ದಾವಣಗೆರೆ : ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಚುನಾವಣೆ ಎದುರಿಸುತ್ತಿದೆ. ಸೋಲಿನ ಭೀತಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಸೃಷ್ಟಿಯಾಗಿದೆ. ಕರ್ನಾಟಕದಲ್ಲಿ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದ್ರೆ ಸಿಎಂ ಸಿದ್ರಾಮಯ್ಯ ಅದ್ಯಾವ ಲೆಕ್ಕಾಚಾರದ ಮೇಲೆ ಕಾಂಗ್ರೆಸ್ 25 ಸೀಟುಗಳನ್ನ ಗೆಲ್ಲುತ್ತೆ ಅಂತಿದ್ದಾರೆ ಗೊತ್ತಾ..?
ನಂಬರ್. 01
ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್ ಪರ ಅಲೆ!?
ಬಿಜೆಪಿಯವರು 28ಕ್ಕೆ 28 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿಕೊಳ್ಳುತ್ತಿದ್ದು, ಜೆಡಿಎಸ್ ಕೂಡ ಅದಕ್ಕೆ ಧ್ವನಿಗೂಡಿಸುತ್ತಿದೆ. ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಸೋಲುತ್ತೆ ಅನ್ನೋ ಭಯದಿಂದ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಜೆಡಿಎಸ್ ಕೂಡ ಕೋಲಾರ, ಮಂಡ್ಯ ಹಾಗೂ ಹಾಸನ ಸೇರಿ ಮೂರು ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿದೆ. ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಿದೆ. ಕೋಲಾರದ ಜನ ಕಾಂಗ್ರೆಸ್ಗೆ ಬೆಂಬಲಿಸುತ್ತಾರೆ ಅನ್ನೋದು ನಿನ್ನೆ ನೆರೆದ ಅಪಾರ ಜನಸ್ತೋಮವನ್ನ ನೋಡಿದ್ರೆ ಗೊತ್ತಾಗುತ್ತೆ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ನೂರಕ್ಕೆ ನೂರು ಗೆಲ್ಲುತ್ತಾರೆ ಅನ್ನೋ ವಿಶ್ವಾಸವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 28ರಲ್ಲಿ 25 ಸ್ಥಾನಗಳನ್ನು ಖಂಡಿತ ಗೆಲ್ಲುತ್ತೆ ಅನ್ನೋ ವಿಶ್ವಾಸವನ್ನ ಸಿಎಂ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ನಂಬರ್. 02
ಕಮಲ – ದಳ ಅಪವಿತ್ರ ಮೈತ್ರಿ?
ಬಿಜೆಪಿ ಹಾಗೂ ಜೆಡಿಎಸ್ ಅಪವಿತ್ರ ಮೈತ್ರಿಯನ್ನು ಮಾಡಿಕೊಂಡಿದ್ದಾರೆ. ಹೆಚ್ .ಡಿ. ದೇವೇಗೌಡ ಹಾಗೂ ಹೆಚ್ .ಡಿ.ಕುಮಾರಸ್ವಾಮಿಯವರು ಮೊನ್ನೆಯವರೆಗೂ ದ್ವೇಷದ ಪಕ್ಷ, ಕ್ರಿಮಿನಲ್ ಪಕ್ಷ, ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದಿದ್ದರು. ಈಗ ನರೇಂದ್ರ ಮೋದಿಯವರನ್ನು ಸೇರಿಕೊಂಡಿದ್ದಾರೆ. ದೇವೇಗೌಡರು ನರೇಂದ್ರ ಮೋದಿ ಯವರನ್ನು ಬಹಳ ಹೊಗಳುತ್ತಿದ್ದಾರೆ. ಅಲ್ಲದೆ ಚುನಾವಣೆಯಾದ ಮೇಲೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದೂ ಹೇಳಿದ್ದಾರೆ. ಆದ್ರೆ ಕಾಂಗ್ರೆಸ್ ಸರ್ಕಾರ 5 ವರ್ಷ ಪೂರ್ಣಾವಧಿ ಮುಗಿಸಿ ಕೊಟ್ಟಿರುವ ಗ್ಯಾರಂಟಿಗಳನ್ನು ಈಡೇರಿಸಲಿದೆ ಅಂತೇಳಿ ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟನ್ನ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ಜನ ಕಾಂಗ್ರೆಸ್ ಪರವಾಗಿದ್ದಾರೆ ಅನ್ನೋದು ಗೊತ್ತಾಗಿ, ಅದನ್ನ ಸಹಿಸದೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.ಇದು ಅವರ ಭ್ರಮೆ ಅಂತೇಳಿ ಸಿದ್ರಾಮಯ್ಯ ಕುಟುಕಿದ್ದಾರೆ. ಕ್ರಿಮಿನಲ್ ಪಕ್ಷದ ಜೊತೆ ಸೇರಿರುವ ಜೆಡಿಎಸ್ ನಾಯಕರು ಸೆಕ್ಯುಲರ್ ಅನ್ನೋ ಪದಕ್ಕೆ ಅವಮಾನ ಮಾಡುತ್ತಿದ್ದಾರೆ. ಅದಕ್ಕೆ ಅವರು ಸಿದ್ದರಾಮಯ್ಯ ಅವರ ಗರ್ವ ಭಂಗ ಮಾಡುವುದಾಗಿ ಹೇಳಿದ್ದಾರೆ. ದೇವೇಗೌಡರು, ಬಿಜೆಪಿ ಏನೇ ಹೇಳಿದರೂ ಈ ಸಾರಿ ಕರ್ನಾಟಕದ ಜನ ಕಾಂಗ್ರೆಸ್ ಪಕ್ಷದ ಕೈಹಿಡಿಯಲಿದ್ದಾರೆ ಅನ್ನೋ ನಂಬಿಕೆ ಇದೆ ಎಂದಿದ್ದಾರೆ.
