ದಾವಣಗೆರೆ : ಬೆಕ್ಕು ಕಣ್ಮುಚ್ಕೊಂಡು ಹಾಲು ಕುಡಿದ್ರೆ ಯಾರಿಗೂ ಗೊತ್ತಾಗಲ್ಲ ಅಂತದ್ಕೊಳ್ಳುತ್ತಂತೆ. ಅದೇ ರೀತಿ ವಿರೋಧ ಪಕ್ಷಗಳ ನಾಯಕರುಗಳ ಮೇಲೂ ಐಟಿ, ಇಡಿ ಮತ್ತು ಸಿಬಿಐ ದಾಳಿಗಳು ನಡೆದು ಹೋಗ್ತಾವೆ. ಇಷ್ಟೇ ಆಗಿದ್ರೆ ಪರ್ವಾಗಿರ್ಲಿಲ್ಲ. ಆದ್ರೆ 2019ರ ಚುನಾವಣೆಯಿಂದ ಹೊಸ ಪದ್ಧತಿ ಜಾರಿಗೆ ಬಂದಿದೆ.. ಅದೇನು ಅಂದ್ರೆ ವಿರೋಧ ಪಕ್ಷಗಳ ಕೈಗೆ ಹಣನೇ ಸಿಗದಂತೆ ಮಾಡೋದು ಕೇಂದ್ರ ಬಿಜೆಪಿ ನಾಯಕರ ಹೊಸ ವರಸೆ ಅನ್ನೋ ಆರೋಪಗಳು ಕೇಳಿಬರ್ತಾಯಿವೆ.
ಹಾಗಾದ್ರೆ ರೈತರ ಆದಾಯ ಡಬಲ್ ಮಾಡ್ತೀವಿ., ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನ ಸೃಷ್ಟಿ ಮಾಡ್ತಿವಿ ಅನ್ನೋ ಬಣ್ಣದ ಮಾತುಗಳನ್ನ ಹೇಳಿದ್ದ ಮೋದಿ ಆ ಮೂಲಕ ಜನರ ಮೂಗಿಗೆ ತುಪ್ಪ ಸವರುತ್ತಿದ್ದಾರಾ.? ಎಲೆಕ್ಷನ್ ಟೈಮಲ್ಲಿ ಕಾಂಗ್ರೆಸ್ ಖಾತೆಗಳು ಫ್ರೀಜ್ ಆಗ್ತಿರೋದ್ಯಾಕೆ.? 2019ರ ಹಳೆ ರಣತಂತ್ರದ ಮೊರೆ ಹೋಗಿದ್ಯಾಕೆ ಕೇಂದ್ರ ಬಿಜೆಪಿ ಸರ್ಕಾರ.? ಬಿಜೆಪಿ ನಾಯಕರಿಗೆ ಸೋಲಿನ ಭೀತಿ ಶುರುವಾಗಿದ್ಯಾ.? ಅಷ್ಟಕ್ಕೂ ಏನಿದು ಲೆಕ್ಕಾಚಾರ ಅಂದ್ರಾ?
ಕಾಂಗ್ರೆಸ್ಗೆ ಶಾಕ್ ನೀಡಿದ ಐಟಿ ಇಲಾಖೆ , ಪಕ್ಷದ ಬ್ಯಾಂಕ್ ಅಕೌಂಟ್ನಲ್ಲಿ ₹115 ಕೋಟಿ ಫ್ರೀಜ್!
ಅದು ಫೆಬ್ರವರಿ 16.. ಅಂದ್ರೆ ಹತ್ರತ್ರ 1 ತಿಂಗಳ ಹಿಂದೆ.. ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ಗಳನ್ನು ನಿಷೇಧಿಸಿತ್ತು. ಇದಾದ ಮರು ದಿನ ಅಂದ್ರೆ ಫೆಬ್ರವರಿ 17ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮೂರು ಬ್ಯಾಂಕ್ ಖಾತೆಗಳನ್ನು ಐಟಿ ಇಲಾಖೆ ಸ್ಥಗಿತಗೊಳಿಸಿತ್ತು. ಸಾರ್ವಜನಿಕರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಲಾದ 210 ಕೋಟಿ ರೂ.ಗಳಿಗೆ ತೆರಿಗೆ ಪಾವತಿಸಿಲ್ಲ ಅಂತೇಳಿ ಐಟಿ ಇಲಾಖೆ ಕಾಂಗ್ರೆಸ್ಗೆ ಸೇರಿದ ಮೂರು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿತ್ತು. ಅಷ್ಟೇ ಅಲ್ಲ., ಇದುವರೆಗೂ ಆ ಹಣವನ್ನ ಬಿಡುಗಡೆ ಮಾಡಿಲ್ಲ. ತನಿಖೆಯೂ ಆಗಿಲ್ಲ ಅಂತೇಳಿ ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ..
