ನಂದೀಶ್ ಭದ್ರಾವತಿ ದಾವಣಗೆರೆ
ವಿನೋಭನಗರದ ಚೌಡೇಶ್ವರಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಅಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ನೇತೃತ್ವದಲ್ಲಿ ನಡೆಯಿತು. ಈ ಭಾಗದಲ್ಲಿ ಎರಡು ವರ್ಷದ ನಂತರ ಹಬ್ಬದ ಕಳೆ ಮೂಡಿತ್ತು. ಅತ್ಯಾಕರ್ಷಕ ಮಂಟಪ ನೋಡುಗರ ಗಮನಸೆಳೆಯಿತು. ಭಕ್ತರು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸು ತಾಯಿ ಎಂದು ಬೇಡಿಕೊಂಡರು. ಕೆಲವರು ಹರಕೆ ತೀರಿಸಿದರು.
ಜಾತ್ರೆ ನಿಮಿತ್ತ ಇಡೀ ವಿನೋಭನಗರ ದೇವಿ ಮಡಿಲಲ್ಲಿ ಮುಳುಗಿತ್ತು. ನಗರದೇವತೆ ದುರ್ಗಾಂಬಿಕಾ ಜಾತ್ರೆಯೊಂದಿಗೇ ವಿನೋಬನಗರದ ಚೌಡೇಶ್ವರಿ ದೇವಿಯ ಜಾತ್ರೆಯೂ ನಡೆಯುವುದು ವಿಶೇಷವಾಗಿದ್ದು, ಭಕ್ತರು, ಹೋಳಿಗೆ ಸೇರಿದಂತೆ ಇತರೆ ಖಾದ್ಯಗಳನ್ನು ನೇವೈದ್ಯ ಮಾಡಿಸಿದರು. ದೇವರನ್ನು ನಾನಾ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಮಾರ್ಚ್ 17ರಿಂದ ಚೌಡೇಶ್ವರಿ ದೇವಿ ಜಾತ್ರೆ ಆರಂಭಗೊಂಡಿದ್ದು, 19ರವರೆಗೆ ವಿಜೃಂಭಣೆಯಿಂದ ನಡೆಯಿತು. . ದುರ್ಗಾಂಬಿಕಾ ದೇವಿ ಜಾತ್ರೆಯ ಮಾದರಿಯಲ್ಲೇ ಈ ಜಾತ್ರೆಯೂ ನಡೆಯುವುದು ವಿಶೇಷ.ವಾಗಿದ್ದು, ಅದೇ ಮಾದರಿಯಲ್ಲಿ ಈ ಊರಿನಲ್ಲಿ ಜಾತ್ರೆ ಕಳೆ್ಟ್ಟುತ್ತದೆ. ಅಲ್ಲದೇ ದುಗ್ಗಮ್ಮನ ಜಾತ್ರೆ ನಡೆಯುವ ಸಮಯದಲ್ಲೇ ಈ ಜಾತ್ರೆ ನಡೆಯುವುದು ಹಲವು ವರ್ಷಗಳಿಂದ ಬಂದ ಸಂಪ್ರದಾಯ.
ಚೌಡೇಶ್ವರಿ ಇತಿಹಾಸ
ಜೊಳ್ಳಿ ಸಮುದಾಯದ ಹಿರಿಯರು ದೇವಿಯ ದೇವಾಲಯ ನಿರ್ಮಿಸಿದರು. ಜೊಳ್ಳಿ ಫಕ್ಕೀರಪ್ಪ, ಮೀಸೆ ದುರ್ಗಪ್ಪ, ತಳವಾರ್ ರಾಮಣ್ಣ ಅವರು ದೇವಾಲಯ ಸ್ಥಾಪಿಸಿದರು. ಇವರಿಗೆ ಬಡಾವಣೆಯ ಜನ ಕೈಜೋಡಿಸಿದರು.ರೈಲ್ವೆ ಹಳಿಯಿಂದ ಆ ಕಡೆಗೆ ದುರ್ಗಾಂಬಿಕಾ ದೇವಿಯಂತೆಯೇ, ರೈಲ್ವೆ ಹಳಿಯಿಂದ ಈಚೆಗೆ ಚೌಡೇಶ್ವರಿ ದೇವಾಲಯ ನಿರ್ಮಿಸಲಾಗಿದೆ’ ಎಂದು ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಹೇಳುತ್ತಾರೆ.
