ದಾವಣಗೆರೆ: ಜಾತಿ ಗಣತಿ ವರದಿ ಬಿಡುಗಡೆಯೇ ಆಗಿಲ್ಲ, ಹೀಗಾಗಿ ಆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಬೆಂಗಳೂರಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಪದಾಧಿಕಾರಿಗಳು ಸಭೆ ಮಾಡಿ, ವರದಿಗೆ ವಿರೋಧ ಮಾಡಿದ್ದಾರೆ. ಹೀಗಾಗಿ ಈಗ ಒಬ್ಬೊಬ್ಬರೂ ಒಂದೊಂದು ಅಭಿಪ್ರಾಯ ವ್ಯಕ್ತವಾಗುತ್ತಿವೆ. ಒಕ್ಕಲಿಗ, ಲಿಂಗಾಯತ ಸೇರಿದಂತೆ ಹಲವಾರು ಜಾತಿಗಳು ವರದಿಗೆ ವಿರೋಧ ಮಾಡಿವೆ. ಮೊದಲು ಜಾತಿ ಗಣತಿ ವರದಿ ಬಿಡುಗಡೆಯಾಗಲಿ. ಆ ಬಳಿಕ ಆ ಬಗ್ಗೆ ನೋಡೋಣ’’ ಎಂದರು.
‘‘ಸಭೆಯಲ್ಲಿ ನಾನು ಇರಲಿಲ್ಲ. ವಿರೋಧ ಪಕ್ಷಗಳು ಇರುವುದೆ ವಿರೋಧ ಮಾಡುವುದಕ್ಕೆ ಎಂದರಲ್ಲದೆ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಬಗ್ಗೆ ಮಾಜಿ ಸಚಿವ ಎಚ್.ವಿಶ್ವನಾಥಗೆ ಏನು ಗೊತ್ತಿದೆ? ಅವನೊಬ್ಬ ಸಮಯ ಸಾಧಕ. ಎಲ್ಲ ಪಕ್ಷಗಳನ್ನು ಅಡ್ಡಾಡಿಕೊಂಡು, ಈಗ ಯಾವ ಪಕ್ಷದಲ್ಲಿದ್ದಾರೆ’’ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನಲ್ಲಿ ಜಾಗ ಇರಬೇಕಲ್ವ?
ಮಾಜಿ ಸಚಿವ ವಿ.ಸೋಮಣ್ಣ ಬರುವುದಕ್ಕೆ ಕಾಂಗ್ರೆಸ್ಸಿನಲ್ಲಿ ಜಾಗ ಇರಬೇಕಲ್ಲ. ನಮ್ಮಲ್ಲಿ ಹೈಕಮಾಂಡ್ ಇದೆ. ಏನು ಮಾಡುತ್ತಾರೋ ನೋಡೋಣ. ವಿಪಕ್ಷದವರೆಲ್ಲ ಕಾಂಗ್ರೆಸ್ಸಿಗೆ ಸೇರ್ಪಡೆಯಾಗುತ್ತಿರುವುದು ನಮಗೆ ಪ್ಲಸ್ ಪಾಯಿಂಟ್ ಆಗಲಿದೆ. ಲೋಕಸಭೆ ಚುನಾವಣೆಗೆ ಎಲ್ಲರೂ ಬೇಕಾಗುತ್ತಾರೆ’’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.