ಈ ಬಗ್ಗೆ ಟ್ವೀಟ್ ಮಾಡಿರೋ ಸಿಎಂ ಸಿದ್ರಾಮಯ್ಯ, ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಕ್ರಮ ಅಧಿಕಾರದ ದುರುಪಯೋಗ ಮಾತ್ರವಲ್ಲ, ವಿರೋಧ ಪಕ್ಷಗಳನ್ನು ಹಣಿಯುವ ಸರ್ವಾಧಿಕಾರಿ ನಡೆಯಾಗಿದೆ.
ಕಾನೂನುಬಾಹಿರವಾದ ಈ ಕ್ರಮವನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ನಿರ್ದೆಶನ ನೀಡಬೇಕು ಎಂದು ಆಗ್ರಹಪಡಿಸುತ್ತೇನೆ. ಚುನಾವಣಾ ಸಮಯದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಕಾಂಗ್ರೆಸ್ ಪಕ್ಷ ಹಣದ ಕೊರತೆಯಿಂದ ಗೋಳಾಡುವಂತೆ ಮಾಡಬೇಕೆನ್ನುವುದೇ ಬಿಜೆಪಿ ಸರ್ಕಾರದ ದುರುದ್ದೇಶವಾಗಿದೆ.
ನಮ್ಮ ಪಕ್ಷದ ಖಾತೆಯಲ್ಲಿರುವುದು ಪಕ್ಷದ ಅಭಿಮಾನಿಗಳಾದ ಸಾಮಾನ್ಯ ಜನರಿಂದ ಸಂಗ್ರಹವಾಗಿರುವ ಹಣ, ಅದರಲ್ಲಿರುವುದು ದೊಡ್ಡ ಉದ್ಯಮಪತಿಗಳದ್ದಲ್ಲ. ಹೀಗಿದ್ದರೂ ಯಾಕೆ ಇಂತಹ ಕ್ರಮ ಅಂತೇಳಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಚುನಾವಣಾ ಬಾಂಡ್ಗಳ ಮೂಲಕ ಸಾವಿರಾರು ಕೋಟಿ ಸುಲಿಗೆ’? ಚುನಾವಣಾ ಆಯೋಗ ಮೌನವಾಗಿರೋದ್ಯಾಕೆ’ – ಸಿದ್ದು
ಚುನಾವಣಾ ಬಾಂಡ್ ಗಳ ಮೂಲಕ ಉದ್ಯಮಿಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿ ತಮ್ಮ ಖಾತೆಗೆ ತುಂಬಿಸಿಕೊಂಡಿರುವ ಬಿಜೆಪಿ ಬಗ್ಗೆ ಚುನಾವಣಾ ಆಯೋಗ ಮೌನವಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಆಯೋಗ ತಕ್ಷಣ ಇದನ್ನು ಗಮನಿಸಿ ನಮ್ಮ ಪಕ್ಷಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯಲ್ಲಿ ಸೋಲಿನ ಭಯ ಹುಟ್ಟಿಕೊಂಡಿದೆ. ಸಾರ್ವಜನಿಕವಾಗಿ ಎದೆಯುಬ್ಬಿಸಿ ಏನೇ ಕೊಚ್ಚಿಕೊಂಡರೂ ಆಂತರ್ಯದಲ್ಲಿರುವ ಆತ್ಮಸಾಕ್ಷಿ ಸತ್ಯವನ್ನೇ ಹೇಳುತ್ತದೆ. 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಾಯಲ್ಲಿ ಹೇಳಿಕೊಂಡರೂ ವಾಸ್ತವದ ಸ್ಥಿತಿ ಏನೆನ್ನುವುದು ನರೇಂದ್ರ ಮೋದಿಗೆ ಗೊತ್ತಿದೆ. ಈ ಭಯದ ಕಾರಣದಿಂದಲೇ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವ ಸೇಡಿನ ಕ್ರಮಕ್ಕೆ ಮುಂದಾಗಿದೆ ಅಂತೇಳಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ, “ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಮುಖವಾಡ ಅಷ್ಟೆ, ಅದರ ಹಿಂದೆ ಸರ್ಕಾರವನ್ನು ಮುನ್ನಡೆಸುವ ಒಂದು “ದುಷ್ಟ ಶಕ್ತಿ’’ ಇದೆ ಎಂದು ನಮ್ಮ ನಾಯಕರಾಗಿರುವ ರಾಹುಲ್ಗಾಂಧಿ ಅವರು ಹೇಳಿರುವುದು ಸರಿಯಾಗಿದೆ.