ದೇವಿಯ ರಥೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗಿದೆ.ಜಾತ್ರೆಯ ಅಂಗವಾಗಿ ಮಾರ್ಚ್ 6 ಹಾಗೂ 7ರಂದು ಟಗರಿನ ಕಾಳಗ ನಡೆದಿದ್ದು, ಮಾ.17ರಂದು ಬೆಳಿಗ್ಗೆ ಅಭಿಷೇಕ ಮತ್ತು ಕಂಕಣಧಾರಣೆ ನಡೆಸುವುದರೊಂದಿಗೆ ರಾತ್ರಿ ಸಾರು ಹಾಕುವ ಕಾರ್ಯಕ್ರಮ ನಡೆಯಿತು.ಮಾರ್ಚ್ 19ರಂದು ಬೆಳಗ್ಗೆ ಚೌಡೇಶ್ವರಿ ದೇವಿಯ ಮಹಾಪೂಜೆ ನಡೆಯಿತು. ವಿನೋಬನಗರ, ಯಲ್ಲಮ್ಮನಗರ, ರಿಂಗ್ ರೋಡ್, ಎಂಸಿಸಿ ‘ಎ’ ಬ್ಲಾಕ್ನಲ್ಲಿ ಚೌಡೇಶ್ವರಿ ದೇವಿಯ ಮೂರ್ತಿಯ ಮೆರವಣಿಗೆ ನಡೆದಿದೆ. . ರಾಜ್ಯ ಹಾಗೂ ಹೊರರಾಜ್ಯಗಳ ವಿವಿಧ ಕಲಾ ತಂಡಗಳಾದ ಬೆದರುಗೊಂಬೆ, ಹಲಗೆ, ಡೋಲು, ಬ್ಯಾಂಡ್– ಭಜಂತ್ರಿ ತಂಡಗಳು ಭಾಗವಹಿಸಿದ್ದವು ಎಂದು ಶ್ರೀನಿವಾಸ ದಾಸಕರಿಯಪ್ಪ ಹೇಳಿದರು.
ಚರಗ ಚೆಲ್ಲಿದರು
ಮಾ.20ರಂದು ಬುಧವಾರ ಪದ್ಧತಿ ಪ್ರಕಾರ ಚರಗ ಚಲ್ಲುವ ಕಾರ್ಯಕ್ರಮ, ಚೌಡೇಶ್ವರಿ ದೇವಿಗೆ ಮಹಾಪೂಜೆ ನಡೆದಿದೆ. ಮಾರ್ಚ್ 29ರಂದು ಮಧ್ಯಾಹ್ನ 12ಕ್ಕೆ ದೇವಿಯ ಮಹಾಮಂಟಪದಲ್ಲಿ ರತ್ನಮ್ಮ ದೇವರಮನೆ ಮಹಾರುದ್ರಪ್ಪ ಮತ್ತು ದೇವರಮನೆ ಶಿವಕುಮಾರ್ ಅವರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ಅಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಹೇಳಿದರು.
