ದಾವಣಗೆರೆ : ಲೋಕಸಭಾ ಕ್ಷೇತ್ರದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಅವರ ಕಾರ್ಯ ವೈಖರಿ ಮತ್ತು ಅಭಿವೃದ್ಧಿ ನೋಡಿ ಕಾಂಗ್ರೆಸ್ಗೆ ನಡುಕ ಉಂಟಾಗಿದೆ. ಸಿದ್ದೇಶ್ವರ್ ಅವರ ದೂರದೃಷ್ಟಿ, ಸಮಾಜಮುಖಿ ಕೆಲಸ ನೋಡಿ ಜನ ಅವರನ್ನು 4 ಬಾರಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಈ ಬಾರಿ ಸಿದ್ದೇಶ್ವರ್ ಅವರ ಬದಲಾಗಿ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ತಿಳಿಸಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸವಾಪಟ್ಟಣ ಮತ್ತು ತ್ಯಾವಣಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಲಗೆರೆ, ಕೋಟೆಹಾಳು, ಚಿರಡೋಣಿ, ಕಣಿವೆಬಿಳಚಿ, ಬಸವಪಟ್ಟಣ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಮತ್ತೊಂದು ಹೆಸರೇ ಮೋದಿ ಜೀ, ದಾವಣಗೆರೆ ಅಭಿವೃದ್ಧಿಗೆ ಇನ್ನೊಂದು ಹೆಸರೇ ಜಿಎಂಎಸ್.. ಅಂದರೆ ಜಿ.ಎಂ.ಸಿದ್ದೇಶ್ವರ್. ಕಾಂಗ್ರೆಸ್ ಅಭ್ಯರ್ಥಿಗೆ ಇಷ್ಟು ವರ್ಷ ಗ್ರಾಮೀಣ ಭಾಗದಲ್ಲಿ ತಮ್ಮ ಪತಿ, ಮಾವನವರು ಮಾಡಿರುವ ಕೆಲಸ ಹೇಳಿಕೊಳ್ಳಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾವು ಮೋದಿ ಜೀ ಅವರು ಮಾಡಿರುವ ಅಭಿವೃದ್ಧಿ ಕೆಸಲಗಳನ್ನು ಹೇಳಿಕೊಳ್ಳುತ್ತಿದ್ದೇವೆ. ನಮ್ಮ ಮನೆಯವರಾದ ಜಿ.ಎಂ.ಸಿದ್ದೇಶ್ವರ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಹೇಳಿಕೊಂಡು ಮತ ಕೇಳುತ್ತಿದ್ದೇವೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಜಿಲ್ಲೆಗೆ 1071 ಕೋಟಿ ಅನುದಾನ, ಇಎಸ್ಐ ಆಸ್ಪತ್ರೆ ಮೇಲ್ದರ್ಜೆಗೆ 12, ಅಮೃತ್ ಸರೋವರ್ ಯೋಜನೆಗೆ 7.35 ಕೋಟಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಕೋಟ್ಯಂತರ ರೂಪಾಯಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದು ಜಿ.ಎಂ.ಸಿದ್ದೇಶ್ವರ್ ಅವರು. ತ್ಯಾವಣಗಿ, ಬಸವಾಪಟ್ಟಣ ಪಂಚಾಯಿತಿ ವ್ಯಾಪ್ತಿಗೆ 2.75 ಕೋಟಿ ರೂಪಾಯಿ ಅನುದಾನ ತಂದು ರೈತ ಸಂಪರ್ಕ ಕೇಂದ್ರ ಹಾಗೂ ಬೀಜೋತ್ಪಾದನ ಕೇಂದ್ರ ಬಲವರ್ಧನೆ ಮಾಡಿದ್ದು ಜಿ.ಎಂ.ಸಿದ್ದೇಶ್ವರ್ ಅವರು ಎಂಬುದನ್ನು ನೀವು ಮರೆಯಬಾರದು ಎಂದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ, ತ್ಯಾವಣಗಿ, ಬಸವಾಪಟ್ಟಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜನ್ ಅವರ ಕೊಡುಗೆ ಏನು ಎಂಬುದನ್ನು ನೀವೇ ಯೋಚನೆ ಮಾಡಿ.
