ನಂದೀಶ್ ಭದ್ರಾವತಿ ದಾವಣಗೆರೆ
ದಾವಣಗೆರೆ ಶಿಕ್ಷಣ, ವಾಣಿಜ್ಯ ಕ್ಷೇತ್ರಗಳಲ್ಲಿ ಹೆಗ್ಗಳಿಕೆ ಪಡೆದ ದೇವ ನಗರಿ ಇಲ್ಲಿ ಬೆಣ್ಣೆ ದೋಸೆಗಿಂತ, ಮಂಡಕ್ಕಿ, ಮಿರ್ಚಿ, ಖಾರವನ್ನೇ ಜನ ಹೆಚ್ಚಾಗಿ ಇಷ್ಟಪಡುತ್ತಾರೆ. ಆದ್ದರಿಂದ ದಾವಣಗೆರೆ ಬಿಸಿ ಬಿಸಿ ಮಿರ್ಚಿ, ಮಂಡಕ್ಕಿಗಳಿಂದಲೂ ವೈಶಿಷ್ಟ್ಯತೆ ಪಡೆದಿದೆ.
ರುಚಿ, ಗುಣಮಟ್ಟದಲ್ಲಿ ದಾವಣಗೆರೆ ಮಿರ್ಚಿಗೆ ಇಲ್ಲಿನ ಮಿರ್ಚಿಯೇ ಸಾಟಿ. ಕೇವಲ ಕಡ್ಲಿಬೇಳೆ ಹಿಟ್ಟಿನಿಂದ ತಯಾರಿಸುವ ಈ ಮಿರ್ಚಿಯ ರುಚಿ ತಿನ್ನುವವರ ನಾಲಿಗೆ ಮೇಲೆ ದಿನಿವಿಡೀ ಲಾಸ್ಯವಾಡುತ್ತದೆ.
ಮಿರ್ಚಿ ತಿನ್ನಲು ಸಂಜೆ ಹೇಳಿಮಾಡಿಸಿದ ಹೊತ್ತು. ಮಳೆಗಾಲ, ಚಳಿಗಾಲದಲ್ಲಿ ಮಿರ್ಚಿಗೆ ವಿಶೇಷ ಮೆರುಗು. ಮಂಡಕ್ಕಿ, ಖಾರದೊಂದಿಗೆ ಮಿರ್ಚಿಯ ಸವಿ ಬರೀ ಹೇಳಲಾಗದು, ತಿಂದೇ ನೋಡಬೇಕು.
ಇಂತಹ ಮಿರ್ಚಿಗಳನ್ನು ಸಾಮಾನ್ಯವಾಗಿ ರಾಜ್ಯದ ಎಲ್ಲ ಊರುಗಳಲ್ಲಿ ತಯಾರಿಸುತ್ತಾರೆ. ಆದರೆ, ದಾವಣಗೆರೆ ಕೈಚಳಕವೇ ಬೇರೆ.
ಯಾವ ಹೋಟೆಲ್ ಗೂ ಹೋದ್ರು ಸಿಗುತ್ತೇ ಮಿರ್ಚಿ
ದಾವಣಗೆರೆಯ ಯಾವುದೇ ಹೋಟೆಲ್ ಗೆ ಹೋದ್ರು ಮಿರ್ಚಿ ಸಿಗುತ್ತದೆ. ಸಿಹಿ ಊಟಕ್ಕೆ ಹೊರತುಪಡಿಸಿದರೆ ಉಳಿದೆಲ್ಲ ಊಟದ ಜತೆ ಮಿರ್ಚಿ ಅದ್ಭುತ ಕಾಂಬಿನೇಷನ್. ತಟ್ಟೆಯಲ್ಲಿ ಒಂದೆರಡು ದಾವಣಗೆರೆ ಮಿರ್ಚಿಯಿದ್ದರೆ, ಯಾವುದೇ ಊಟದ ರುಚಿ ದುಪ್ಪಟ್ಟಾಗುತ್ತದೆ. ಯಾವುದೇ ಮದುವೆ ಸೇರಿ ಇತರ ಸಮಾರಂಭಗಳಿರಲಿ, ಊಟದ ಮೆನುವಿನಲ್ಲಿ ಮಿರ್ಚಿಗೇ ಪ್ರಧಾನ ಸ್ಥಾನ.ಇಲ್ಲಿನ ಮನೆಗೆ ಬರುವ ನೆಂಟರಿಗೆ ಮಿರ್ಚಿ ರುಚಿ ತೋರಿಸಿದರೆ, ನೆಂಟರಿಗೆ ನೀಡಿದ ದೊಡ್ಡ ಗೌರವವಿದ್ದಂತೆ.
