ಶಿವಮೊಗ್ಗ : ಮನೆಯೊಂದರ ಬಳಿ ಕಾಣಿಸಿಕೊಂಡ ಬೃಹದಾಕಾರದ ಕಾಳಿಂಗ ಸರ್ಪವನ್ನು, ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ಸಂರಕ್ಷಿಸಿದ ಘಟನೆ, ಶಿವಮೊಗ್ಗ ತಾಲೂಕಿನ ಮಲೆಶಂಕರ ಅರಣ್ಯ ವಲಯ ವ್ಯಾಪ್ತಿಯ ಮಂಜರಿಕೊಪ್ಪ ಗ್ರಾಮದಲ್ಲಿ ನಡೆದಿದೆ.ಮಂಜರಿ ಕೊಪ್ಪ ಗ್ರಾಮದ ಕೆರೋಡಿ ನಾಗರಾಜ್ ಎಂಬುವವರ ಮನೆಯ ಪಕ್ಕದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು.
ತಕ್ಷಣವೇ ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಗ್ರಾಮಸ್ಥರು ಮಾಹಿತಿ ರವಾನಿಸಿದ್ದರು.ಸ್ಥಳಕ್ಕಾಗಮಿಸಿದ ಕಿರಣ್ ಅವರು, ಸರಿಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಸಮೀಪದ ಅರಣ್ಯಕ್ಕೆ ಹಾವನ್ನು ಬಿಟ್ಟಿದ್ದಾರೆ.