ಚನ್ನಗಿರಿ: ಭದ್ರಾನಾಲೆಯಲ್ಲಿನ ಅನಧಿಕೃತ ಪಂಪ್ಸೆಟ್ಗಳ ತೆರವು ಕಾರ್ಯಾಚರಣೆ ಕಾರ್ಯಕ್ರಮವು ಹೊನ್ನಾಳಿ ಉಪವಿಭಾಗಾಧಿಕಾರಿ ಅಭೀಷೇಕ್ರವರ ನೇತ್ರತ್ವದಲ್ಲಿ ಬೆಸ್ಕಾಂ ಇಲಾಖೆ, ಕಂದಾಯ ಇಲಾಖೆ, ಪೋಲಿಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆಯಿತು.
ಎ.ಸಿ. ಅಭಿಷೇಕ್ ರೈತರನ್ನು ಉದ್ದೇಶಿಸಿ ಮಾತನಾಡಿ, ಇಡೀ ರಾಜ್ಯದಲ್ಲಿ ಮಳೆಯಿಲ್ಲದೇ ಕುಡಿಯುವ ನೀರು ಪೂರೈಕೆಗೂ ಕಷ್ಟಪಡುವಂತಾಗಿದೆ. ಭದ್ರಾನಾಲೆಯ ಮೇಲ್ಬಾಗದಲ್ಲಿ ಪಂಪ್ಸೆಟ್ಗಳನ್ನು ಹಾಕಿರುವಂತಹ ರೈತರು ಇದುವರೆಗೂ ಸಹಕಾರ ನೀಡಿದ್ದು ಉಳಿದಂತಹ ಪಂಪ್ಸೆಟ್ಗಳನ್ನು ಸ್ವತಃ ತೆರವುಗೊಳಿಸಿಕೊಳ್ಳುವ ಮೂಲಕ ಕೊನೆ ಭಾಗದ ರೈತರಿಗೆ ನೀರು ತಲುಪಲು ಅವಕಾಶ ಮಾಡಿಕೊಡುವಮತೆ ಮನವಿ ಮಾಡಿದರು.
ಭದ್ರಾನಾಲೆಗೆ ಬರುವ ಮೊದಲೇ ಈ ಭಾಗದಲ್ಲಿ ವಿದ್ಯುತ್ ಕಡಿತಗೊಳಿಸಿದ್ದ ಕಾರಣ ರೈತರು ತಮ್ಮ ಪಂಪ್ಸೆಟ್ಗಳನ್ನು ಅಳವಡಿಸಿದ್ದ ರೈತರು ಟ್ರ್ಯಾಕ್ಟರ್ ಗಳಿಗೆ ಕಟ್ಟಿ ಮೇಲೆ ತರುವ ಮೂಲಕ ಪಂಪ್ಸೆಟ್ಗಳನ್ನು ತೆಗೆಯಲು ಪ್ರಾರಂಭಿಸಿದರು.
ಹಿರೇಮಳಲಿ ಗ್ರಾಮದ ರೈತರಾದ ಶೇಖರಪ್ಪ ಮಾತನಾಡಿ, ಹಿರೇಮಳಲಿ ಸೇರಿದಂತೆ ಈಭಾಗದ ವ್ಯಾಪ್ತಿಯಲ್ಲಿ ಸಾವಿರಾರು ಅಡಕೆ ತೋಟಗಳಿಗೆ ಇಲ್ಲಿಯ ನೀರನ್ನು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಸರಕಾರ ಪಂಪ್ಸೆಟ್ಗಳನ್ನು ತೆರವು ಮಾಡಲು ಮುಂದಾಗಿದೆ. ಮಳೆಯಲ್ಲದೇ ರೈತರು ಅಡಕೆ ಮರಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ.
ಹಿರೇಮಳಲಿ ಗ್ರಾಮದ ಭಾಗದಲ್ಲಿ ಬಂಡೆಗಳು ಹೆಚ್ಚು ಇರುವುದರಿಂದಾಗಿ ಸಾವಿರ ಅಡಿಗಳ ಬೋರ್ಕೊರೆದರೂ ನೀರು ಬಾರದಂತಾಗಿದೆ. ಸುರಂಗ ಇರುವುದರಿಂದ ಸುತ್ತಮುತ್ತಲೂ ಈ ಬಾಗದಲ್ಲಿ ಬೋರ್ಗಳನ್ನು ಕೊರೆಯಲು ಸಹ ಸಾಧ್ಯವಾಗುತ್ತಿಲ್ಲ.
ಕೊನೆಯ ಬಾಗದ ರೈತರೂ ರೈತರೇ ನಾವು ರೈತರು. ಅವರು ಬಳಕೆ ಮಾಡಿ ವ್ಯರ್ಥ ಮಾಡುವಷ್ಟು ನೀರನ್ನು ನಾವು ಬಳಕೆ ಮಾಡುತ್ತೇವೆ. ಈ ಬಾರಿ ಬಿಸಿಲು ಅಧಿಕವಾಗಿದ್ದು ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ. ಪ್ರತಿವರ್ಷವೂ ಇದೇ ರೀತಿ ಮಾಡುತ್ತಿದ್ದಾರೆ. ಭದ್ರಾ ಡ್ಯಾಂನಿಂದ ಸಾಕಷ್ಟು ರೈತರು ನಾಲೆಗೆ ಪಂಪ್ಸೆಟ್ಗಳನ್ನು ಹಾಕಿದ್ದಾರೆ. ಆದರೆ ತೆರವುಗೊಳಿಸಲು ನಮ್ಮ ಮೇಲೆ ಮಾತ್ರವೇ ಒತ್ತಡವನ್ನು ಹಾಕುತ್ತಾರೆ.
ಕಸಬಾ ಹೋಬಳಿಯ ಕೆರೆಗಳಿಗೆ ನೀರನ್ನು ತುಂಬಿಸುವಂತಹ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯ ಇನ್ನೂ ಪೂರ್ಣವಾಗದೇ ಕೆರೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದ ಎಲ್ಲಯೂ ಅಂರ್ತಜಲ ಇಲ್ಲದಂತಾಗಿದೆ. ಸರಕಾರ ತಕ್ಷಣವೇ ಕ್ರಮವನ್ನು ಕೈಗೊಳ್ಳುವ ಮೂಲಕ ಸಾಸ್ವೇಹಳ್ಳಿ ಏತ ನೀರಾವರಿಗೆ ಚಾಲನೆ ನೀಡಬೇಕು ಮತ್ತು ರೈತರಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಕಲ್ಪಿಸಬೇಕು .
ಈ ಭಾಗದಲ್ಲಿ ರೈತರು ಹೆಚ್ಚು ಅಡಿಕೆ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದು ನೀರು ಪೂರೈಕೆಯಾಗದೇ ಇದ್ದರೆ ವಿಷವನ್ನು ಕುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರ್ರಿಸ್ವಾಮಿ, ಬೆಸ್ಕಾಂ ಎ.ಇ.ಇ. ಮಂಜುನಾಯ್ಕ, ಪಿ.ಐ. ನಿರಂಜನ್ ಇತರರು ಹಾಜರಿದ್ದರು.