ನೀವು ಕಾಂಗ್ರೆಸ್ಗೆ ಮತ ಹಾಕಿದರೆ ನಿಮ್ಮ ಊರು, ಕ್ಷೇತ್ರ ಅಭಿವೃದ್ಧಿ ಶೂನ್ಯವಾಗತ್ತೆ. ಅದೇ ಬಿಜೆಪಿಗೆ ಮತ ಹಾಕಿದ್ರೆ ಊರು ಸಮೃದ್ಧಿಯಾಗತ್ತೆ, ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರ ಆಗತ್ತೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಬಿಜೆಪಿ ಸರ್ಕಾರದ ಸಾಧನೆ, ಸಿದ್ದೇಶ್ವರ್ ಅವರ ಅಭಿವೃದ್ಧಿ ಕೆಲಸಗಳನ್ನು ತಿಳಿಸಿ ಮತ ಕೇಳಬೇಕು. ಇಲ್ಲಿ ನಾನು ಪದನಿಮಿತ್ತ ಅಭ್ಯರ್ಥಿ ಅಷ್ಟೇ. ನಮ್ಮ ಕಾರ್ಯಕರ್ತರಾದ ನೀವೇ ನಿಜವಾದ ಅಭ್ಯರ್ಥಿ. ನೀವೇ ಅಭ್ಯರ್ಥಿ ಎಂದು ಓಡಾಡಿ ಇಲ್ಲಿ ನನ್ನನ್ನು ಬಹುಮತದಿಂದ ಗೆಲ್ಲಿಸಿ ಕಳುಹಿಸಿದರೆ ಮೋದಿ ಜೀ ಮತ್ತೊಮ್ಮೆ ಪ್ರಧಾನಿ ಆಗುವುದು ಖಚಿತ ಎಂದು ಕರೆ ನೀಡಿದರು.
ಮಾಜಿ ಶಾಸಕ ಪ್ರೊ.ಎನ್.ಲಿಂಗಣ್ಣ ಮಾತನಾಡಿ, ಮತದಾರರು ದೇಶದ ಹಿತದೃಷ್ಟಿ ಜೊತೆಗೆ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ. ದೇಶ ಸುರಕ್ಷತೆಯಿಂದ ಇರಬೇಕು ಅಂದರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ದಾವಣಗೆರೆ ಲೋಕಸಭಾ ಕ್ಷೇತ್ರ ಅಭಿವೃದ್ಧಿಯಾಗಬೇಕು ಅಂದರೆ ಗಾಯಿತ್ರಿ ಸಿದ್ದೇಶ್ವರ್ ಅವರು ಸಂಸದರಾಗಬೇಕು. ನಮ್ಮ ಕಾರ್ಯಕರ್ತರು, ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಗಾಯಿತ್ರಿ ಸಿದ್ಧೇಶ್ವರ್ ಅವರ ಪರ ಕೆಲಸ ಮಾಡಬೇಕು. ಅವರಿಗೆ ಹೆಚ್ಚಿನ ಮತಗಳನ್ನು ಹಾಕಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಬಸವರಾಜ್ ನಾಯ್ಕ್ ಮಾತನಾಡಿ, ಮಾಯಕೊಂಡ ಕ್ಷೇತ್ರ ಸೇರಿದಂತೆ ಇಡೀ ರಾಜ್ಯದ ಲಿಂಬಾಣಿ ಸಮುದಾಯ ಬಿಜೆಪಿ ಪರ ನಿಲ್ಲಬೇಕಿದೆ. ನಮ್ಮ ಸಮುದಾಯಕ್ಕೆ ಬಿಜೆಪಿ ಅನೇಕ ಸವಲತ್ತು ಮಾಡಿಕೊಟ್ಟಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಮಾಡುವ ಮೂಲಕ ನಮ್ಮ ಸಮುದಾಯದ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದರು.
ನಮ್ಮ ಆರಾಧ್ಯ ಸ್ಥಳ ಸಂತ ಸೇವಾಲಾಲ್ ದೇವಾಲಯ, ಪುಣ್ಯ ಕ್ಷೇತ್ರ ಅಭಿವೃದ್ಧಿಗೂ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರು. ಬಿಜೆಪಿ ಯಾವಾಗಲೂ ನಮ್ಮ ಪರ ಇದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಲಂಬಾಣಿ ಸಮುದಾಯದ ಪ್ರತಿಯೊಬ್ಬರೂ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರ ಪರ ನಿಲ್ಲಬೇಕು. ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ದೆಹಲಿಗೆ ಕಳುಹಿಸಬೇಕು ಎಂದರು ಕರೆ ನೀಡಿದರು.
ಸಂಗಮೇಶ್ ದ್ರಾಕ್ಷಾಯಿಣಿ ನಿರಾಣಿ, ಪ್ರೇಮ, ಮಾಗನೂರು ಪ್ರಭಣ್ಣ, ಅಣಬೇರು ಜೀವನಮೂರ್ತಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಜಿ.ಎಸ್.ಶ್ಯಾಮ್, ಮಂಡಲದ ಅಧ್ಯಕ್ಷ ದೇವೇಂದ್ರಪ್ಪ, ಹನುಮಂತನಾಯ್ಕ, ಮಂಜನಾಯ್ಕ್, ಹನುಮಂತಪ್ಪ, ಮಂಡಲದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಮುಖಂಡರು ಇದ್ದರು.
ಕಾಂಗ್ರೆಸ್ ಪಕ್ಷ ಎರಡಂಕಿ ದಾಟಲ್ಲ…!