ನಂಬರ್. 03
ನುಡಿದಂತೆ ನಡೆಯುತ್ತಿದೆ ಕಾಂಗ್ರೆಸ್ ಸರ್ಕಾರ!!
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಕೊಟ್ಟ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಡೇರಿಸಿದ್ದೇವೆ . ಬಿಜೆಪಿ 2018 ರಲ್ಲಿ 600 ಭರವಸೆ ನೀಡಿ 60 ಭರವಸೆ ಕೂಡ ಈಡೇರಿಸಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಕರ್ನಾಟಕದ ಜನತೆಗೆ ಬಿಜೆಪಿ ದ್ರೋಹ ಬಗೆದಿದೆ. ಮೇ 20 ರಂದು ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿಗಳ ಅನುಷ್ಠಾನಕ್ಕೆ ತೀರ್ಮಾನ ಮಾಡಲಾಯಿತು. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯ, ಗೃಹ ಜ್ಯೋತಿ ಯೋಜನೆಗಳು ರಾಜ್ಯದ ಕೋಟಿ ಕೋಟಿ ಜನರನ್ನ ತಲುಪುತ್ತಿವೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಯಡಿ 1.17 ಕೋಟಿ ಗೃಹಿಣಿಯರಿಗೆ ತಿಂಗಳಿಗೆ 2000 ರೂ.ಗಳನ್ನು ನೀಡಲಾಗುತ್ತಿದೆ. ಹಾಗೂ ಯುವನಿಧಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಕರ್ನಾಟಕ ಹಸಿವು ಮುಕ್ತವಾಗಲು ಅನ್ನ ಭಾಗ್ಯ ಯೋಜನೆ ಜಾರಿಗೆ ತಂದೆವು. ಕೇಂದ್ರ ಸರ್ಕಾರ ಕುಯುಕ್ತಿಯಿಂದಾಗಿ ಅಕ್ಕಿ ತಪ್ಪಿದರೂ, ಅಕ್ಕಿ ದೊರೆಯುವವರೆಗೆ 170 ರೂಪಾಯಿಗಳನ್ನು ನೀಡಲಾಗುತ್ತಿದೆ ಅಂತೇಳಿ ಸಿಎಂ ಸಿದ್ರಾಮಯ್ಯ ಹೇಳಿದ್ದಾರೆ.
ನಂಬರ್. 04
ಪ್ರಧಾನಿ ಮೋದಿ ಸುಳ್ಳು ಭರವಸೆಗಳು?
5 ಗ್ಯಾರಂಟಿ ಜೊತೆಗೆ 82 ಭರವಸೆ ಈಡೇರಿಸುವ ಪ್ರಯತ್ನವನ್ನು ಮಾಡಿದ್ದೇವೆ. ನರೇಂದ್ರ ಮೋದಿ ಯಾವರು ಪ್ರಧಾನಿಯಾಗಿ 10 ವರ್ಷಗಳಾದರೂ ಯಾವ ಭರವಸೆಯನ್ನು ಈಡೇರಿಸಿಲ್ಲ. ವಿದೇಶದಿಂದ ಕಪ್ಪು ಹಣ ತಂದು ಪ್ರತಿ ಕುಟುಂಬಕ್ಕೆ 15 ಲಕ್ಷ ರೂಪಾಯಿಗಳನ್ನು ಹಾಕುವುದಾಗಿ ಹೇಳಿದ್ದರು. ಇದನ್ನು ಹೇಳಿ 10 ವರ್ಷಗಳಾಯ್ತು. ಒಂದು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷಿಸುವುದಾಗಿ ಹೇಳಿದ್ದರು. ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದೆ. ಜೊತೆಗೆ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದರು. ಆದರೆ ಹಾಗೆ ಆಗಿಲ್ಲ. ಅಚ್ಚೇ ದಿನ್ ಬರಲಿಲ್ಲ. ಜನ ಬೆಲೆಯೇರಿಕೆಯಿಂದ ತತ್ತರಿಸಿದ್ದ ಸಂದರ್ಭದಲ್ಲಿ 5 ಗ್ಯಾರಂಟಿ ಗಳನ್ನು ಕೊಟ್ಟಿದ್ದೇವೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 25 ಗ್ಯಾರಂಟಿ ಗಳನ್ನು ಜಾರಿ ಮಾಡಲಿದೆ ಅಂತೇಳಿ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದಾರೆ.
ಈ ಎಲ್ಲ ಕಾರಣಗಳಿಂದ ಈ ಸಲ ಕರ್ನಾಟಕದಲ್ಲಿ ಕಾಂಗ್ರೆಸ್ 28 ಸೀಟುಗಳ ಪೈಕಿ 25ನ್ನ ಖಂಡಿತ ಗೆಲ್ಲುತ್ತೆ ಅಂತೇಳುತ್ತಿದ್ದಾರೆ ಸಿಎಂ ಸಿದ್ರಾಮಯ್ಯ. ಹಾಗಾದ್ರೆ ಸಿದ್ರಾಮಯ್ಯನವರ ಈ ಆತ್ಮವಿಶ್ವಾಸದ ಬಗ್ಗೆ ನೀವೇನಂತಿರಾ?