ್ದೇಶಕರಾಗಿ ಮತ್ತು ಪ್ರಸ್ತುತ ಕರ್ನಾಟಕ ಅಸೋಸಿಯೇಶನ್ ಫಾರ್ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ.ಸಿದ್ದಪ್ಪ ಅವರು ಕುಲಪತಿಗಳಾಗಿ, ವಿಜ್ಞಾನಿಯಾಗಿ, ಸಂಶೋಧಕರಾಗಿ, ಶಿಕ್ಷಕರಾಗಿ, ಸಮಾಜ ಸೇವಕರಾಗಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ, ಮೂಲ ವಿಜ್ಞಾನಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ದಾವಣಗೆರೆ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಗೌರವಿಸಿದೆ.
ಬಹುಮುಖ ಪ್ರತಿಭೆಯ ಕಲಾವಿದ ಎಚ್.ಬಿ.ಮಂಜುನಾಥ:
ಶ್ರೀ ಎಚ್.ಬಿ.ಮಂಜುನಾಥ ಅವರು ‘ಸರಳ ಜೀವನ, ಸಮೃದ್ಧ ವಿಚಾರ’ ಎಂಬ ತತ್ವ ಪಾಲನೆಯ ಮೂಲಕ ಪ್ರಸಿದ್ಧಿ ಪಡೆದಿರುವ ಪ್ರತಿಭೆಯ ವ್ಯಕ್ತಿ. ಕಲೆ, ಸಾಹಿತ್ಯ, ಸಂಸ್ಕೃತಿಗಳ ಒಡನಾಟದಲ್ಲಿಯೇ ಬದುಕಿ, ನೂರಾರು ಜನರ ಬದುಕಿಗೆ ಆಸರೆಯಾದ ಮಾನವತಾವಾದಿ.
ವೃತ್ತಿಯಲ್ಲಿ ಮಂಜುನಾಥ ಅವರು ಛಾಯಾಚಿತ್ರಗ್ರಾಹಕ, ವ್ಯಂಗ್ಯಚಿತ್ರಕಾರ, ಪತ್ರಕರ್ತರು. ಪ್ರವೃತ್ತಿಯಲ್ಲಿ ಸಮಾಜ ಸೇವಕ, ಮಾರ್ಗದರ್ಶಕ, ಪರಿಸರವಾದಿ, ಸಂಘಟಕ, ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ.
ಶ್ರೀಯುತರು 23ನೇ ಡಿಸೆಂಬರ್ 1954ರಲ್ಲಿ ಹೆಸರಾಂತ ಚಿತ್ರಕಲಾವಿದರೂ, ಶ್ರೇಷ್ಠ ಛಾಯಾಗ್ರಾಹಕರೂ ಆಗಿದ್ದ ಎಚ್.ಭುಜಂಗರಾಯಶಾಸ್ತ್ರಿ ಮತ್ತು ಬಿ.ಲಕ್ಷ್ಮೀದೇವಮ್ಮ ಅವರ ಸುಪುತ್ರನಾಗಿ ದಾವಣಗೆರೆಯಲ್ಲಿ ಜನಿಸಿದರು. ಬಿ.ಕಾಂ. ಪದವೀಧರರಾದ ಅವರು ‘ನಡೆದಾಡುವ ಎನ್ಸೈಕ್ಲೋಪಿಡಿಯ’ ಎಂದೇ ಖ್ಯಾತರು. ಸುಮಾರು 50 ವರ್ಷಗಳಿಂದ ವ್ಯಂಗ್ಯಚಿತ್ರ ರಚಿಸುತ್ತಿದ್ದಾರೆ. ನಾಡಿನ ಪ್ರಸಿದ್ಧ ಹಿರಿಯ ವ್ಯಂಗ್ಯಚಿತ್ರಕಾರರು, ಪತ್ರಿಕಾಬರಹಗಾರರು, ಶ್ರೇಷ್ಠ ವಾಗ್ಮಿಗಳು, ಪರಿಸರವಾದಿಯೂ ಆಗಿರುವ ಅವರು ಕಳೆದ ಐದು ದಶಕಗಳಿಂದ ವಕ್ರ ರೇಖೆಗಳಿಂದಲೇ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸ್ಥಾಸ್ಥ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ ಮೊದಲಾದ ದಿನಪತ್ರಿಕೆಗಳಲ್ಲಿ; ನಿಯತಕಾಲಿಕೆಗಳಲ್ಲಿ ಸುಮಾರು 17 ಸಾವಿರ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. ಪರಿಸರ ಮಾಲಿನ್ಯ, ಭ್ರಷ್ಟಾಚಾರ, ವರದಕ್ಷಿಣೆ ಮದ್ಯಪಾನದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ವ್ಯಂಗ್ಯಚಿತ್ರಗಳನ್ನು ಬಿಡಿಸಿದ್ದಾರೆ. ದೇಶ ವಿದೇಶಗಳಲ್ಲಿ 150ಕ್ಕೂ ಹೆಚ್ಚು ಏಕವ್ಯಕ್ತಿ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದ್ದಾರೆ. 14 ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಸೋವಿಯತ್ ರಷ್ಯಾ, ತಾಷ್ಕೆಂಟ್, ಉಜ್ಬೇಕಿಸ್ತಾನ, ಕಿಯೇವ್ ಉಕ್ರೇನ್, ಸೋಚಿ, ಬ್ಲಾಕ್ ಸೀ ಕೋಸ್ಟ್, ಪಾಕಿಸ್ತಾನದ ಕರಾಚಿಗೆ ಭೇಟಿ ನೀಡಿ, ವ್ಯಂಗ್ಯಚಿತ್ರ ಪ್ರದರ್ಶಿಸಿದ್ದಾರೆ.
ಭಾಷೆ, ಸಂಸ್ಕೃತಿ, ಇತಿಹಾಸ, ಕಲೆ, ದೇಹದಾನ, ನೇತ್ರ ಸಂರಕ್ಷಣೆ, ಅಧ್ಯಾತ್ಮ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ 1800ಕ್ಕೂ ಉಪನ್ಯಾಸ ನೀಡಿದ್ದಾರೆ. ದಾವಣಗೆರೆಯಲ್ಲಿ 30 ವರ್ಷಗಳ ಹಿಂದೆ ಇವರೇ ಸ್ಥಾಪಿಸಿರುವ ಹ್ಯೂಮರ್ ಕ್ಲಬ್ ಮೂಲಕ 1500ಕ್ಕೂ ಹೆಚ್ಚು ಸದಭಿರುಚಿಯ ಹಾಸ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೈಕಲ್ ಸವಾರಿ ಮಾಡಿ ಪರಿಸರ ಜಾಗೃತಿ ಮೂಡಿಸಿ ದಾವಣಗೆರೆ ನಗರದಲ್ಲಿ ‘ಸೈಕಲ್ ಮೇಯರ್’ ಎಂದೇ ಖ್ಯಾತರಾಗಿದ್ದಾರೆ.
ಮಂಜುನಾಥ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಪರಿಷತ್ತು, ಪ್ರೆಸ್ ಕ್ಲಬ್, ನಗರಸಭೆ ಸೇರಿದಂತೆ ಹಲವು ಸಂಸ್ಥೆಗಳು ಸನ್ಮಾನಿಸಿವೆ.
ಎಚ್.ಬಿ.ಮಂಜುನಾಥ ಅವರು ಸಮಾಜ ಸೇವೆ, ಪತ್ರಿಕಾ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಲ್ಲಿಸಿರುವ ಸಮಾಜಮುಖಿ ಸೇವೆಯನ್ನು ಗುರುತಿಸಿ ದಾವಣಗೆರೆ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಗೌರವಿಸಿದೆ.
