ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣಾ ಮತದಾನ ಮೇ 7 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುಂಚಿತವಾಗಿ ಮೇ 5 ರ ಭಾನುವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಮಾತ್ರ ಮಾಡಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಹಿರಂಗ ಪ್ರಚಾರ ಅಂತ್ಯವಾಗುವುದರಿಂದ ಯಾವುದೇ ಚುನಾವಣಾ ರ್ಯಾಲಿ, ಸಮಾರಂಭಗಳನ್ನು ನಡೆಸುವಂತಿಲ್ಲ ಮತ್ತು ಧ್ವನಿವರ್ಧಕಗಳ ಮೂಲಕವೂ ಪ್ರಚಾರ ಮಾಡುವಂತಿಲ್ಲ. ಮತ್ತು ಯಾವುದೇ ಡಿಜಿಟಲ್, ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವಂತಿಲ್ಲ ಮತ್ತು ಜಾಹಿರಾತುಗಳನ್ನು ಸಹ ಬಿಡುಗಡೆ ಮಾಡುವಂತಿಲ್ಲ.
ಎಂ.ಸಿ.ಎಂ.ಸಿ.ಯಿಂದ ಅನುಮತಿ ಪಡೆದ ಜಾಹಿರಾತುಗಳನ್ನು ಮುದ್ರಣ ಮಾಧ್ಯಮದಲ್ಲಿ ಮಾತ್ರ ಪ್ರಕಟಿಸಲು ಅವಕಾಶ ಇರುತ್ತದೆ. ಮತ್ತು ರಾಜಕೀಯ ಹಿನ್ನಲೆಯುಳ್ಳ ಇತರೆ ಕ್ಷೇತ್ರದ ಮತದಾರರು ಯಾವುದೇ ಹೋಟೆಲ್, ಮನೆಗಳಲ್ಲಿ ವಾಸ್ತವ್ಯ ಹೂಡುವಂತಿಲ್ಲ. ಆದರೆ ಪ್ರವಾಸಿಗರು, ಇತರೆ ಉದ್ದೇಶಕ್ಕೆ ಪ್ರಯಾಣಿಸುವವರಿಗೆ ನಿರ್ಬಂದ ಇರುವುದಿಲ್ಲ ಎಂದರು.
144 ಸೆಕ್ಷನ್, ಮದ್ಯ ಮಾರಾಟ ನಿಷೇಧ
ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 5 ಜನರಿಗಿಂತ ಹೆಚ್ಚು ಜನರ ಗುಂಪು ಸೇರುವಂತಿಲ್ಲ. ಯಾವುದೇ ಮೆರವಣಿಗೆ, ಸಭೆ ಮಾಡುವಂತಿಲ್ಲ. ಮತದಾನ ದಿನ ಮತಗಟ್ಟೆಯಿಂದ 200 ಮೀಟರ್ ನಂತರ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು 10×10 ಅಳತೆಯಲ್ಲಿ ಪೆಂಡಾಲ್ ಹಾಕಿಕೊಂಡು ಒಂದು ಟೇಬಲ್, ಕುರ್ಚಿ ಹಾಕಿಕೊಂಡು ಮತದಾರರಿಗೆ ಬಿಳಿಹಾಳೆ ಮೇಲೆ ಮತದಾರರ ಚೀಟಿಯನ್ನು ಬರೆದುಕೊಡಲು ಅವಕಾಶ ಇದ್ದು ಅನುಮತಿ ಪಡೆಯಬೇಕು.
ಯಾವುದೇ ಖಾಸಗಿ ವಾಹನಗಳನ್ನು ಮತಗಟ್ಟೆಯಿಂದ 200 ಮೀಟರ್ ಒಳಗೆ ನಿಲುಗಡೆ ಮಾಡಲು ಅವಕಾಶ ಇರುವುದಿಲ್ಲ. ಮತ್ತು ಮತಗಟ್ಟೆ 100 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್, ಡಿಜಿಟಲ್ ಪೆನ್, ಕ್ಯಾಮೆರಾ, ಆಯುಧ, ಶಸ್ತ್ರಾಸ್ತ್ರ, ಯಾವುದೇ ದ್ರಾವಣ, ಆಹಾರ ಸಾಮಗ್ರಿ, ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ನಿಷಿದ್ದ.
ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಮೇ 5 ರಂದು ಸಂಜೆ 6 ಗಂಟೆಯಿಂದ ಮೇ 7 ರಂದು ಮತದಾನ ಮುಕ್ತಾಯವಾಗುವವರೆಗೂ ಯಾವುದೇ ಮದ್ಯ ಮಾರಾಟ ಮಾಡುವಂತಿಲ್ಲ ಮತ್ತು ಜಿಲ್ಲೆಯಾದ್ಯಂತ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಅಭ್ಯರ್ಥಿಗಳು ಬಳಸುವ ವಾಹನಗಳಿಗೆ ಮಿತಿ
ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ನಂತರ ಈಗಾಗಲೇ ಅನುಮತಿ ನಿಡಲಾದ ಎಲ್ಲಾ ವಾಹನಗಳ ಅನುಮತಿ ಸ್ಥಗಿತವಾಗಲಿದೆ. 48 ಗಂಟೆಗಳ ಅವಧಿಯಲ್ಲಿ ಅಭ್ಯರ್ಥಿ ಮತ್ತು ಏಜೆಂಟ್ಗೆ 1 ರಂತೆ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ರಂದು ವಾಹನ ಬಳಕೆಗೆ ಅನುಮತಿ ನೀಡಲಿದ್ದು ದಾಖಲೆ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಆದರೆ ಅಭ್ಯರ್ಥಿಗಳು, ಪಕ್ಷಗಳಿಂದ ಮತದಾರರಿಗೆ ವಾಹನದ ಸೌಕರ್ಯ ಒದಗಿಸಲು ಅವಕಾಶ ಇರುವುದಿಲ್ಲ.
ಮತದಾನದ ದಿನ ಸಂತೆ, ಜಾತ್ರೆ ನಿಷೇಧ;
ಮತದಾನ ನಡೆಯುವ ಮೇ 7 ರಂದು ಯಾವುದೇ ಸಂತೆ, ಜಾತ್ರೆಗಳನ್ನು ನಡೆಸುವಂತಿಲ್ಲ, ಈಗಾಗಲೇ ಅಂದು ನಡೆಯುವ ಸಂತೆ, ಜಾತ್ರೆಗಳನ್ನು ನಿಷೇಧಿಸಲಾಗಿದೆ.
ಅಭ್ಯರ್ಥಿ, ಮತದಾರ ವಿವರ
ಚುನಾವಣಾ ಕಣದಲ್ಲಿ 30 ಅಭ್ಯರ್ಥಿಗಳಿದ್ದು ಮತದಾನಕ್ಕಾಗಿ ಎರಡು ಬ್ಯಾಲೆಟ್ ಯುನಿಟ್ಗಳನ್ನು ಬಳಕೆ ಮಾಡಲಾಗುತ್ತಿದೆ. ನೋಟಾ ಸೇರಿ 31 ಅಭ್ಯರ್ಥಿಗಳ ವಿವರ ಇರುತ್ತದೆ. ಹರಪನಹಳ್ಳಿ ಸೇರಿದಂತೆ ಕ್ಷೇತ್ರದಲ್ಲಿ 1946 ಮತಗಟ್ಟೆಗಳಿವೆ. 851990 ಪುರುಷ, 857117 ಮಹಿಳೆ, 137 ಇತರೆ ಸೇರಿ 1709244 ಮತದಾರರಿದ್ದಾರೆ. ಸೇವಾ ಮತದಾರರಲ್ಲಿ 551 ಪುರುಷ ಹಾಗೂ 12 ಮಹಿಳೆ ಸೇರಿ 563 ಮತದಾರರಿದ್ದಾರೆ. ಚುನಾವಣೆಗಾಗಿ 1946 ಮತಗಟ್ಟೆಗಳಿಗೆ 3892 ಬ್ಯಾಲೆಟ್ ಯುನಿಟ್ ಬಳಕೆ, 788 ಬ್ಯಾಲೆಟ್ ಯುನಿಟ್ ಕಾಯ್ದಿರಿಸಿದೆ. ಕಂಟ್ರೋಲ್ ಯುನಿಟ್ 1946, 493 ಸಿಯು ಕಾಯ್ದಿರಿಸಿದೆ. ವಿವಿಪ್ಯಾಟ್ 1946 ಬಳಕೆ ಹಾಗೂ 629 ಕಾಯ್ದಿರಿಸಿದೆ.
