ನಂದೀಶ್ ಭದ್ರಾವತಿ, ದಾವಣಗೆರೆ 

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮೆಕ್ಕೆಜೋಳ ಬೆಳೆ ಬಿಟ್ಟರೆ ಹೆಚ್ಚಾಗಿ ಭತ್ತ ಬೆಳೆಯಲಾಗುತ್ತಿದ್ದು, ಈಗ ಅಕ್ಷರಶಃ ಭತ್ತದ ಬೆಳೆಗಾರರು ಕಂಗಾಲಾಗಿದ್ದಾರೆ.

ದಾವಣಗೆರೆ ಸೇರಿದಂತೆ ದೊಡ್ಡ ಬಾತಿಯಲ್ಲಿ ಭತ್ತ ಬೆಳೆಗಾರರು ಭತ್ತ ಬೆಳೆದಿದ್ದು, ದಲ್ಲಾಳಿಗಳ ಆಗಮನಕ್ಕೆ ಕಾಯುತ್ತಿದ್ದಾರೆ. ಈ ನಡುವೆ, ಹವಾಮಾನದಲ್ಲಾಗುತ್ತಿರುವ ಬದಲಾವಣೆ ರೈತರನ್ನು ಸಂಕಷ್ಟಕ್ಕೆ ದೂಡಿದೆ.

ದೊಡ್ಡಬಾತಿ ಗ್ರಾಮದಲ್ಲಿ ಭತ್ತ ಒಣಗಿಸುತ್ತಿರುವ ರೈತ ಮಹಿಳೆ

ಸದ್ಯ ಥಂಡಿ , ಮಳೆ ವಾತಾವರಣ ಇರುವುದು ರೈತರಿಗೆ ಕಷ್ಟವಾಗಿದೆ. ಇದನ್ನೆ ಸಮಯ ಸಾಧಿಸಿರುವ ದಲ್ಲಾಳಿಗಳು ಈಗ ಭತ್ತ ಕೊಳ್ಳಲು ಬರುತ್ತಿಲ್ಲ..ಪರಿಣಾಮ ರೈತರು ಖಾಲಿ ಜಾಗದಲ್ಲಿ ಮಳೆ ಭೀತಿಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಸದ್ಯ ಭತ್ತದ ದರ ಕ್ವಿಂಟಾಲ್ ಗೆ ಮೂರು ಸಾವಿರ ಇದ್ದು, ಉತ್ತಮದರವಿದೆ. ಆದರೆ ದಲ್ಲಾಳರು ಬಾರದ ಕಾರಣ ದರ ಕುಸಿಯುತ್ತಿದೆ.

ರೈತ ತನ್ನ ಕಷ್ಟದ ನಡುವೆಯೂ ಭತ್ತ ಬೆಳೆದಿದ್ದು, ಉತ್ತಮ ದರ ಸಿಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದ. ಅದರಲ್ಲೂ ಗುತ್ತಿಗೆ ಆಧಾರದ ಮೇಲೆ ಬೇರೆಯವರ ಜಮೀನನಲ್ಲಿ ಭತ್ತ ಬೆಳೆದ ರೈತರು ಉತ್ತಮ ದರದ ಕಾರಣ ಖುಷಿಯಲ್ಲಿದ್ದರು. ಆದರೆ ಹನಿ, ಹನಿ ಬೀಳುವ ಮಳೆ ಇವರನ್ನು ಕಂಗಾಲಾಗಿಸಿದೆ. ಭತ್ತ ಬೆಳೆ ಬೆಳೆದರೂ ದರ ಸಮರದಿಂದಾಗಿ ಅನ್ನದಾತರು ಕೈ ಸುಟ್ಟು ಕೊಂಡಿದ್ದಾರೆ. ಕಳೆದ ಕೆಲದಿನಗಳಿಂದ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆಯಾಗುವ ಸಂಭವ ಹೆಚ್ಚಾಗಿದೆ. ಇದರಿಂದಾಗಿ ಭತ್ತ ಖರೀದಿಸಲು ವ್ಯಾಪಾರಸ್ಥರು ಮುಂದಾಗುತ್ತಿಲ್ಲ.ಅದಕ್ಕೆ ಕಾರಣ ಭತ್ತದ ಬೆಲೆ ಇಳಿಕೆಯಾಗಲಿ ಎಂದು.

ದರ ಕಡಿಮೆಯಾಗಲಿ ಎಂದು ಕಾಯುತ್ತಿರುವ ದಲ್ಲಾಳಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಭತ್ತಕ್ಕೆ 3 ಸಾವಿರವಿದೆ ಆದರೆ ವ್ಯಾಪಾರಸ್ಥರು ಬೆಲೆ ಇನ್ನೂ ಕಡಿಮೆಯಾಗಲಿ ಎಂದು ಕಾಯುತ್ತಿದ್ದಾರೆ. ಇಳುವರಿ ಹೆಚ್ಚಾಗಿದ್ದರೂ ಕೂಡ ಸೂಕ್ತ ಬೆಲೆ ಸಿಗದೆ ಅನ್ನದಾನ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾನೆ.ದರ ಸಮರದಿಂದಾಗಿ ರೈತ ಮತ್ತೆ ಸಾಲದ ಸುಳಿಗೆ ಸಿಲುಕಬೇಕಾದ ಪರಿಸ್ಥಿತಿ ಎದುರಾಗಿದೆ.

ಕಡಿಮೆ ಬೆಲೆಗೆ ಖರೀದಿ

ಈ ಬಾರಿ ಮಳೆ ಕೈ ಕೊಟ್ಟಿದೆ ಇದರ ನಡುವೆ ಭತ್ತಬೆಳೆ ಬೆಳೆಯಲು ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ನೀರು ಹರಿಸುವುದು ತಡವಾಗಿತ್ತು.ವಿದ್ಯುತ್ ಅಭಾವ,ಮಳೆಯ ಕೊರತೆಯ ನಡುವೆಯೂ ಸಾಲಸೋಲ‌ ಮಾಡಿ ಭತ್ತ ಬೆಳೆದ ರೈತರು ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದರು.ಆದರೆ ಮಧ್ಯವರ್ತಿಗಳ ಹಾವಳಿಯಿಂದಾಗಿ ರೈತರು ನಷ್ಟ ಅನುಭವಿಸುವ ಸ್ಥಿತಿಯಲ್ಲಿದ್ದಾರೆ. ಕೆಲ ದಲ್ಲಾಳಿಗಳು ಮಳೆ ಬರುತ್ತದೆ ಇರುವ ಭತ್ತ ಹಾಳಾಗುತ್ತದೆ ಸುಮ್ಮನೆ ಈಗಿರುವ ದರಕ್ಕೆ ಕೊಡಿ ಎಂದು ಭತ್ತ ಖರೀದಿಸಿ ಶೇಖರಣೆ ಮಾಡುತ್ತಿದ್ದಾರೆ‌.

ಮಳೆಯ ನೆಪವೊಡ್ಡಿ, ಖರೀದಿಗೆ ಹಿಂದೇಟು

ಮಳೆಯ ನೆಪವೊಡ್ಡಿ ಭತ್ತ ಖರೀದಿಸಲು ಖರೀದಿದಾರರು ಹಿಂದೇಟು ಹಾಕುತ್ತಿದ್ದಾರೆ.ಇದು ರೈತರನ್ನು ಚಿಂತೆಗೀಡು ಮಾಡಿದೆ.ಬೇರೆಯವರ ಜಮೀನು ಗುತ್ತಿಗೆ ಪಡೆದು ಭತ್ತ ಬೆಳೆದಿದ್ದೇವೆ ಬೆಳೆಯೇನೋ‌ ಚೆನ್ನಾಗಿ ಬಂದಿದೆ ಆದರೆ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ. ಈಗ ಬೆಳೆದಿರುವ ಭತ್ತ ಉತ್ತಮ ಬೆಲೆಗೆ ಮಾರಿದರೆ ನಮಗೆ ಕೊಂಚ ಲಾಭವಾಗಬಹುದು ಇಲ್ಲವಾದರೆ ಗುತ್ತಿಗೆ ಹಣ ನೀಡಿ ಖಾಲಿ ಕೈಯಲ್ಲಿ ಮನೆಗೆ ಹೊಗಬೇಕು ಇದು ನಮ್ಮ ಬವಣೆ ಎನ್ನುತ್ತಾರೆ ದೊಡ್ಡ ಬಾತಿ ಗ್ರಾಮದ ಭತ್ತ ಬೆಳೆದ ರೈತ ಮಹಿಳೆ .

ಭತ್ತ ಒಣಗಿಸುವ ಕಾರ್ಯ

ಈಗಾಗಲೇ ಭತ್ತ ಕಟಾವು ಮಾಡಿರುವ ರೈತರು ಭತ್ತ ಒಣಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಉತ್ತಮ‌ಬೆಳೆ ನಿರೀಕ್ಷೆಯಲ್ಲಿದ್ದಾರೆ. ಆದರೆ ಹವಾಗುಣ, ದಲ್ಲಾಳಿಗಳ ಪ್ರಭಾವದಿಂದ ಅನ್ನ ಕೊಡುವ ಅನ್ನದಾತ ಭತ್ತ ಬೆಳೆಯೋದೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾನೆ

Share.
Leave A Reply

Exit mobile version