ಕಾಯಕಯೋಗಿ, ಸಮಾಜಮುಖಿ ಚಿಂತಕ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ:
ಭಾರತದ ಪ್ರತಿಷ್ಠಿತ ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಗೌರವಾನ್ವಿತ ನ್ಯಾ.ಡಾ.ಶಿವರಾಜ ವಿ. ಪಾಟೀಲ ಅವರು ಈ ರಾಷ್ಟ್ರ ಕಂಡ ಅದಮ್ಯ ಚೇತನ. ಸರಳ ಸಜ್ಜನಿಕೆಯ ಸಾಕಾರಮೂರ್ತಿ. ಪರಿಶುದ್ಧ ಜೀವನ ನಡೆಸಿ, ಬದುಕಿನ ಮೌಲ್ಯಗಳ ಔನ್ನತ್ಯವನ್ನು ಕಂಡ ಪ್ರಾಂಜಲ ಮನಸ್ಸಿಗರು. ಸತ್ಯಶುದ್ಧ ಪ್ರಾಮಾಣಿಕ ಕಾಯಕದೊಂದಿಗೆ ನ್ಯಾಯರತ್ನವೆಂದೇ ನ್ಯಾಯಾಂಗ ಕ್ಷೇತ್ರದಲ್ಲಿ ಖ್ಯಾತರಾದವರು.
ಪ್ರಾಧ್ಯಾಪಕರಾಗಿ, ನ್ಯಾಯಶಾಸ್ತ್ರಜ್ಞರಾಗಿ, ಮಾನವತಾವಾದಿಯಾಗಿ, ಶ್ರೇಷ್ಠ ಬರಹಗಾರರಾಗಿ, ಆಧ್ಯಾತ್ಮಿಕ ಚಿಂತಕರಾಗಿ ಕನ್ನಡ ನಾಡಿನ ಹಿರಿಮೆಯನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದವರು.
ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರದು ಹಿಂದುಳಿದ ಪ್ರದೇಶವೆಂಬ ಹಣೆ ಪಟ್ಟಿ ಹೊತ್ತ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮಲದಕಲ್ ಎಂಬ ಕುಗ್ರಾಮ. ಶ್ರೀ ವಿರುಪಣ್ಣ ಹಾಗೂ ಮಲ್ಲಮ್ಮ ದಂಪತಿಯ ಸುಪುತ್ರರಾಗಿ 1940ರ ಜನವರಿ 12ರಂದು ಜನಿಸಿದರು. ಕೃಷಿಕ ಕುಟುಂಬದಲ್ಲಿ ಜನಿಸಿ, ವಾರಾನ್ನ ಮಾಡಿ, ಅನೇಕ ಕಷ್ಟ ಕಾರ್ಪಣ್ಯಗಳ ನಡುವೆ ವಿದ್ಯಾಭ್ಯಾಸ ಮಾಡಿ ಪರಿಪೂರ್ಣರಾಗಿ ತಮ್ಮ ಗುರಿಯನ್ನು ತಲುಪಿದವರು. ಶ್ರದ್ಧೆ, ಜೀವನಪ್ರೀತಿ ಹಾಗೂ ಆತ್ಮವಿಶ್ವಾಸವೊಂದಿದ್ದರೆ ಎಂತಹ ಪ್ರತಿಕೂಲ ಸನ್ನಿವೇಶಗಳೂ ಅಡ್ಡಿಯಾಗಲಾರವು ಎಂಬುದಕ್ಕೆ ನ್ಯಾಯಮೂರ್ತಿ ಪಾಟೀಲರು ಅವರು ಸಾಕ್ಷಾತ್ ನಿದರ್ಶನರಾಗಿದ್ದಾರೆ.