ಮತಗಟ್ಟೆ ಸಿಬ್ಬಂದಿ ವಿವರ
ಜಗಳೂರು ಕ್ಷೇತ್ರದಲ್ಲಿ 263 ಮತಗಟ್ಟೆಗಳಿದ್ದು ಪಿ.ಆರ್.ಓ, ಎಪಿಆರ್ಓ, ಪಿಓ ತಲಾ ಇಬ್ಬರು ಸೇರಿ 1212 ಸಿಬ್ಬಂದಿಗಳು. ಹರಪನಹಳ್ಳಿ 253 ಮತಗಟ್ಟೆಗಳಿದ್ದು ಎಲ್ಲಾ ಸಿಬ್ಬಂದಿ ಸೇರಿ 1112, ಹರಿಹರ 228 ಮತಗಟ್ಟೆಗಳಿಗೆ 1048, ದಾವಣಗೆರೆ ಉತ್ತರ 245 ಮತಗಟ್ಟೆ 1128, ದಾವಣಗೆರೆ ದಕ್ಷಿಣ 217 ಮತಗಟ್ಟೆ 996, ಮಾಯಕೊಂಡ 240 ಮತಗಟ್ಟೆ 1104 ಸಿಬ್ಬಂದಿ, ಚನ್ನಗಿರಿ 255 ಮತಗಟ್ಟೆ 1172 ಸಿಬ್ಬಂದಿ, ಹೊನ್ನಾಳಿ 245 ಮತಗಟ್ಟೆ 1124 ಸಿಬ್ಬಂದಿಗಳು ಸೇರಿ 8996 ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
1946 ಮತಗಟ್ಟೆಗಳಿಗೆ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ ಇಲಾಖೆಗಳ 188 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಮೈಕ್ರೋ ಅಬ್ಸರ್ವರ್ಗಳನ್ನಾಗಿ ನೇಮಕ ಮಾಡಲಾಗಿದ್ದು 1141 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ಕಲ್ಪಿಸಲಾಗಿದ್ದು ಇಲ್ಲಿನ ಮತದಾನ ಪ್ರಕ್ರಿಯೆಗಳನ್ನು ನೇರವಾಗಿ ಆಯೋಗ ವೀಕ್ಷಣೆ ಮಾಡಲಿದೆ ಎಂದರು.
ವಾಹನಗಳ ಬಳಕೆ
ಮತದಾನ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ಗಾಗಿ ಒಟ್ಟು ಜಿಲ್ಲೆಯಲ್ಲಿನ 1693 ಮತಗಟ್ಟೆಗಳಿಗೆ 190 ಬಸ್ಸು, 127 ಮಿನಿ ಬಸ್, 29 ಜೀಪ್, ವಿಶೇಷಚೇತನರಿಗಾಗಿ 7 ಇನ್ನೋವಾ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮತದಾನ ಕರ್ತವ್ಯದಲ್ಲಿ ತೊಡಗುವ ಅಧಿಕಾರಿ, ಸಿಬ್ಬಂದಿಗಳಿಗೆ ಆಯಾ ತಾಲ್ಲೂಕಿನ ಅಕ್ಷರ ದಾಸೋಹ ಇಲಾಖೆಯಿಂದ ಊಟ ಮತ್ತು ಉಪಹಾರದ ವ್ಯವಸ್ಥೆಕಲ್ಪಿಸಲಾಗಿರುತ್ತದೆ. ಜೊತೆಗೆ ಮತಗಟ್ಟೆಯಲ್ಲಿಯೇ ಮತಗಟ್ಟೆ ಸಿಬ್ಬಂದಿ ವಾಸ್ತವ್ಯ ಹೂಡಲು ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ ಎಂದರು.
