
ದಾವಣಗೆರೆ : ತಾಲೂಕು ಎಲೆಬೇತೂರು ಗ್ರಾಮದ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಪ್ರಯುಕ್ತ ಗ್ರಾಮವನ್ನು ವಿದ್ಯುತ್ ದೀಪ ಅಲಂಕಾರ ಬಾಳೆ ಕಂಬ ಮಾವಿನ ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಬೆಳಗ್ಗೆ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಹಣ್ಣು ಕಾಯಿ ಎಡೆ ಕೊಟ್ಟುಪೂಜೆ ಸಲ್ಲಿಸಿದರು. ಮುಂಜಾನೆ ಉಚ್ಚಾಯ ರಥೋತ್ಸವ ನಡೆದು ಗ್ರಾಮದ ಪ್ರಮುಖ ಬೀದಿಯಲ್ಲಿ ಉಚ್ಚಾಯ ಎಳೆದು ಸಂಭ್ರಮಿಸಿದರು. ಸಂಜೆ ಶ್ರೀ ಸವಗದ್ದಿಗೆ ಸಂಗಮೇಶ್ವರ ಮಹಾಸ್ವಾಮಿ ಪಲ್ಲಕ್ಕಿ ಉತ್ಸವದೊಂದಿಗೆ ದೇವಸ್ಥಾನದಿಂದ ವಾದ್ಯ ವೃಂದ ,ಡೊಳ್ಳು ಕುಣಿತ, ನಾಸಿಕ್ ಡೋಲ್ ಮೆರವಣಿಗೆ ಮೂಲಕ ರಥೋತ್ಸವ ಸಮೀಪ ಆಗಮಿಸಿ ರಥೋತ್ಸವ ಮೂರು ಸುತ್ತು ಹಾಕಿ ಎಡೆ ಪೂಜೆ ಹಾಕಿದ ನಂತರ ಮಹಾಮಂಗಳಾರತಿ ನಡೆಯಿತು.
ನಂತರ ಭಕ್ತರು ರಥದ ಗಾಲಿಗೆ ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು. ಸ್ವಾಮಿಯ ಪಟ ಹರಾಜು ನಡೆದು ಅದನ್ನು ಅಂಚಿನಮನಿ ಅಂಗಡಿ ಗಂಗಣ್ಣ ಅವರು 55000 ರೂಗಳಿಗೆ ಹರಾಜಿನಲ್ಲಿ ತಮ್ಮದಾಗಿಸಿಕೊಂಡರು. ರಥ ಚಲಿಸುತ್ತಿದ್ದಂತೆ ರಸ್ತೆ ಅಕ್ಕ ಪಕ್ಕ ನಿಂತ ಭಕ್ತರು ಕೈಮುಗಿದು ಭಕ್ತಿ ಸಮರ್ಪಿಸುತ್ತಿರುವುದು ಕಂಡುಬಂತು.
ಈ ಸಂದರ್ಭದಲ್ಲಿ ದಾವಣಗೆರೆ ಉತ್ತರ ವಲಯದ ಶಾಸಕರು, ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಎಸ್ ಎಸ್ ಮಲ್ಲಿಕಾರ್ಜುನ ಅವರು ಭಕ್ತರಂತೆ ಆಗಮಿಸಿ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿಗೆ ಪೂಜೆ ಸಲ್ಲಿಸಿ ನಂತರ ಭಕ್ತರ ಜೊತೆಗೂಡಿ ಅವರು ಸಹ ರಥೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು