ದಾವಣಗೆರೆ : ಬಸವಣ್ಣನವರು ನಮ್ಮ ಆಚಾರ್ಯರು, ಅವರ ಮಾತು ನಮಗೆ ಧರ್ಮ, ಅವರ ಜೀವನ ನಮಗೆ ಆದರ್ಶ, ನಾವು ಆಡಿದ ಮಾತಿನಿಂದ, ನಡೆಸಿದ ಜೀವನದಿಂದ, ಬದುಕಿದ ರೀತಿಯಿಂದ ಅವರು ನಮಗೆ ಹತ್ತಿರವೆನಿಸಿದರೆ ಅದು ನಮ್ಮ ಕಲ್ಯಾಣ, ಉದ್ಧಾರದ ಸೂಚನೆ. ದೂರವೆನಿಸಿದರೆ ಅದೇ ನಮ್ಮ ಆಧಃಪತನ ಕೂಡ.

ಬಸವಣ್ಣನವರು ಕಟ್ಟಿದ ಜಾತ್ಯಾತೀತವಾದ ಸರ್ವಸಮಾನತೆಯ ಸರ್ವರ ಸುಖದ ಶರಣ ಧರ್ಮವು ಬಡವಾಯಿತು. ಇದು ನಾವು ಬಸವಣ್ಣನವರಿಗೆ ಮಾಡಿದ ದೊಡ್ಡ ಅಪಚಾರ. ನಾವು ವಿಶಾಲ ಮನಸ್ಕರಾಗಿ ಬೆಳೆಯಬೇಕಾಗಿದೆ. ಬಸವಣ್ಣನವ ಆದರ್ಶಗಳನ್ನು, ಅವರ ವಚನಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಆ ತತ್ವಗಳಿಗೆ ಬದ್ಧರಾಗಿ ನಡೆಯಬೇಕಾಗಿದೆ. ಬಸವಣ್ಣ ಹುಟ್ಟಿದ್ದು, ಬಾಳಿದ್ದು ಕನ್ನಡನಾಡಿನಲ್ಲಿ, ಬರೆದದ್ದು ಅಚ್ಛ ಕನ್ನಡ ಭಾಷೆಯಲ್ಲಿ. ಈ ಪರಿಮಿತಿಯ ಕಾರಣವಾಗಿ ಬಸವಣ್ಣನಿಗೆ ನ್ಯಾಯಯುತವಾಗಿ ಸಿಗಬೇಕಾದ ಜಾಗತಿಕ ಪ್ರಸಿದ್ಧಿ ಇನ್ನು ಸಿಕ್ಕಿಲ್ಲವಾದರೂ ಇವರನ್ನು ಕುರಿತಷ್ಟು ಸಾಹಿತ್ಯ ಕನ್ನಡದಲ್ಲಿ ಯಾರನ್ನು ಕುರಿತು ಹುಟ್ಟಿಲ್ಲ; ಈತನಷ್ಟು ಅಖಂಡ ಪ್ರಭಾವ ಕರ್ನಾಟಕದ ಜನತೆಯ ಮೇಲೆ ಯಾವ ಧಾರ್ಮಿಕ ಮಹಾಪುರುಷನೂ ಬೀರಿಲ್ಲ ಎನ್ನಬಹುದು. ಇವರ ಜನನ ಕ್ರಿ.ಶ. 1134 ಮೇ 3 ರಂದು ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿಯ ಇಂಗಳೇಶ್ವರದಲ್ಲಿ ಪ್ರತಿಷ್ಠಿತ ಕುಟುಂಬ ಹಿನ್ನಲೆ ಬಸವಣ್ಣನವರದ್ದು. ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಕ್ರಿ.ಶ. 1196 ಕೂಡಲಸಂಗಮದಲ್ಲಿ ಲಿಂಗೈಕ್ಯರಾದರು.

