ದಾವಣಗೆರೆ : ದಾವಣಗೆರೆ ದಕ್ಷಿಣ ಇದೊಂದು ಹಳೆ ಊರು, ತಾಯಿ ದುಗ್ಗಮನ ತವರು ಮನೆ, ಪುಟ್ಟದಾದ ರೋಡ್, ಜಟ್ಟಿಗಳ ಹೆಚ್ಚೇ ಇರುವ ಈ ಊರಿನಲ್ಲಿ ಅಲ್ಪ ಸಂಖ್ಯಾತರು ತಮ್ಮದೇ ಆದ ಭದ್ರ ಕೋಟೆ ಕಟ್ಟಿದ್ದಾರೆ. ಈ ಕಾರಣದಿಂದ ಇಲ್ಲಿ ಕಾಂಗ್ರೆಸ್ ತನ್ನ ಪಾರುಪಾತ್ಯ ಸಾಧಿಸಿದೆ. ಆದರೆ ಕಮಲ ಪಾತ್ರ ತನ್ನ ಅಧಿಪತ್ಯ ಸಾಧಿಸಲು ಒದ್ದಾಡುತ್ತಿದೆ.

ಮ್ಯಾಂಚೆಸ್ಟರ್ ಆಫ್ ಕರ್ನಾಟಕ ಎಂದೇ ಖ್ಯಾತಿಯಾಗಿದ್ದ ದಾವಣಗೆರೆಯ ಹಳೇ ಊರಿನಲ್ಲಿ ಕಾರ್ಮಿಕರೇ ಯಥೇಚ್ಛವಾಗಿ ನೆಲೆಸಿದ್ದರಿಂದ ಸಹಜವಾಗಿಯೇ ಈ ಹಿಂದೆ ಕಮ್ಯುನಿಸ್ಟ್ ಪಕ್ಷ ಭದ್ರ ನೆಲೆ ಕಂಡುಕೊಂಡಿತ್ತು. ಕಾಲಕ್ರಮೇಣ ಜವಳಿ ಉದ್ಯಮ ನೆಲೆ ಕಚ್ಚಿದ ಬಳಿಕ ನಿಧಾನವಾಗಿ ಇಲ್ಲಿ ಕಾಂಗ್ರೆಸ್ ನೆಲೆಯೂರಿದೆ. 2008 ರಲ್ಲಿ ಅಸ್ತಿತ್ವಕ್ಕೆ ಬಂದಿರುವ ದಕ್ಷಿಣ ವಿಧಾನಸಭಾ 2023ರವರೆಗೆ ನಡೆದ ಎಲ್ಲ ನಾಲ್ಕು ಚುನಾವಣೆಗಳಲ್ಲೂ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದ್ದಾರೆ. ಆದರೆ, ಪ್ರತಿ ಬಾರಿಯು ಇಲ್ಲಿ ಕಮಲದ ಹೂವನ್ನು ಅರಳಿಸಲು ಬಿಜೆಪಿ ಪ್ರಯತ್ನ ಪಟ್ಟರೂ ಆಗುತ್ತಿಲ್ಲ.

ವ್ಯಾಪ್ತಿಯ ಚಿತ್ರಣ

ಅಲ್ಪಸಂಖ್ಯಾತ , (ಮುಸ್ಲಿಂ) ಮತದಾರರೇ  ಇಲ್ಲಿ ನಿರ್ಣಾಯಕವಾಗಿದ್ದು 2008ರಲ್ಲಿ ನಡೆದ ಚೊಚ್ಚಲ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪರಿಗೆ ತೀವ್ರ ಪೈಪೋಟಿ ನೀಡಿದ್ದ, ಬಿಜೆಪಿಯ ಯಶವಂತರಾವ್ ಕೇವಲ 6,358 ಮತಗಳಿಂದ ಸೋಲುಂಡಿದ್ದರು. ಬಳಿಕ ನಡೆದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್‌ನ ಮತಗಳಿಕೆ ಪ್ರಮಾಣವೂ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತಲೇ ಬಂದಿದೆ. ಬಿಜೆಪಿ ಮತಗಳಿಕೆಯು ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ಇಲ್ಲಿ ಗಟ್ಟಿನೆಲೆ ಕಂಡುಕೊಳ್ಳಲಾಗಿಲ್ಲ.

