ಚನ್ನಗಿರಿ: ಅಯೋಧ್ಯೆಯ ರಾಮ ಮಂದಿರದ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರಕಿರುವುದು ಮತ್ತು ದೇಶದ ಎಲ್ಲಾ ಮಠದ ಸ್ವಾಮೀಜಿಗಳನ್ನು ಒಂದೆಡೆ ಸೇರುವಂತಹ ಅವಕಾಶ ಶ್ರೀ ರಾಮನ ಆಶೀರ್ವಾದದಿಂದ ದೊರೆತಿದೆ ಎಂದು ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಚನ್ನಗಿರಿ ತಾಲೂಕಿನ ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಾಲಸ್ವಾಮಿ ವಿರಕ್ತ ಮಠದ ಡಾ. ಬಸವಜಯಚಂದ್ರಸ್ವಾಮೀಜಿ ಸೇರಿದಂತೆ ತಾಲೂಕಿನ ಮಠಾದೀಶ್ವರರ ಜೊತೆಗೂಡಿ ಆಯೋಧ್ಯೆಗೆ ತೆರಳಿ ಅಯೋಧ್ಯೆಯ ಕಾರ್ಯಕ್ರಮವನ್ನು ಕಂಡು ಮೂಕವಿಸ್ಮಿತರಾಗಿ ಮಾತನಾಡಿ, ರಾಮ ಮತ್ತೆ ಹುಟ್ಟಿಬರುತ್ತಾನೆ ಎನ್ನಲು ಈ ಕ್ಷಣಗಳೇ ಸಾಕ್ಷಿಯಾಗಿದೆ. ಶ್ರೀ ರಾಮ ಎಂದರೆ ಪ್ರೀತಿ, ಐಕ್ಯತೆಯ ಮನೋಬಾವನೆಯನ್ನು ಹೊಂದಿರುವ ವ್ಯಕ್ತಿತ್ವ ಎಂದರು.
ನಾವೆಲ್ಲಾ ಅರಾಧಿಸುವಂತಹ ಶ್ರೀ ರಾಮನು ಓಡಾಡಿರುವಂತಹ ಈ ಸ್ಥಳ ಒಂದು ಪಾವನ ಕ್ಷೇತ್ರವಾಗುತ್ತಿರುವುದನ್ನು ಕಣ್ತುಂಬಿಕೊಳ್ಳಲು ಅಯೋಧ್ಯೆಯನ್ನು ಎಲ್ಲರೂ ಒಮ್ಮ ನೋಡಬೇಕಿದೆ. ಕಾರ್ಯಕ್ರಮಕ್ಕೆ ಬಂದಿರುವ ಜನರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಉತ್ತಮ ಸೌಲಭ್ಯವನ್ನು ಕಲ್ಪಿಸಿವೆ ಎಂದು ತಿಳಿಸಿದ್ದಾರೆ.