ಚೈತನ್ಯ ಶ್ರಮಸಂಸ್ಕೃತಿಯ ಹರಿಕಾರ ಬಸವಣ್ಣನವರು:

ಬಸವಣ್ಣನವರು ಜನ್ಮ ತಾಳುವ ಮೊದಲೇ ಈ ದೇಶದಲ್ಲಿ ಲೋಕಯುತರು, ಮಹಾವೀರ, ಬುದ್ಧನಂತಹ ಮಹಾತ್ಮರು. ಅರವತ್ಮೂರು ಪುರಾತನರು (5-9ನೇ ಶತಮಾನ) ಬಸವಪೂರ್ವಯುಗದ 39 ಜನ ಶಿವಶರಣರು (9-11ನೇ ಶತಮಾನ) ಜನತೆಗೆ ಶೋಷಣೆ ಆಗುವುದನ್ನು ನಿರಾಕರಿಸಿದರು. ಅಲ್ಪ ಸಂಖ್ಯೆಯಲ್ಲಿರುವ ಅನುತ್ಪಾದಕ ವರ್ಣಗಳ ಜನ ಸದಾ ಉತ್ಪಾದನೆಯಲ್ಲಿ ತೊಡಗಿರುವ ಬಹುಸಂಖ್ಯಾತ ಶೂದ್ರರನ್ನು, ಪಂಚಮರನ್ನು ಮತ್ತು ಮಹಿಳೆಯರನ್ನು ಏಕೆ ದೂರವಿಟ್ಟಿದ್ದಾರೆ ಎಂಬುದನ್ನು ಬಸವಣ್ಣನವರು ಗಮನಹರಿಸಿದರು. ವರ್ಣ, ಜಾತಿ, ಜ್ಞಾನ ಹಾಗೂ ಅಧಿಕಾರದ ಮೂಲಕ ಸುಲಿಗೆ ಅಥವಾ ಶೋಷಣೆಯೇ ಬಹುಸಂಖ್ಯಾತ ಸಮಾಜದಲ್ಲಿನ ಜನರ ದುಃಖದ ಮೂಲವೆಂಬುದನ್ನು ಜನಸಮುದಾಯಕ್ಕೆ ತೋರಿಸಿಕೊಟ್ಟರು.

ಶೋಷಣೆ ಅಥವಾ ಸುಲಿಗೆಗೊಳಗಾದ ಜನಸಮುದಾಯಕ್ಕೆ ಹೊಸದಾರಿ ತೋರಿಸುವುದೇ ತಮ್ಮ ಬದುಕಿನ ಗುರಿ ಎಂಬ ಭಾವದೊಂದಿಗೆ ಬಸವಣ್ಣನವರು ಮಾಡಿದ ಚಿಂತನೆ ಶ್ಲಾಘನಿಯ.

ಜಡಸಂಸ್ಕೃತಿಯ ಬದಲು ‘ಕಾಯಕ’ ಪ್ರಧಾನವಾದ ಚೈತನ್ಯಸಂಸ್ಕೃತಿಯ ಹರಿಕಾರರಾದರು ಬಸವಣ್ಣನವರು. ಹೊಸದೇವರು, ಹೊಸವಿಚಾರ, ಹೊಸಜೀವನಕ್ರಮ, ಹೊಸ ತಿಳುವಳಿಕೆ, ಹೊಸಮೌಲ್ಯ, ಮಾನವ ಪ್ರೀತಿ, ಸಂಬಂಧಗಳನ್ನು ಕಲ್ಪಿಸುವ ಚಿಂತನೆ ಮಾಡಿದರು. ಈ ಹೊಸತನಕ್ಕೆ ಅಡ್ಡಿಯನ್ನುಂಟು ಮಾಡುವವರನ್ನು ಅವರು ಪ್ರಶ್ನಿಸಿದರು.

ಬಸವಣ್ಣನವರು ಮಠ-ಗುಡಿಗಳನ್ನು ಕಟ್ಟಿಸಲಿಲ್ಲ:

ಬಸವಣ್ಣನವರು ನೂತನ ಜೀವನ ವಿಧಾನ, ಸಮಾಜ ಕಲ್ಯಾಣದ ಆಶಯದಿಂದ ಅವರು ಮಠ ಕಟ್ಟಿಸಲಿಲ್ಲ, ಗುಡಿ-ಗುಂಡಾರಗಳನ್ನು ಕಟ್ಟಿಸಲಿಲ್ಲ.

ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎಂಬ ತತ್ವದಡಿ ಸಮಾಜಕ್ಕೆ ಭವಿಷ್ಯವಿದೆ. ನಾವು ಕಟ್ಟಿದ ಕಟ್ಟಡಗಳಿಗೆ ಜೀವವೂ ಇಲ್ಲ. ಭವಿಷ್ಯವೂ ಇಲ್ಲವೆಂದರು. ಸಿರಿಗರ ಬಡಿದವರನ್ನು ಎಚ್ಚರಿಸಿ ಜನರ ಮನಸ್ಸುಗಳನ್ನು ತಟ್ಟಿದರು. ಮನುಷ್ಯರನ್ನು ಪ್ರೀತಿಸಿದರು. ‘ಹಿಂದೂ’ ಎಂಬುದು ಧರ್ಮವಲ್ಲ. ಅದೊಂದು ಜೀವನ ವಿಧಾನ ಅದರಲ್ಲಿ ಜಾತಿ, ವರ್ಣ, ಅಸ್ಪೃಶ್ಯತೆ, ಅಸಮಾನತೆಯ ಅಂಶಗಳು ಅಡಗಿವೆ. ಈ ಜೀವನ ವಿಧಾನದಲ್ಲಿದ್ದ ದೋಷಗಳನ್ನು ತಿದ್ದಿ ಹೊಸ ಜೀವನ,

ವೈಚಾರಿಕತೆ ಕಂಡುಕೊಳ್ಳಲು ಬಸವಣ್ಣನವರು ಜನಸಾಮಾನ್ಯರಿಗೆ ಕರೆನೀಡಿದರು. ಹೊಸ ಜೀವನದಲ್ಲಿ ಅಡಕವಾಗಿರುವ ಸಂಗತಿಗಳೆಂದರೆ ದುಡಿಯದೇ ಬದುಕಬಾರದು, “ಕಾಯಕವೇ ಕೈಲಾಸ”, ಅನ್ಯರುಗಳಿಸಿದ ಸಂಪತ್ತಿಗೆ ಆಶೆಪಡಬಾರದು. ಅನ್ಯ ಸ್ತ್ರೀಯರನ್ನು ತಾಯಿಯೆಂದು ಗೌರವಿಸಬೇಕು. ಜಾತ್ಯಾತೀತ ನಿಲುವಿನಿಂದ ಬದುಕುವುದು ಇತ್ಯಾದಿ ಸಂಗತಿಗಳಿಗೆ ಆದ್ಯತೆ ನೀಡಿದ ಬಸವಣ್ಣನವರು ಜನತೆಗೆ ತಿಳಿಸಿದ ನೂತನ ಜೀವನ ವಿಧಾನವಿದು.

ಬಸವಣ್ಣನವರು ಬರೆದದ್ದು ಮಾನವಕುಲದ ಸಂವಿಧಾನ:

ಡಾ. ಬಿ.ಆರ್. ಅಂಬೇಡ್ಕರ್ ಬರೆದದ್ದು ದೇಶದ ಸಂವಿಧಾನ. ಭಾರತದ ಸಂವಿಧಾನ. ಬಸವಣ್ಣನವರು ಬರೆದದ್ದು ‘ಮಾನವಕುಲದ ಸಂವಿಧಾನ’. ಮಾನವ ಕುಲದ ಸಂವಿಧಾನವೇ ಈ ದೇಶದ ಸಂವಿಧಾನದ ತಳಹದಿಯಾಗಿದೆ. ಜಗತ್ತಿನ ಎಲ್ಲಾ ಸಂವಿಧಾನಗಳು ವಚನ ಸಂವಿಧಾನದ ನಂತರವೇ ಹುಟ್ಟಿಕೊಂಡಿವೆ. ಬಸವಣ್ಣನವರು ವಿಶ್ವಮಾನವ ಪರಿಕಲ್ಪನೆಯಲ್ಲಿ ವಚನಗಳನ್ನು ಬರೆದರು. ಅವರು ಯಾವುದೇ ಒಂದು ಜಾತಿ, ಸಮುದಾಯದ ಏಳ್ಗೆಯನ್ನು ಬಯಸದೇ ಸಕಲ ಜೀವರಿಗೆ ಲೇಸನ್ನು ಬಯಸಿದರು.