ದಾವಣಗೆರೆ ದಕ್ಷಿಣ ಕ್ಷೇತ್ರ

2013ರಲ್ಲಿ ನಡೆದ ರಾಜಕೀಯ ಬೆಳವಣಿಗೆಯಿಂದ ದಕ್ಷಿಣದಲ್ಲಿ 3ನೇ ಸ್ಥಾನಕ್ಕೆ ತಳಲ್ಪಟ್ಟ ಬಿಜೆಪಿಯ ಬಿ.ಲೋಕೇಶ್ 21,282 ಮತಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. 26,162 ಮತ ಗಳಿಸಿದ್ದ ಜೆಡಿಎಸ್‌ನ ಸೈಯ್ಯದ್ ಸೈಫುಲ್ಲಾರನ್ನು ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ 40,158 ಮತಗಳ ಅಂತರದಿಂದ ಸೋಲುಣಿಸಿದ್ದರು. 2018ರಲ್ಲಿ ಬಿಜೆಪಿಯ ಯಶವಂತರಾವ್‌ರನ್ನ 15,884 ಮತಗಳ ಅಂತರದಿಂದ ಮಣಿಸಿದ್ದ ಶಾಮನೂರು, ಕೆಲ ತಿಂಗಳ ಹಿಂದಷ್ಟೇ ನಡೆದ 2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಜಿ. ಅಜಯ್ ಕುಮಾರ್ ಅವರನ್ನು 27,888 ಮತಗಳ ಅಂತರದಿಂದ ಸೋಲಿಸಿ ಹ್ಯಾಟ್ರಿಕ್ ಗೆಲುವು ಸಾಧಿ ಸಿದ್ದರು.

ದಕ್ಷಿಣದಲ್ಲಿ 20240 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಾ.ಪ್ರಭಾ ಮಲ್ಲಿಕಾರ್ಜುನ್‌ಗೆ ಮುನ್ನಡೆ ಸಿಗಬಹುದೆಂಬ ವಿಶ್ಲೇಷಣೆ ನಡೆಯುತ್ತಿದೆ. ಆದರೆ, ಸಂಸತ್ ಚುನಾವಣೆ ಬಂದಾಗ ಮತದಾರರ ಧೋರಣೆ ಬದಲಾಗಿದ್ದು, ಕಳೆದ ಬಾರಿಯ ಅಂಕಿ ಸಂಖ್ಯೆಯಿಂದ ಕಾಣುತ್ತದೆ. ಕಳೆದ ಲೋಕಸಭೆಯಲ್ಲಿ ಬಿಜೆಪಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ ಹತ್ತು ಸಾವಿರ ಹೆಚ್ಚಿನ ಮತ ಪಡೆದಿತ್ತು. ಈ ಹಿನ್ನೆಲೆಯಲ್ಲಿ ವೋಟ್ ಸೆಳೆಯಲು ಈ ಇಬ್ಬರು ನಗರ ದೇವತೆ ದೇವಸ್ಥಾನದಿಂದ ಬೃಹತ್ ರೋಡ್ ಶೋ ನಡೆಸಿದರು. 

ಇನ್ನು ಅಹಿಂದ ಟ್ರಂಪ್ ಕಾರ್ಡ್ ಮೂಲಕ ಪಕ್ಷೇತರನಾಗಿ ಸ್ಪರ್ಧಿಸಿರುವ ಜಿ.ಬಿ. ವಿನಯಕುಮಾರ್ ಯಾರ ಬುಟ್ಟಿಗೆ ಕೈ ಹಾಕುವರೆಂಬುದು ಇಲ್ಲಿನ ಕುತೂಹಲ. ಬಿಜೆಪಿ ಈ ಬಾರಿ ದಕ್ಷಿಣದಲ್ಲಿ ಮತ ಗಳಿಕೆಯನ್ನು ವೃದ್ಧಿ ಮಾಡಿಕೊಳ್ಳಲು, ಕ್ಷೇತ್ರದ ಎಲ್ಲಾ 211 ಬೂತ್ ಗಳನ್ನು ಶಕ್ತಿಶಾಲಿ ಬೂತ್ ಗಳನ್ನಾಗಿಸುವ ಟಾಸ್ಕ್ ನ್ನು ಬೂತ್ ಮಟ್ಟದ ಕಾರ್ಯಕರ್ತರಿಗೆ ನೀಡಿದೆ. ಅಲ್ಲದೆ, ಮತದಾರರನ್ನು ಸೆಳೆಯಲು ಏ.28ರಂದು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಯಿಸಿ ಚುನಾವಣಾ ಪ್ರಚಾರ ನಡೆಸಲು ಮುಂದಾಗಿದೆ.