ಆ “ದುಷ್ಟ ಶಕ್ತಿ’’ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಲಯವನ್ನು ಕೂಡಾ ಬುಡಮೇಲು ಮಾಡಲು ಹೊರಟಿದೆ. ಇದನ್ನು ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ ಅಂತೇಳಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ನಿಮಗೆ ಗೊತ್ತಿರ್ಲಿ, ದೇಶದಲ್ಲಿ 2016ರ ನವೆಂಬರ್ ತಿಂಗಳಲ್ಲಿ ಹಳೆ 500 ಮತ್ತು 1000ರೂಪಾಯಿ ಮುಖಬೆಲೆಯ ನೋಟುಗಳನ್ನ ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು. ಆ ಮೂಲಕ ದೇಶದಲ್ಲಿ ಕಪ್ಪು ಹಣಕ್ಕೆ ಕಡಿವಾಣ ಹಾಕೋದಕ್ಕೆ ಪ್ರಧಾನಿ ಮೋದಿ ಪ್ಲ್ಯಾನ್ ಮಾಡಿದ್ರು. ಆದ್ರೆ ಇಂದಿಗೂ ಐಟಿ ರೇಡ್ ಆದಾಗ ರಾಜಕೀಯ ಪಕ್ಷಗಳ ನಾಯಕರುಗಳ ಮನೆಗಳಲ್ಲಿ ಕೋಟಿ ಕೋಟಿ ಕಪ್ಪು ಹಣ ಸಿಕ್ತಾಯಿದೆ. ಈ ಹಿಂದೆ ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಮಗನ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಾಗ ಕೋಟಿ ಕೋಟಿ ಹಣ ಪತ್ತೆಯಾಗಿತ್ತು. ಅದು ಕಪ್ಪು ಹಣವೇ ಇರ್ಲಿ, ಸಕ್ರಮ ಹಣವೇ ಇರ್ಲಿ., ಅಷ್ಟು ದೊಡ್ಡ ಪ್ರಮಾಣದಲ್ಲಿ ನಗದು ಹಣವನ್ನ ಶೇಖರಿಸಿಡೋದು ಎಷ್ಟು ಸರಿ.? ಹಾಗಾದ್ರೆ 2016ರಲ್ಲಿ ಮೋದಿ ನೋಟ್ ಬ್ಯಾನ್ ಮಾಡಿದ್ದರಿಂದ ದೇಶದಲ್ಲಿ ಅದ್ಯಾಕೆ ಕಪ್ಪು ಹಣಕ್ಕೆ ಕಡಿವಾಣ ಬಿದ್ದಿಲ್ಲ.? ಇನ್ನ ಮೋದಿ 2016ರಲ್ಲಿ ನೋಟ್ ಬ್ಯಾನ್ ಮಾಡಿದ್ದನ್ನ ನೋಡಿ ದೇಶದ ಜನ ಈ ಹಿಂದೆ ಮೋದಿ ಹೇಳಿದಂತೆ ವಿದೇಶಗಳಲ್ಲಿರೋ ಭಾರತೀಯರ ಕಪ್ಪು ಹಣವನ್ನ ದೇಶಕ್ಕೆ ವಾಪಸ್ ತರ್ತಾರೆ. ಆ ಮೂಲಕ ದೇಶದ ಪ್ರತಿಯೊಬ್ಬರ ಬಡವರ ಖಾತೆಗಳಿಗೆ 15 ಲಕ್ಷ ರೂಪಾಯಿ ಹಣವನ್ನ ಜಮೆ ಮಾಡ್ತಾರೆ ಅಂತೇಳಿ ದೇಶದ ಬಡ ಮತ್ತು ಮಧ್ಯಮ ವರ್ಗದ ಜನ ಭಾವಿಸಿದ್ರು. ಆದ್ರೆ 10 ವರ್ಷ ಕಳೆದ್ರೂ ಬಡ ಮತ್ತು ಮಧ್ಯಮ ವರ್ಗದ ಜನರ ಆಸೆ ಈಡೇರೇ ಇಲ್ಲ. ಮೋದಿ ತಮ್ಮ ಮೂಗಿಗೆ ತುಪ್ಪ ಸವರಿದ್ರು ಅಂತ ಅರ್ಥ ಮಾಡಿಕೊಳ್ಳೋವಷ್ಟರೊಳಗೆ ಮೋದಿ 2 ಸಲ ಗೆದ್ದು, 10 ವರ್ಷ ಈ ದೇಶದ ಪ್ರಧಾನಿಯಾಗಿ ಅಧಿಕಾರ ಅನುಭವಿಸಿದ್ರು.
