ಬೆಂಗಳೂರು : ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರುಹೇಳಿದ್ದಾರೆ. ಈ ಮಾತು ಇದೀಗ ರಾಜ್ಯ ರಾಜಕಾರಣದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. HD ಕುಮಾರಸ್ವಾಮಿ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಹಾಗಾದ್ರೆ BJP – JDS ವಿರುದ್ಧ ರೊಚ್ಚಿಗೇಳ್ತಾರಾ ಸ್ವಾಭಿಮಾನಿ ಮಹಿಳೆಯರು..? ಅಷ್ಟಕ್ಕೂ ಏನಿದು ಪ್ರಕರಣ ಅಂದ್ರಾ..?
ಶನಿವಾರ ತುಮಕೂರಿನ ತುರುವೇಕೆರೆಯಲ್ಲಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಡಿಕೆ, ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಹಳ್ಳಿಯ ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಸ್ಥಳದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಸ್ವಲ್ಪ ಗಮನ ಇಟ್ಟು ಎರಡು ಮಾತುಗಳನ್ನು ಕೇಳಿ. ಇವತ್ತಿನ ಕಾಂಗ್ರೆಸ್ ಸರ್ಕಾರ ಕಳೆದ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರಿಂದ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ. ಈ ರೀತಿ ಉಚಿತ ಯೋಜನೆ ಕೊಟ್ಟರೆ ಹಳ್ಳಿಯ ತಾಯಂದಿರ ಬದುಕು ಏನಾಗಬೇಕು? ಈ ಬಗ್ಗೆ ಎಲ್ಲರೂ ಯೋಚನೆ ಮಾಡಬೇಕಿದೆ. ನಿಮ್ಮ ಕುಟುಂಬದ ಬದುಕೇನಾಗಬೇಕು ಯೋಚನೆ ಮಾಡಬೇಕಿದೆ. ಅವರಿಗೆ ಐದು ಉಚಿತ ಗ್ಯಾರಂಟಿ ಬಿಟ್ಟು ಬೇರೆ ಏನೂ ಇಲ್ಲ” ಎಂದು ಟೀಕಿಸಿದ್ದಾರೆ. ಕುಮಾರಸ್ವಾಮಿಯವರ ಆ ಮಾತುಗಳನ್ನ ನೀವು ಒಮ್ಮೆ ಕೇಳಿಸಿಕೊಂಡು ಬಿಡಿ
ಕುಮಾರಸ್ವಾಮಿಯವರ ಮಾತಿಗೆ ಮಂಡ್ಯದಲ್ಲಿ ಮಹಿಳೆಯರು ಗೋಬ್ಯಾಕ್ ಕುಮಾರಸ್ವಾಮಿ ಅಂತೇಳಿ ಪ್ರತಿಭಟನೆ ನಡೆಸಿದ್ದಾರೆ. ಹೆಣ್ಣು ಮಕ್ಕಳ ವಿರುದ್ಧ ನಾಲಿಗೆ ಹರಿಬಿಟ್ಟ ಕುಮಾರಸ್ವಾಮಿಗೆ ಧಿಕ್ಕಾರ ಅಂತೇಳಿ ಘೋಷಣೆಗಳನ್ನ ಕೂಗಿದ್ದಾರೆ.ಇನ್ನ ಈ ಬಗ್ಗೆ ರಿಯಾಕ್ಟ್ ಮಾಡಿರೋ ಸಿಎಂ ಸಿದ್ರಾಮಯ್ಯ, ಇದು ಹೆಚ್ಡಿ ಕುಮಾರಸ್ವಾಮಿಯವರ ಮನಸ್ಥಿತಿಯನ್ನ ಸೂಚಿಸುತ್ತೆ ಅಂತೇಳಿ ಕಿಡಿಕಾರಿದ್ದಾರೆ.
ಇತ್ತ ಡಿಸಿಎಂ ಡಿಕೆಶಿ ಕೂಡ ಹೆಚ್ಡಿಕೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ನಾಡಿನ ತಾಯಂದಿರಿಗೆ ಕುಮಾರಸ್ವಾಮಿ ಅವಮಾನ ಮಾಡಿದ್ದಾರೆ. ಇದಕ್ಕೆ NDA ಯಿಂದ ಟಿಕೆಟ್ ಕೊಟ್ಟಿರೋ ಪ್ರಧಾನಿ ಮೋದಿ ಉತ್ರ ಕೊಡಬೇಕು ಅಂತೇಳಿ ಆಗ್ರಹಿಸಿದ್ದಾರೆ.
ಹೀಗೆ ಈ ವಿವಾದ ದೊಡ್ಡದಾಗುತ್ತಿದ್ದಂತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರು ತಮ್ಮ ಮಾತಿಗೆ ಸ್ಪಷ್ಟಣೆ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆ ಹೆಸರಿನಲ್ಲಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ನಾನು ಮಹಿಳೆಯರಿಗೆ ಅಪಮಾನ ಮಾಡಿಲ್ಲ. ಮುಗ್ಧ ಜನರನ್ನು, ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದೇನೆ ಅಂತೇಳಿದ್ದಾರೆ.
ಅದೇನೇ ಇರ್ಲಿ, ಕುಮಾರಸ್ವಾಮಿಯವರ ಈ ಒಂದು ಮಾತು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾದ ರಾಜ್ಯದ ಮಹಿಳೆಯರ ಕಡು ಕೋಪಕ್ಕೆ ಕಾರಣವಾಗಿದೆ. NDA ವಿರುದ್ಧ ಚುನಾವಣೆಯಲ್ಲಿ ತಿರುಗಿ ಬೀಳುವಂತೆ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.