
ಚನ್ನಗಿರಿ: ಬಸವಣ್ಣ ಕೇವಲ ಸಾಂಸ್ಕೃತಿಕ ನಾಯಕರಲ್ಲ ಇಡೀ ವಿಶ್ವಕ್ಕೆ ಧಾರ್ಮಿಕ ಸಾಮಾಜಿಕ ನೈತಿಕ ಬೆಳಕನ್ನು ನೀಡಿದ್ದ ಜಗದ ಜ್ಯೋತಿಯಾಗಿದ್ದು 12 ನೇ ಶತಮಾನದಲ್ಲಿ ಮಾಡಿದ ಕ್ರಾಂತಿ ಅದು ಸಮಗ್ರ ಕ್ರಾಂತಿ ಎಂದು ಬೆಂಗಳೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.
ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಹಿರಿಯ ಶ್ರೀಗಳ ಸ್ಮರಣೋತ್ಸವ ಮತ್ತು ಬಸವತತ್ವ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಅವರು ಯಾವುದೋ ಒಂದು ನಿರ್ದಿಷ್ಟ ಕಾರಣಕ್ಕಾಗಿ ಆತ್ಮಕಲ್ಯಾಣಕ್ಕಾಗಿ ಮಾಡಿದ ಕ್ರಾಂತಿಯಲ್ಲ. ಲೋಕ ಕಲ್ಯಾಣಕ್ಕಾಗಿ ಮಾಡಿದ ಕ್ರಾಂತಿ ಎಂದರು.
ಸಾಕಷ್ಟು ಸಂತರು ಏಕಾಂಗಿಯಾಗಿ ಕುಳಿತು ತಪಸ್ಸುಮಾಡುತ್ತಾರೆ. ಆದರೆ ಬಸವಣ್ಣನವರು ಜನಮಾನಸದಲ್ಲಿ ಇದ್ದು ಲೋಕ ಕಲ್ಯಾಣವನ್ನು ಮಾಡಿದವರು ಆಗಿದ್ದಾರೆ. ಆ ಕಾಲಘಟ್ಟದಲ್ಲಿ ಆಗುತ್ತಿದ್ದ ಸಾಮಾಜಿಕ ಶೋಷಣೆಯ ವಿರುದ್ದ ದ್ವನಿ ಎತ್ತಿದ್ದು ಸ್ತ್ರೀ ಸಮಾನತೆಯನ್ನು ನೀಡುವ ಮೂಲಕ ಎಚ್ಚರಿಕೆಯನ್ನು ನೀಡಿದ ಮೊದಲ ವ್ಯಕ್ತಿಯಾಗಿದ್ದರು.ಸ್ತ್ರೀ ಸಮಾನತೆಯ ಬಗ್ಗೆ ಇಡೀ ವಿಶ್ವಕ್ಕೆ ಸ್ವಾಭಿಮಾನದ ಸಂಕೇತವನ್ನು ನೀಡಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದರು.


ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಮಾತನಾಡಿ, ಬಸವಾದಿ ಶರಣರು ನೀಡಿದಂತಹ ವಚನಸಾಹಿತ್ಯಗಳು ನಮ್ಮ ಬದುಕಿನ ದಾರಿ ದೀಪಗಳಾಗಿವೆ. ಸಾಕಷ್ಟು ಒತ್ತಡದಲ್ಲಿ ಜೀವನ ಸಾಗಿಸುತ್ತಿರುವ ನಮಗೆ ಇಂತಹ ಕಾರ್ಯಕ್ರಮಗಳ ಅಗತ್ಯತೆ ಇದೆ. ಪಾಂಡೋಮಟ್ಟಿ ವಿರಕ್ತ ಮಠದ ಹಿರಿಯ ಶ್ರೀಗಳು ಬಸವತತ್ವ ಪ್ರಚಾರವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹರಡಿದ್ದು ಅದನ್ನು ವಿಶ್ವದ ಮೂಲೆ ಮೂಲೆಗಳಿಗೆ ಹರಡುವ ಕೆಲಸವನ್ನು ಗುರುಬಸವ ಸ್ವಾಮಿಗಳು ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವ ಸ್ವಾಮಿಗಳು ವಹಿಸಿ ಅಶೀರ್ವಚನ ನೀಡಿದರು. ಮಾಡಾಳು ನಿರಂಜನ ಪೀಠದ ರುದ್ರಮುನಿಸ್ವಾಮಿಗಳು, ಬೊಮ್ಮನಹಳ್ಳಿ ವಿರಕ್ತ ಮಠದ ಶಿವಯೋಗೀಶ್ವರ ಸ್ವಾಮಿಗಳು, ಚಂಗಡಿಹಳ್ಳಿ ವಿರಕ್ತ ಮಠದ ಬಸವಮಹಾಂತಸ್ವಾಮಿಗಳು, ಹುಂಡಿ ಶ್ರೀ ಮಠದ ಗೌರಿಶಂಕರಸ್ವಾಮಿಗಳು ವಹಿಸಿ ಅಶೀರ್ವಚನ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ನೆರವೇರಿಸಿದರು.
ರಿತೀಶ್‌ಕುಮಾರ್ ಸಿಂಗ್ ಮತ್ತು ಸಿ.ಜೆರಮೇಶ್‌ರವರಿಗೆ ಗೌರವ ಸನ್ಮಾನ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಮಾಯಕೊಂಡ ಕ್ಷೇತ್ರದ ಶಾಸಕ ಬಸವಂತಪ್ಪ, ಡಾ. ರವಿಕುಮಾರ್ ಹಾಜರಿದ್ದರು.