ಮತಯಾಚನೆ ವೇಳೆ ಮಾತನಾಡಿದ ಗಾಯಿತ್ರಿ ಸಿದ್ದೇಶ್ವರ್ ಅವರು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ದಾಟುವುದಿಲ್ಲ. ಇಂಡಿಯ ಕೂಟ 120 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ. ಯಾವ ಕಾರಣಕ್ಕೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಸತ್ಯ ಅವರಿಗೂ ಗೊತ್ತಿದೆ. ನರೇಂದ್ರ ಮೋದಿ ಜೀ ಅಧಿಕಾರಕ್ಕೆ ಬರುವುದನ್ನು ತಡೆಯುವ ಉದ್ದೇಶದಿಂದ ಹೆಣ್ಣು ಮಕ್ಕಳಿಗೆ ವರ್ಷಕ್ಕೆ 1 ಲಕ್ಷ ಹಣ ನೀಡುವ ಸುಳ್ಳು ಗ್ಯಾರಂಟಿ ಕಾರ್ಡ್ಗಳನ್ನು ಕಾಂಗ್ರೆಸ್ನವರು ಹಂಚುತ್ತಿದ್ದಾರೆ. ವಾಸ್ತವವಾಗಿ ಇಷ್ಟೊಂದು ಹಣ ಹೊಂದಿಸಲು ದೇಶದ ಅರ್ಧ ಬಜೆಟ್ ಬೇಕಾಗುತ್ತದೆ. ಇದು ವಾಸ್ತವವಾಗಿ ಆಗುವ ಕೆಲಸ ಅಲ್ಲ ಅನ್ನುವ ವಿಚಾರ ಕಾಂಗ್ರೆಸ್ನವರಿಗೂ ಗೊತ್ತಿದೆ. ಜನರನ್ನು ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇದ್ಯಾವುದಕ್ಕೂ ಗಮನ ಕೊಡದೇ ನರೇಂದ್ರ ಮೋದಿ ಜೀ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಗದ್ದುಗೆಯಲ್ಲಿ ಕೂರಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. 400 ಕ್ಕೂ ಹೆಚ್ಚು ಸೀಟ್ ಗೆಲ್ಲಲಿರುವ ಎನ್.ಡಿ.ಎ. ಮಿತಕೂಟದ ನಡುವೆ ದಾವಣಗೆರೆಯ ಕಾಂಗ್ರೆಸ್ ಅಭ್ಯರ್ಥಿಗೆ ನೀವು ನೀಡುವ ಮತ ವ್ಯರ್ಥ ಆಗಲಿದೆ. ನಿಮ್ಮ ಅಮೂಲ್ಯ ಮತ ವ್ಯರ್ಥ ಮಾಡಿಕೊಳ್ಳಬೇಡಿ.. ಬಿಜೆಪಿ ಅಭ್ಯರ್ಥಿಗೆ ಮತ ನೀಡಿ.
ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ. ಜಿಲ್ಲೆಗೆ ನಿಮ್ಮ ಕೊಡುಗೆ ಏನು ಅಂತ ಚರ್ಚೆ ಮಾಡುವುದಕ್ಕೆ ಬನ್ನಿ ಎಂದು ನಮ್ಮ ಮುಖಂಡರಾದ ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಅವರು ಓಪನ್ ಚಾಲೆಂಜ್ ಕೊಟ್ಟಿದ್ದಾರೆ. ನಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ನಮ್ಮ ಸಾಮಾನ್ಯ ಕಾರ್ಯಕರ್ತರು ನಿಮ್ಮ ಜೊತೆ ಚರ್ಚೆ ಮಾಡ್ತಾರೆ. ಅಭಿವೃದ್ಧಿ ವಿಚಾರ ಚರ್ಚೆ ಮಾಡೋ ಮನಸ್ಸಿದ್ದರೆ ಬನ್ನಿ..
ಗಾಯಿತ್ರಿ ಸಿದ್ದೇಶ್ವರ್, ಬಿಜೆಪಿ ಅಭ್ಯರ್ಥಿ
ದೇಶದ ಹಿತದೃಷ್ಟಿಯಿಂದ ಬಿಜೆಪಿ, ಜೆಡಿಎಸ್, ಜೆಡಿಯು ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದೆ. ಮೈತ್ರಿಯ ಭಾಗವಾಗಿ ನಮ್ಮ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರನ್ನು ಗೆಲ್ಲಿಸಿಕೊಳ್ಳುವ ಜವಬ್ದಾರಿ ನಮ್ಮ ಮೇಲಿದೆ. ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಪ್ರತಿ ಬಾರಿ ಬೆಂಬಲ ಕೋರುತ್ತಿದ್ದರು. ಈ ಬಾರಿ ಪ್ರೀತಿ ಪೂರ್ವಕವಾಗಿ ಅವರಿಗೆ ಬೆಂಬಲ ನೀಡುತ್ತಿದ್ದೇನೆ. ನೀವೆಲ್ಲರೂ ಅವರ ಪರವಾಗಿ ನಿಂತು ಗೆಲ್ಲಿಸಬೇಕು.
ತೇಜಸ್ವಿ ಪಟೇಲ್, ಜೆಡಿಎಸ್ ಮುಖಂಡ