ಪಾಲಿಕೆ ಸದಸ್ಯರ ಪಕ್ಷಾಂತರ

ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಲಿಕೆಯ 20 ವಾರ್ಡ್‌ಗಳಿವೆ. ಈ ಪೈಕಿ ಕಾಂಗ್ರೆಸ್ 11, ಬಿಜೆಪಿ 8 ಹಾಗೂ ಜೆಡಿಎಸ್ 1 ಸದಸ್ಯರ ಬಲ ಹೊಂದಿತ್ತು. ಆದರೆ, ಮೇಯರ್ ಆಯ್ಕೆ ವೇಳೆಯೇ ಈಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಸದಸ್ಯೆ ಕಾಂಗ್ರೆಸ್ ತೆಕ್ಕೆಗೆ ಸರಿದಿದ್ದಾರೆ. ಈಗ ಬಿಜೆಪಿಯ ಸೋಗಿ ಶಾಂತಕುಮಾರ್, ಎಲ್.ಡಿ. ಗೋಣೆಪ್ಪ ಸಹ ಕಮಲ ತೊರೆದು, ಕೈ ಹಿಡಿದಿದ್ದಾರೆ. ಬಿಜೆಪಿಯೊಂದಿಗೆ ಮೊದಲಿನಿಂದಲು ಗುರುತಿಸಿಕೊಂಡಿದ್ದ ಪಕ್ಷೇತರ ಸದಸ್ಯೆ ಸೌಮ್ಯ ನರೇಂದ್ರ ಸಹ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಪಾಲಿಕೆ ಸದಸ್ಯರ ಬಲ 15ಕ್ಕೆ ಏರಿಕೆಯಾಗಿದೆ. ಬಿಜೆಪಿ ಬಲ ಐದಕ್ಕೆ ಕುಸಿದಿದೆ. ಒಟ್ಟಾರೆ ಅಲ್ಪ ಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಗೆ ಬಿಜೆಪಿ ಠಕ್ಕರ್ ಕೊಡುತ್ತಾ ಕಾದು ನೋಡಬೇಕು.

ಮತದಾರರ ವಿವರ

ಪುರುಷ ಮತದಾರರು 1,09,184

ಮಹಿಳಾ ಮತದಾರರು 1,11,774

39 ಲಿಂಗತ್ವ ಅಲ್ಪಸಂಖ್ಯಾತರು

46 ಸೇವಾ ಮತದಾರರು

2,20,997 ಒಟ್ಟು ಮತದಾರರು

2023ರ ದಕ್ಷಿಣ ವಿಧಾನಸಭೆ ಫಲಿತಾಂಶ

• ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್ ) 84,298

• ಬಿ.ಜಿ. ಅಜಯಕುಮಾರ್ (ಬಿಜೆಪಿ) 56,410

• ಗೆಲುವಿನ ಅಂತರ  27,888

 ಮತದಾನ ಶೇಕಡಾವಾರು 69.08

2019ರ ದಾ.ದಕ್ಷಿಣ ಲೋಕಸಭೆ ಮತ ಹಂಚಿಕೆ

 ಜಿ.ಎಂ. ಸಿದ್ದೇಶ್ವ‌ರ್ 70,765 ಮತಗಳು

ಎಚ್.ಬಿ. ಮಂಜಪ್ಪ- 62,249ಮತಗಳು

 

.

Share.
Leave A Reply

Exit mobile version