ಮತದಾನಕ್ಕೆ ಪರ್ಯಾಯ ದಾಖಲೆಗಳಿಗೆ ಅವಕಾಶ;
ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಚುನಾವಣಾ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು. ಇದಲ್ಲದೇ ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಬ್ಯಾಂಕ್, ಅಂಚೆ ಕಚೇರಿಯಿಂದ ಪಡೆಯಲಾದ ಖಾತೆ ಪುಸ್ತಕದಲ್ಲಿ ಭಾವಚಿತ್ರ ಇದ್ದಲ್ಲಿ, ಕೇಂದ್ರ ಕಾರ್ಮಿಕ ಸಚಿವಾಲಯದಿಂದ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ, ಪಾನ್ ಕಾರ್ಡ್, ಆರ್ಜಿಐ ನಿಂದ ನೀಡಲಾದ ಸ್ಮಾರ್ಟ್ ಕಾರ್ಡ್, ಇಂಡಿಯನ್ ಪಾಸ್ಪೋರ್ಟ್, ಭಾವಚಿತ್ರವಿರುವ ಪೆನ್ಷನ್ ದಾಖಲೆ, ಸರ್ಕಾರಿ, ಅರೆ ಸರ್ಕಾರಿ, ಸಾರ್ವಜನಿಕ ಉದ್ದಿಮೆಗಳಲ್ಲಿನ ಭಾವಚಿತ್ರವಿರುವ ಗುರುತಿನ ಚೀಟಿ, ಅಧಿಕೃತವಾಗಿ ವಿತರಿಸಲಾದ ಲೋಕಸಭಾ, ವಿಧಾನಸಭಾ, ಪರಿಷತ್ ಸದಸ್ಯರ ಐಡಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ನೀಡಲಾದ ದಿವ್ಯಾಂಗರ ಗುರುತಿನ ಚೀಟಿಗಳನ್ನು ನೀಡಿ ಮತದಾನ ಮಾಡಬಹುದಾಗಿದೆ.
ಮನೆಯಲ್ಲಿಯೇ ಮತದಾನ ಗಣನೀಯ ಸಾಧನೆ
85 ವರ್ಷ ಮೇಲ್ಪಟ್ಟ 1458 ಮತದಾರರು ಮನೆಯಲ್ಲಿಯೇ ಮತದಾನ ಮಾಡಲು ಘೋಷಣಾ ಪತ್ರ ನೀಡಿದ್ದು ಇದರಲ್ಲಿ 1373 ಮತದಾನ ಮಾಡಿ ಶೇ 94.17 ರಷ್ಟು ಮತದಾನವಾಗಿದೆ. ವಿಶೇಷಚೇತನರು 804 ಜನರು ಘೋಷಣಾ ಪತ್ರ ನೀಡಿ 787 ಮತ ಚಲಾಯಿಸಿ ಶೇ 97.88 ರಷ್ಟು ಮತದಾನ ಮಾಡಿದ್ದಾರೆ.
ಸಿಬ್ಬಂದಿಗಳಿಂದ ಮತದಾನ
ಈ ಜಿಲ್ಲೆಗೆ ಸೇರಿದ ಅಧಿಕಾರಿ ಹಾಗೂ ಸಿಬ್ಬಂದಿಗಳು ಬೇರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರಿಂದ 2843 ಅಂಚೆ ಮತಪತ್ರದ ಕೋರಿಕೆ ಸ್ವೀಕರಿಸಿ ಆಯಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಅಂಚೆಮತ ಪತ್ರ ಕಳುಹಿಸಿಕೊಡಲಾಗಿದೆ.