ಆ ಮೂಲಕ ಸಂಸ್ಕೃತಿ, ಸಂಸ್ಕಾರ, ನಾಗರಿಕತೆ, ಮೌಲ್ಯಗಳನ್ನು, ನೈತಿಕತೆಯನ್ನು ಶುದ್ಧತೆ-ಬದ್ಧತೆ ಮತ್ತು ಸಮಾನತೆಗಳನ್ನು ಎತ್ತಿ ಹಿಡಿದರು. ಸಮಾಜ ವಿಮರ್ಶೆ ಬಸವಣ್ಣನವರ ವಚನಗಳ ಇನ್ನೊಂದು ಮುಖವಾಗಿದೆ. ಹೀಗೆ ಅವರ ಆತ್ಮ ವಿಮರ್ಶೆ, ಸಮಾಜವಿಮರ್ಶೆಯ 1409 ವಚನಗಳು ಲೋಕಸಂದೇಶದ ಭಾವಗೀತೆಗಳಂತೆ ಕಾಣುತ್ತವೆ. ಹೀಗಾಗಿ ಬಸವಣ್ಣ ವಿಶ್ವಮಾನವನಾಗಿ ಸಮಾಜಮುಖಿ ಚಿಂತನೆಯ ಮಹಾನ್ ವ್ಯಕ್ತಿಯಾಗಿ ಕಂಡುಬರುತ್ತಾರೆ.

ಬಸವಣ್ಣನವರ ಆಶಯ ವ್ಯಕ್ತಿತ್ವ – ಸಮಾಜ ಶುದ್ಧೀಕರಣ:

ಭಾರತವು ವರ್ಗಭೇದ, ವರ್ಣಭೇದ ಹಾಗೂ ಲಿಂಗಭೇದ – ಹೀಗೆ ಭೇದಸಂಸ್ಕೃತಿಯರಾಷ್ಟ್ರವಾಗಿದೆ. ಭೇದ ಸಂಸ್ಕøತಿಯ ಸಮಾಜದಲ್ಲಿ ಪರಸ್ಪರ ಘರ್ಷಣೆಗಳು ಜರುಗಬಹುದೇ ಹೊರತು ಸಾಮುದಾಯಿಕ ಕಲ್ಯಾಣ ಅಂದೋಲನ ಜರುಗಲಾರವು. ಹೀಗಾಗಿ ನಮ್ಮ ದೇಶದಲ್ಲಿ ಒಂದು ಜಾತಿ, ಸಮುದಾಯದ ಆತ್ಮ ಕಲ್ಯಾಣದ ಪ್ರಯೋಗಗಳು ಜರುಗಿದವೇ ಹೊರತು ಸರ್ವಜನರ ಒಳಿತಿಗಾಗಿ ಸಮಾಜ ಕಲ್ಯಾಣದ ಆಂಧೋಲನಗಳು ಸಂಭವಿಸಲಿಲ್ಲ.