ಶ್ರೀಯುತರು ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಯಚೂರಿನಲ್ಲಿ ಪ್ರೌಢಶಿಕ್ಷಣವನ್ನು, ಕಾನೂನು ಪದವಿಯನ್ನು ಗುಲ್ಬರ್ಗ (ಕಲಬುರ್ಗಿ)ದಲ್ಲಿ ಪಡೆದಿದ್ದಾರೆ. ತಾವು ಕಲಿತ ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ವೃತ್ತಿಜೀವನಕ್ಕೆ ಕಾಲಿರಿಸಿದವರು. 1962ರಿಂದ ನ್ಯಾಯವಾದಿಯಾಗಿ ಸೇವೆಯನ್ನು ಆರಂಭಿಸಿ, ಕರ್ನಾಟಕ, ತಮಿಳುನಾಡು, ರಾಜಸ್ತಾನ ರಾಜ್ಯಗಳ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ, ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ರಾಷ್ಟ್ರ ಮಟ್ಟದಲ್ಲಿ ಅಪಾರ ಯಶಸ್ಸನ್ನು ಪಡೆದಿದ್ದಾರೆ. ಇವರ ನ್ಯಾಯಾಂಗ ದೃಷ್ಟಿ ಹಾಗೂ ನೀಡಿದ ತೀರ್ಮಾನಗಳು ಮಾನವೀಯ ನೆಲೆಯಲ್ಲಿ ಸಾಮಾಜಿಕ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರ ವಹಿಸಿವೆ. ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತಿಯಾದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ, ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2ಜಿ ಸ್ಪೆಕ್ಟ್ರಮ್ ತನಿಖೆ ಏಕವ್ಯಕ್ತಿ ಸಮಿತಿಯ ಸದಸ್ಯರಾಗಿ, ಕರ್ನಾಟಕದಲ್ಲಿ ಬಾಲ್ಯವಿವಾಹ ತಡೆಗಟ್ಟುವ ಕೋರ್ ಸಮಿತಿ ಅಧ್ಯಕ್ಷರಾಗಿ, ಕರ್ನಾಟಕ ಲೋಕಾಯುಕ್ತರಾಗಿ ಕಳಂಕರಹಿತವಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸಾಹಿತ್ಯ ಕ್ಷೇತ್ರಕ್ಕೂ ಶ್ರೀಯುತರ ಕೊಡುಗೆ ಅಪಾರವಾಗಿದೆ. ‘ಶರಣಬಸವೇಶ್ವರ ಚರಿತ್ರೆ’, ‘ಮುಂಜಾವಿಗೊಂದು ನುಡಿ ಕಿರಣ’, ‘ಅನುಭಾವದ ನುಡಿಗಳು’, ‘ಶಿವ ನುಡಿಗಳು’, ‘ಮಾನವ ಹಕ್ಕುಗಳ ಚಿಂತನೆಗಳು’, ‘ಹುಮಿಲಿಟಿ, ಹುಮ್ಯಾನಿಟಿ ಅಂಡ್ ಹುಮನ್ ರೈಟ್ಸ್’, ‘ವಡ್ರ್ಸ್ ಆಫ್ ವಿಸಡಂ’ ಹಾಗೂ ‘ಟೈಮ್ ಸ್ಪೆಂಟ್ ಅಂಡ್ ಡಿಸ್ಟೆನ್ಸ್ ಟ್ರಾವೆಲ್ಲ್ಡ್’ (ಆತ್ಮಕಥನ) ಇವು ಅವರ ಸೃಜನಶೀಲ ಸಾಹಿತ್ಯದ ಮೌಲಿಕ ಕೃತಿಗಳಾಗಿವೆ. ಶ್ರೀಯುತರ ಸೇವೆಗೆ ಬಸವಶ್ರೀ, ಕಾಯಕರತ್ನ, ಫ.ಗು.ಹಳಕಟ್ಟಿ ಶ್ರೀ, ರಾಷ್ಟ್ರೀಯ ಕನ್ನಡರತ್ನ, ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ.
ಶ್ರೀಯುತರು ನ್ಯಾಯಾಂಗ ಕ್ಷೇತ್ರಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆ, ಶೈಕ್ಷಣಿಕ, ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಪರಿಗಣಿಸಿ ದಾವಣಗೆರೆ ವಿಶ್ವವಿದ್ಯಾನಿಲಯವು ಶ್ರೀಯುತರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿ ಗೌರವಿಸಿದೆ.