ಬಾಡೂಟ ಘಮ
ವಿನೋಭನಗರದ ಯಾವ ಮೂಲೆಗೆ ಹೋದ್ರು ಚೌಡೇಶ್ವರಿ ಜಾತ್ರೆ ನಿಮಿತ್ತ ಬಾಡೂಟದ ಘಮ ಜೋರಾಗಿತ್ತು.ಕುರಿ, ಕೋಳಿ, ಅಗತ್ಯ ವಸ್ತುಗಳ ಬೆಲೆ ಹೆಚ್ಚಿದ್ದರೂ, ಜನ ಕ್ಯಾರೇ ಎನ್ನದೇ ಹಬ್ಬ ಮಾಡಿದರು. ಎರಡು ವರ್ಷಕ್ಕೊಮ್ಮೆ ನಡೆಯುವ ದುಗ್ಗಮ್ಮನ ಜಾತ್ರೆಗೆ ಎಷ್ಟೇ ಖರ್ಚಾದರೂ ಸರಿಯೇ ಬಾಡೂಟ ಮಾಡಲೇಬೆಕೆಂದು ಜನ ಕುರಿ, ಕೋಳಿ ತಂದಿದ್ದರು. ಅಲ್ಲದೆ ಮನೆಗಳಿಗೆ ಬೀಗರು, ನೆಂಟರಿಷ್ಟರು ಬಾಡೂಟ ಸವಿದರು. ಬಾಡೂಟಕ್ಕಾಗಿ ಹಲವಾರು ಕಡೆಗಳಲ್ಲಿ ಶಾಮಿಯಾನಗಳ ವ್ಯವಸ್ಥೆ ಸಹ ಮಾಡಿಕೊಳ್ಳಲಾಗಿತ್ತು. ಕುರಿಯ ಜೊತೆಗೆ ಕೋಳಿ, ತರಕಾರಿ, ಹೂವು, ಹಣ್ಣುಗಳ ಬೆಲೆಯೂ ಸಾಮಾನ್ಯ ದಿನಗಳಗಿಂತಲೂ ದುಬಾರಿ ಆಗಿತ್ತು. ಆದರೆ, ಹಬ್ಬದ ಲೆಕ್ಕಾಚಾರದ ಮುಂದೆ ಯಾವುದೂ ಗಣನೆಗೆ ತೆಗೆದುಕೊಳ್ಳದ ಜನರು ಅದ್ಧೂರಿ ಹಬ್ಬದಾಚರಣೆ ಮಾಡಿದರು.
ಇಚ್ಟಾರ್ಥ ನೆರವೇರಿಸುವ ದೇವಿ
ಪ್ರತಿ 2 ವರ್ಷಗಳಿಗೊಮ್ಮೆ ಈ ಜಾತ್ರೆ ನಡೆಯುವುದು ವಿಶೇಷ. ಪದ್ಧತಿಯಂತೆ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ತಮ್ಮ ಇಷ್ಟಾರ್ಥವನ್ನು ದೇವಿ ಈಡೇರಿಸುತ್ತಾಳೆ ಎಂಬ ನಂಬಿಕೆ ಭಕ್ತರದ್ದು. ಹಾಗಾಗಿ ವಿವಿಧೆಡೆಯಿಂದ ಭಕ್ತರು ದೇವಿಗೆ ಹರಕೆ ಹೊರುತ್ತಾರೆ.‘
ಹಳೇ ದಾವಣಗೆರೆಯಲ್ಲಿ ನಗರದೇವತೆ ಶ್ರೀ ದುರ್ಗಾಂಬಿಕಾ ಜಾತ್ರೆಯ ಮಾದರಿಯಲ್ಲೇ ಹೊಸ ದಾವಣಗೆರೆಯಲ್ಲಿ ಚೌಡೇಶ್ವರಿ ಜಾತ್ರೆ ನಡೆಯುತ್ತದೆ. ಹಳೇ ದಾವಣಗೆರೆಯಲ್ಲಿ ಹಿಂದಿನಿಂದಲೇ ದುರ್ಗಾಂಬಿಕಾ ದೇವಸ್ಥಾನ ಇದೆ. ದಾವಣಗೆರೆ ಬೆಳೆದಂತೆಯೇ 80 ವರ್ಷಗಳ ಹಿಂದೆ ಹೊಸ ದಾವಣಗೆರೆ ಭಾಗದಲ್ಲಿ ಚೌಡೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಎರಡು ಜಾತ್ರಾ ಆಚರಣೆಗಳು ಒಂದೇ ರೀತಿ ಇರುತ್ತವೆಮ ಮುಖಂಡರಾದ ಟಿ.ಲಕ್ಷ್ಮಣಪ್ಪ, ಟಿ.ದಾಸಕರಿಯಪ್ಪ, ಜಿ.