ದಾವಣಗೆರೆ : ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ನಡುವೆ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿರುವ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಮೂರು ಪಕ್ಷಗಳಿಗೆ ಮೊದಲ ಅಗ್ನಿ ಪರೀಕ್ಷೆ ಎದುರಾಗಿದೆ. ಬಿಜೆಪಿ ನಾಯಕರು ಉತ್ಸ್ಸಾಹದಲ್ಲಿದ್ದರೆ ಕಾಂಗ್ರೆಸ್ ಆತಂಕದಲ್ಲಿದೆ. ಹಾಗಾದ್ರೆ ಎನ್‌ಡಿಎ ಕ್ಲೀನ್ ಸ್ವೀಪ್ ಮಾಡುತ್ತಾ? ಯಾವ ಪಕ್ಷದಿಂದ ಯಾರು ಅಭ್ಯರ್ಥಿ ಆಗಲಿದ್ದಾರೆ? ಈ ಕುರಿತು ಈ ಸ್ಟೋರಿ ಇಲ್ಲಿದೆ ನೋಡಿ  ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡುವೆ ವಿವಿಧ ಹಗರಣಗಳ ಕುರಿತಂತೆ ತೀವ್ರ ಆರೋಪ-ಪ್ರತ್ಯಾರೋಪ ನಡೆಯುತ್ತಿರುವ ನಡುವಲ್ಲೇ ಉಪಚುನಾವಣೆ ಘೋಷಣೆಯಾಗಿರುವುದು ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ. ಅ.25ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ನ.13ರಂದು ಚುನಾವಣೆ ನಡೆಯಲಿದ್ದು, ನಂ.23ರAದು ಮತ ಎಣಿಕೆ ನಡೆಯಲಿದೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ರಾಜೀನಾಮೆಯಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ಶಿಗ್ಗಾಂವಿ ಹಾಗೂ ಇ.ತುಕಾರಾಂ ರಾಜೀನಾಮೆಯಿಂದ ಸಂಡೂರು ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಹೀಗಾಗಿ ವೈಯಕ್ತಿಕವಾಗಿ ಈ ಕ್ಷೇತ್ರಗಳು ಹೆಚ್‌ಡಿಕೆ ಹಾಗೂ ಬೊಮ್ಮಾಯಿಗೆ ಪ್ರತಿಷ್ಠೆಯ ಪ್ರಶ್ನೆಗಳಾಗಿವೆ. ಇನ್ನು ಚನ್ನಪಟ್ಟಣ ಡಿಕೆ.ಶಿವಕುಮಾರ್ ತವರು ಜಿಲ್ಲೆಗೆ ಸೇರಿರುವ ಕಾರಣ ಅದೂ ಕೂಡ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ.

ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ಶುರು ಮಾಡಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಸಂಸದ ಇ ತುಕಾರಾಂ ಪತ್ನಿ ಅಥವಾ ಮಗಳಿಗೆ ಟಿಕೆಟ್ ಸಿಗುವ ನಿರೀಕ್ಷೆಯಿದೆ. ಇನ್ನು ಬಿಜೆಪಿ ಸಂಡೂರು ಕ್ಷೇತ್ರದಲ್ಲಿ ಗೆದ್ದು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಲು ಬಿಜೆಪಿ ನಾಯಕರು ಉತ್ಸುಕರಾಗಿದ್ದಾರೆ. ಹೀಗಾಗಿ ಸೂಕ್ತ ಅಭ್ಯರ್ಥಿಗಳಿಗಾಗಿ ಪಕ್ಷ ಹುಡುಕಾಟ ನಡೆಸುತ್ತಿದೆ. ಈ ನಡುವೆ ಮಾಜಿ ಸಚಿವ ಬಿ ಶ್ರೀರಾಮುಲು ಹೆಸರು ಕೂಡ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ತುಕಾರಾಂ ತಮ್ಮ ಎದುರಾಳಿಗಳ ಮೇಲೆ ಹಿಡಿತ ಸಾಧಿಸಿದ್ದರು. ಸಂಡೂರಿನಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಕಾರಾಂ ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ, ಉಪಚುನಾವಣೆಯಲ್ಲಿ ಪಕ್ಷವನ್ನು ಪ್ರತಿನಿಧಿಸಲು ಸಮರ್ಥ ಅಭ್ಯರ್ಥಿಯನ್ನು ಹೆಸರಿಸಲಾಗುವುದು ಎಂದು ಬಳ್ಳಾರಿಯ ಹಿರಿಯ ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಚನ್ನಪಟ್ಟಣದಲ್ಲಿ ಸಿನಿಮಾ ನಟ ನಿಕಿಲ್‌ಕುಮಾರಸ್ವಾಮಿ, ಸಿಪಿ ಯೋಗೇಶ್ವರ ಎನ್‌ಡಿಎ ಅಭ್ಯರ್ಥಿಯಾಗಲು ತೀವ್ರ ಪೈಪೋಟಿ ನಡೆಸಿದ್ದಾರೆ. ಕೈ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಇನ್ನು ಶಿಗ್ಗಾವಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಪುತ್ರ ಅಥವಾ ಮಾಜಿ ಸಚಿವ ಮುರುಗೇಶ ನಿರಾಣಿ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇಲ್ಲಿಯೂ ಕಾಂಗ್ರೆಸ್‌ಗೆ ಅಭ್ಯರ್ಥಿ ಕೊರತೆಯಿದೆ.
ಒಟ್ಟಿನಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ರಾಜ್ಯ ಸರ್ಕಾರಕ್ಕೆ ಹಗರಣಗಳು ಮೆತ್ತಿಕೊಂಡಿದ್ದು ಗ್ಯಾರೆಂಟಿ ಯೋಜನೆಯಿಂದ ಅಭಿವೃದ್ಧಿ ಕುಂಠಿತವಾಗಿದೆ. ಇದೇ ವಿಷಯವಾಗಿ ಎನ್‌ಡಿಎ ಹೋರಾಟ ನಡೆಸುತ್ತಿದೆ. ಮೂಲಗಳ ಪ್ರಕಾರ ಎನ್‌ಡಿಎ ಮೂರು ಕ್ಷೇತ್ರ ಕ್ಲೀನ್‌ಸ್ವೀಪ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

Share.
Leave A Reply

Exit mobile version