ಇಡಿಸಿ
ಇದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇಲ್ಲಿ ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ 7833 ಸಿಬ್ಬಂದಿಗಳು ಇಡಿಸಿ ಅರ್ಜಿ ಸಲ್ಲಿಸಿದ್ದು ಇವರು ಮತದಾನ ದಿನ ಎಲ್ಲಿ ಕರ್ತವ್ಯ ನಿರ್ವಹಿಸುವರು, ಅಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡುವರು.ಈ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಬೇರೆ ಜಿಲ್ಲೆಯಲ್ಲಿ ಮತದಾರರಾಗಿರುವ 1128 ಇಲ್ಲಿನ ಸಿಬ್ಬಂದಿಗಳಿಗೆ ಮತದಾನದ ತರಬೇತಿ ಏರ್ಪಡಿಸಿದ ಸ್ಥಳದಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು 527 ಜನರು ಮತದಾನ ಮಾಡಿದ್ದಾರೆ.
ವಿಶೇಷ ಮತಗಟ್ಟೆಗಳ ಸ್ಥಾಪನೆ;
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ಕ್ಷೇತ್ರದಲ್ಲಿ ತಲಾ 5 ರಂತೆ 35 ಸಖಿ ಮತಗಟ್ಟೆಗಳು, ತಲಾ 1 ರಂತೆ 7 ಯುವ ಮತಗಟ್ಟೆಗಳು, ತಲಾ ಒಂದರಂತೆ 7 ಸಾಂಪ್ರದಾಯಿಕ ಮತಗಟ್ಟೆಗಳು, ತಲಾ 1 ರಂತೆ 7 ಧ್ಯೇಯ ಮತಗಟ್ಟೆಗಳು, 1 ರಂತೆ 7 ವಿಶೇಷಚೇತನರಿಂದ ನಿರ್ವಹಿಸಲ್ಪಡುವ ಮತಗಟ್ಟೆಗಳು ಸೇರಿ ಒಟ್ಟು 63 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.
ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ,ಚುನಾವಣೆಯನ್ನು ಸಂಪೂರ್ಣವಾಗಿ ಶಾಂತವಾಗಿ ನಡೆಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ರೌಡಿಶೀಟರ್ಗಳನ್ನು ಬಾಂಡ್ ಓವರ್ ಮಾಡಲಾಗಿದೆ. ಮತ್ತು 698 ಆಯುಧಗಳನ್ನು ಠೇವಣಿ ಮಾಡಿಸಲಾಗಿದೆ. ಬಂದೋಬಸ್ತ್ ಗಾಗಿ ಜಿಲ್ಲೆ ಸೇರಿ ಇತರೆ ಜಿಲ್ಲೆಯಿಂದಲೂ ಸಿಬ್ಬಂದಿಗಳನ್ನು ನೀಡಲಾಗಿದೆ. ಕ್ರಿಟಿಕಲ್ ಮತ್ತು ವಲ್ನೆರಬಲ್ ಮತಗಟ್ಟೆಯಲ್ಲಿ ಮೈಕ್ರೋ ಅಬ್ಸರ್ವರ್ ಜೊತೆಗೆ ಹೆಚ್ಚುವರಿ ಬಂದೋಬಸ್ತ್ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಮತಗಟ್ಟೆಯಲ್ಲಿ ನೀರು, ನೆರಳು ಸೇರಿದಂತೆ ಶೌಚಾಲಯದ ವ್ಯವಸ್ಥೆ, ವಿಶೇಷಚೇತನರಿಗೆ ರ್ಯಾಂಪ್, ವ್ಹೀಲ್ಚೇರ್, ಹಿರಿಯರಿಗೆ ವಾಹನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು. ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ ಉಪಸ್ಥಿತರಿದ್ದರು.