ಶಿವಯೋಗಪ್ಪ, ಎ.ರಾಜಣ್ಣ, ಮೂರ್ತಿ, ವಕೀಲ ತಿಮ್ಮಪ್ಪ ಸೇರಿದಂತೆ ಅನೇಕ ಹಿರಿಯರೂ ಸೇರಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ’ ಎಂದು ಶ್ರೀನಿವಾಸ ದಾಸಕರಿಯಪ್ಪ ತಿಳಿಸುತ್ತಾರೆ.‘ಈ ಬಾರಿಯ ಜಾತ್ರೆಗೆ ಸಾಗರದ ಸಂಜಯ್ ಅವರು ಮಹಾಮಂಟಪ ನಿರ್ಮಾಣ ಮಾಡಿದ್ದು, ಬೆಳಕಿನ ವ್ಯವಸ್ಥೆಯನ್ನು ವಿರೂಪಾಕ್ಷಪ್ಪ ಮಾಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಜಾತ್ರೆಯ ಅಂಗವಾಗಿ ಮಾ.21ರಿಂದ ಸತತ 7 ದಿವಸ ಸಂಜೆ 6.30ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ.21ರಂದು ಭದ್ರಾವತಿ ಬ್ರದರ್ಸ್ (ಲೋಕನಾಥ್) ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, 22ರಂದು ವಸಂತ ಕಲಾ ನಾಟ್ಯ ಸಂಘ, ಭಾರತಿ ದಾವಣಗೆರೆ ತಂಡದಿಂದ ಹಾಸ್ಯಭರಿತ ‘ಕಿವುಡ ಮಾಡಿದ ಕಿತಾಪತಿ’ ನಾಟಕ ಪ್ರದರ್ಶನಗೊಳ್ಳಲಿದೆ.
23ರಂದು ಸಂಜೆ 6.30ಕ್ಕೆ ಮಂಡ್ಯ ಜಿಲ್ಲೆಯ ಶಿವಾರ ಉಮೇಶ್ ಮಳವಳ್ಳಿ ತಂಡದಿಂದ ಜಾನಪದ ಕಾರ್ಯಕ್ರಮ, 24ರಂದು ದಾವಣಗೆರೆಯ ಭಾರತಿ ಆರ್ಕೆಸ್ಟ್ರಾ ತಂಡ, 25ರಂದು ಅಪ್ಪು ಮೆಲೋಡಿ ಉಮಾಪತಿ ತಂಡದಿಂದ ರಸಮಂಜರಿ, 26ರಂದು ದಾವಣಗೆರೆ ಫ್ರೆಂಡ್ಸ್ ಮೆಲೋಡಿ ಆರ್ಕೆಸ್ಟ್ರಾ ತಂಡಗಳಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿವೆ. 27ರಂದು ಸಂಜೆ 6.30ಕ್ಕೆ ಮಕ್ಕಳಿಂದ ನಾಟಕ ಪ್ರದರ್ಶನ, ಆದಮ್ಯ ಕಲಾ ಸಂಸ್ಥೆಯಿಂದ ವೀಣಾ ವಾದನ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.ಒಟ್ಟಾರೆ ಇಡೀ ದಾವಣಗೆರೆ ಜಾತ್ರೆ ಸಂಭ್ರಮ, ಭಕ್ತಿ, ಆರಾಧನೆಯಲ್ಲಿತ್ತು. ಇನ್ನು ಅತ್ತ ದುಗ್ಗಮ್ಮ ಹಳೆ ದಾವಣಗೆರೆ ಜನರನ್ನು ಕಾದರೆ, ಇತ್ತ ಚೌಡೇಶ್ವರಿ ತಾಯಿ ವಿನೋಭನಗರ ಜನರನ್ನು ಕಾಯುತ್ತಿರುವುದು ವಿಶೇಷ.
….