ಇಲ್ಲಿ ಗಮನಿಸಬೇಕಾದ ಅಂಶ ಏನಂದ್ರೆ 2016ರಲ್ಲಿ ನೋಟ್ ಬ್ಯಾನ್ ಮಾಡಿದ್ದು, ದೇಶದಲ್ಲಿರೋ ಕಪ್ಪು ಹಣಕ್ಕೆ ಕಡಿವಾಣ ಹಾಕೋದಕ್ಕಾ.? ಅಥವಾ ಕೇವಲ ವಿರೋಧ ಪಕ್ಷಗಳ ಬಳಿ ಇರೋ ಕಪ್ಪು ಹಣಕ್ಕೆ ಕಡಿವಾಣ ಹಾಕೋದಕ್ಕಾ ಅನ್ನೋ ಅನುಮಾನ ವ್ಯಕ್ತವಾಗ್ತಾಯಿದೆ. ಅಂದ್ರೆ 2016ರಲ್ಲಿ ನೋಟ್ ಬ್ಯಾನ್ ಮಾಡಿ ಆನಂತರ 2019ರ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಕೈಗೆ ಹಣ ಸಿಗದಂತೆ ಮಾಡಿ ಬಿಜೆಪಿ ನಾಯಕರು ಗೆದ್ರಾ ಅನ್ನೋ ಅನುಮಾನವೂ ಕಾಡ್ತಾಯಿದೆ.
ಅದೇ ರೀತಿ ಈಗ್ಲೂ ಲೋಕಸಭಾ ಚುನಾವಣೆಗೆ ಇನ್ನು 2 ತಿಂಗಳು ಬಾಕಿ ಇರೋವಾಗ ಕಳೆದ ಫೆಬ್ರವರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮೂರು ಬ್ಯಾಂಕ್ ಖಾತೆಗಳನ್ನು ಐಟಿ ಇಲಾಖೆ ಸ್ಥಗಿತಗೊಳಿಸಿತ್ತು.. ಆ ಮೂಲಕ 210 ಕೋಟಿ ರೂಪಾಯಿಯನ್ನ ಫ್ರೀಜ್ ಮಾಡಿರೋದನ್ನ ನೋಡಿದ್ರೆ 2019ರಂತೆ ಕೇಂದ್ರ ಬಿಜೆಪಿ ನಾಯಕರು ಈಗ್ಲೂ ಕಾಂಗ್ರೆಸ್ ಕೈಗೆ ಹಣ ಸಿಗಬಾರ್ದು ಅನ್ನೋ ಧೋರಣೆ ಹೊಂದಿದ್ಯಾ ಅನ್ನೋ ಅನುಮಾನ ವ್ಯಕ್ತವಾಗ್ತಾಯಿದೆ.. ಜೊತೆಗೆ ಕಾಂಗ್ರೆಸ್ ನಾಯಕರ ಆರೋಪ ಈ ಅನುಮಾನಕ್ಕೆ ರೆಕ್ಕ ಪುಕ್ಕ ಕೊಡ್ತಾಯಿರೋದಂತೂ ಸುಳ್ಳಲ್ಲ. ಹಾಗಾದ್ರೆ ಬಿಜೆಪಿ ನಾಯಕರಿಗೆ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಭೀತಿ ಶುರುವಾಗಿದ್ಯಾ.? ಸಿಎಂ ಸಿದ್ದರಾಮಯ್ಯನವರು ಬಿಜೆಪಿ ವಿರುದ್ಧ ಮಾಡಿರೋ ಗಂಭೀರ ಆರೋಪದ ಬಗ್ಗೆ ನೀವೇನಂತಿರಾ?..