ಚನ್ನಗಿರಿ: ತಾಲೂಕಿನ ಮಾದಿಗ ಸಮಾಜದ ಅಧ್ಯಕ್ಷರಾಗಿ ಪ್ರಕಾಶ್ ಕೋಗಲೂರು ಮತ್ತು ಉಪಾಧ್ಯಕ್ಷರಾಗಿ ಜಿ.ರಂಗಪ್ಪ, ಗೌರವಾಧ್ಯಕ್ಷರಾಗಿ ಬಿ.ಮಂಜುನಾಥ್ ಮಾಚನಾಯ್ಕನಹಳ್ಳಿ ಆಯ್ಕೆ ಮಾಡಲಾಗಿದೆ ಎಂದು ಮಾದಿಗ ಸಮಾಜದ ಹಿರಿಯ ಮುಖಂಡ ರುದ್ರಪ್ಪ ಹೇಳಿದರು.
ಪಟ್ಟಣದ ದುರ್ಗಾಂಬಿಕಾ ನಗರದ ಬಾಬು ಜಗಜೀವನ್ರಾಂ ಸಮುದಾಯ ಭವನದಲ್ಲಿ ನಡೆದ ಮಾದಿಗ ಸಮಾಜದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸಾಕಷ್ಟು ವರ್ಷಗಳಿಂದ ಮಾದಿಗ ಸಮಾಜದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೆ ಹೋಗುತ್ತಿದ್ದು ಈ ದಿನ ಸಮಾಜದ ಹಿರಿಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಗಿದೆ. ಸಭೆಯ ಸರ್ವಾನುಮತದೊಂದಿಗೆ ಒಪ್ಪಿ ೧೦ ಜನ ಸದಸ್ಯರ ಅಡಾಕ್ ಸಮಿತಿಯನ್ನು ರಚಿಸಿದ್ದು ಅಧ್ಯಕ್ಷರ ಸ್ಥಾನಕ್ಕೆ ೧೦ ಜನ ಅರ್ಜಿಯನ್ನು ಸಲ್ಲಿಸಿದ್ದು ಯಾರು ಸೂಕ್ತ ಎಂದು ಪರಾಮರ್ಶಿಸಿ ನಂತರ ಆಯ್ಕೆ ಮಾಡಲಾಗಿದೆ ಎಂದರು.
ನೂತನ ಅಧ್ಯಕ್ಷ ಪ್ರಕಾಶ್ ಕೋಗಲೂರು ಮಾತನಾಡಿ, ಸಮಾಜವು ದೊಡ್ಡ ಜವಾಬ್ದಾರಿಯನ್ನು ನನಗೆ ವಹಿಸಿದ್ದು ಸಮಾಜದ ಸರ್ವತೋಮೂಕ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ತಿಳಿಸಿದರು. ಸಮಾಜವು ಮುಖ್ಯವಾಹಿನಿಗೆ ಬರಬೇಕಾದರೆ ಮೊದಲು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕಿದೆ. ಈ ನಿಟ್ಟಿನಲ್ಲಿ ಶ್ರಮಿಸಲಾಗುವುದು.
ಮಾದಿಗ ಸಮಾಜ ಬಾಂಧವರ ಬಗರ್ಹುಕುಂ ಸಮಸ್ಯೆಗಳಿದ್ದು ಅವುಗಳನ್ನು ಕಾನೂನು ರೀತ್ಯಾ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು. ಈ ಹಿಂದೆ ಅಧ್ಯಕ್ಷರಾಗಿ ಮಂಜುನಾಥ್ ಮಾಚನಾಯ್ಕನಹಳ್ಳಿಯವರು ಉತ್ತಮ ಸೇವೆಯನ್ನು ನೀಡಿದ್ದು ಹಿರಿಯರ ಮಾರ್ಗದರ್ಶನದಲ್ಲಿ ಸಮಾಜವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸಿ.ಆರ್.ಅಣ್ಣಯ್ಯ, ಜಯ್ಯಪ್ಪ, ಮಂಜಪ್ಪ, ದೀಪಕ್, ನಿಂಗಪ್ಪ, ರುದ್ರಪ್ಪ ಇತರರು ಹಾಜರಿದ್ದರು.