ಹೇಗಿರುತ್ತೇ ದಾವಣಗೆರೆ ಮಿರ್ಚಿ
ಕಡ್ಲಿಬೇಳೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡುಗೆ ಸೋಡಾ ಬೆರೆಸಿ ನೀರು ಹಾಕಿಕೊಂಡು ಗಂಜಿಗಿಂತ ದಪ್ಪವಾಗಿ ಕಲಸಿ, ಹಸಿ ಮೆಣಸಿನಕಾಯಿಗೆ ಹಿಟ್ಟು ಅದ್ದಿ ಮಧ್ಯಮ ಉರಿಯಲ್ಲಿ ಕಾದ ಎಣ್ಣೆಗೆ ಹಾಕಿ ಎರಡೂ ಬದಿ ಬೇಯಿಸಿ ತೆಗೆದರೆ ದಾವಣಗೆರೆ ಮಿರ್ಚಿ ರೆಡಿ. ಹಸಿ ಮೆಣಸಿನಕಾಯಿ ಮಧ್ಯೆ ಸೀಳಿ ಅದರೊಳಗೆ ಉಪ್ಪು ಜೀರಿಗೆ ಮಿಶ್ರಣ ತುಂಬಿ ಮಾಡುವ ಮಿರ್ಚಿ ಮತ್ತಷ್ಟು ರುಚಿ.
ದಾವಣಗೆರೆ ಮಿರ್ಚಿ ಗುಣಮಟ್ಟದಲ್ಲಿ ರಾಜಿಯಾಗೋದಿಲ್ಲ
ಬರೀ ಮಿರ್ಚಿಯನ್ನು ತಿಂದರೆ ಸಿಗುವ ರುಚಿ ಮಜಾಕ್ಕಿಂತ, ಮಂಡಕ್ಕಿ ಖಾರ, ಪುಗ್ಗಿ ಜತೆಗೆ ಸವಿದರೆ ಅದರ ರುಚಿಯೇ ವಿಶಿಷ್ಟ. ಮಂಡಕ್ಕಿ ಒಗ್ಗರಣೆಗೆ ಮಿರ್ಚಿ ಸಮನಾರ್ಥಕ ಪದ. ಉಪ್ಪಿಟ್ಟು, ಅವಲಕ್ಕಿ ಒಗ್ಗರಣೆ ಸೇರಿ ಇತರ ತಿಂಡಿ, ಅನ್ನ ಸಾಂಬಾರು, ರೊಟ್ಟಿ, ಚಪಾತಿ ಊಟಕ್ಕೂ ಮಿರ್ಚಿ ಸಕತ್ ಕಂಪನಿ ಕೊಡುತ್ತದೆ. ಹಲವು ವರ್ಷಗಳಿಂದಲೂ ರುಚಿ ಮತ್ತು ಗುಣಮಟ್ಟದಲ್ಲಿ ದಾವಣಗೆರೆ ಮಿರ್ಚಿ ರಾಜಿಯಾಗಿಲ್ಲ.
ಅಂದಿಗೂ ಇಂದಿಗೂ ಅದೇ ರುಚಿ, ಅದೇ ಗುಣಮಟ್ಟ ಕಾಪಾಡಿಕೊಂಡ ದಾವಣಗೆರೆ ಮಿರ್ಚಿ ನಾಡಿನಲ್ಲೆಡೆ ತನ್ನ ಘಮ ಹರಡಿದೆ. ಈ ಭಾಗದ ಪ್ರತಿ ಹೋಟಲ್ನಲ್ಲೂ ಮಿರ್ಚಿ ಕಾಯಂ. ಮೆಣಸಿನಕಾಯಿ ಮಂಡಕ್ಕಿ ಮಾರಾಟ ಮಾಡಿ ಜೀವನ ನಿರ್ವಹಿಸುವ 100 ಕ್ಕೂ ಹೆಚ್ಚು ಅಂಗಡಿಗಳು ದಾವಣಗೆರೆಯಲ್ಲಿದೆ.
ನಾನಾ ಕಾರಣಗಳಿಗಾಗಿ ಬೇರೆ ಊರುಗಳಿಂದ ದಾವಣಗೆರೆಗೆ ಬರುವ ಜನರು ಇಲ್ಲಿನ ಮಿರ್ಚಿ ಅಂಗಡಿ ಹುಡುಕಿಕೊಂಡು ಹೋಗಿ ತೃಪ್ತಿಯಾಗುವಷ್ಟು ಮಿರ್ಚಿ ತಿನ್ನದೇ ವಾಪಸ್ ಹೋಗುವುದೇ ಇಲ್ಲ. ಒಟ್ಟಾರೆ ದಾವಣಗೆರೆಗೂ ಮಂಡಕ್ಕಿ ಮೆಣಸಿನಕಾಯಿಗೂ ಸಂಬಂಧ ಇದ್ದು, ಒಮ್ಮೆ ಬಂದು ರುಚಿ ನೋಡಿ.