ಬಸವಣ್ಣನವರು 12ನೆಯ ಶತಮಾನದಲ್ಲಿ ಈ ಎರಡೂ ಬಗೆಯ ಕಲ್ಯಾಣದ ಕುರಿತು ಚಳುವಳಿಯನ್ನು ನಡೆಸಿದರು. ಇದೇ ಶರಣ ಚಳುವಳಿ, ವಚನ ಚಳುವಳಿಯಾಗಿದೆ. ಬಸವಣ್ಣನವರ ಆಶಯ ವ್ಯಕ್ತಿತ್ವ ಶುದ್ಧೀಕರಣದಷ್ಟೇ ಸಮಾಜಶುದ್ಧೀಕರಣ ಮುಖ್ಯವೆಂದು ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಬಸವಣ್ಣನವರ ‘ತತ್ವಗಳು’ ವ್ಯಕ್ತಿಶುದ್ಧಿಯಲ್ಲಿ ಬಿಚ್ಚಿಕೊಂಡು ಸಮಾಜಶುದ್ಧಿಯಲ್ಲಿ ವಿಸ್ತಾರಗೊಳ್ಳುತ್ತವೆ. ಸಮಾಜಶುದ್ಧಿಯಾಗುವುದೆಂದರೆ ಸಮಾಜದಲ್ಲಿ ಸಮಾನತೆಯನ್ನು ತರುವುದು. ಈ ಸಾಮಾಜಿಕ ಸಮಾನತೆಯ ಮೂಲವೇ ‘ಆರ್ಥಿಕ ಸಮಾನತೆ’. ಬಸವಣ್ಣನ ಅರ್ಥತತ್ವಕ್ಕೆ ಎರಡು ಮಗ್ಗಲುಗಳುಂಟು ಒಂದು ಕಾಯಕ (ಶ್ರಮ) ಇನ್ನೊಂದು ದಾಸೋಹ (ವಿತರಣೆ) ಎಂಬ ಸೂತ್ರದ ಆದರ್ಶದಲ್ಲಿ ‘ಕಲ್ಯಾಣರಾಜ್ಯ’ ಕಟ್ಟುವುದು ಬಸವಣ್ಣನವರ ಆದರ್ಶ ಧ್ಯೇಯವಾಗಿತ್ತು.

ಸಮಾನತೆಗಾಗಿ ಎಲ್ಲರಿಗೂ ಇಷ್ಟಲಿಂಗ ಧಾರಣೆ:

ದೇವರು ಪ್ರತಿಯೊಬ್ಬರ ಜೊತೆಯಲ್ಲಿದ್ದಾನೆ.ಪುರೋಹಿತರು, ಪೂಜಾರಿಗಳೆಂಬ ಮಧ್ಯವರ್ತಿಗಳಿಲ್ಲದೆ ನೇರವಾಗಿ ಪ್ರತಿಯೊಬ್ಬರು ದೇವರ ಪೂಜೆಯಲ್ಲಿ ತೊಡಗಲು ಸಾಧ್ಯವಾಗುವಂಥ “ಇಷ್ಟಲಿಂಗ”ವನ್ನು ಬಸವಣ್ಣನವರು ಕಂಡುಕೊಂಡರು. ಲಿಂಗವಂತರಿಗೆ ತಮ್ಮ ಇಷ್ಟಲಿಂಗ ಪೂಜೆ ಬಿಟ್ಟರೆ ಬೇರಾವ ಪೂಜೆಯ ಅವಶ್ಯಕತೆ ಇಲ್ಲ. ಈ ತಿಳುವಳಿಕೆಯನ್ನು ಮರೆತು ನಾವು ಗುಡಿ-ಗುಂಡಾರಗಳನ್ನು ಸುತ್ತುವುದು, ಕಂದಾಚಾರ – ಮೂಡ ನಂಬಿಕೆಗಳಿಗೆ ಬಲಿಯಾಗುವುದು, ಪಂಚಾಂಗವನ್ನು, ವಾಸ್ತು ಶಾಸ್ತ್ರವನ್ನು ನಂಬಿ

ಬದುಕುವುದು, ಜಾತಿಯತೆ ಮಾಡುವುದು ಇನ್ನೂ ನಿಂತಿಲ್ಲ. ಇವು ಬಸವಣ್ಣನವರ ವಿಚಾರಗಳಿಗೆ ವಿರುದ್ಧವಾದವು.ಈ ಅಂತಃಕರಣದ ಅರಿವೇ ಇಷ್ಟಲಿಂಗವಾಯಿತು. ಅವರು ಈ ಅಂತಃಕರಣವನ್ನೇ ಇಷ್ಟಲಿಂಗ ರೂಪದಲ್ಲಿ ಧರಿಸಿದರು ಮತ್ತು ಅವರಲ್ಲಿಗೆ ಬಂದ ಜನರಿಗೆಲ್ಲ ಧರಿಸಲು ಕೊಟ್ಟರು. ಎಲ್ಲ ಜಾತಿ, ಜನಾಂಗಗಳ ಬಡವರನ್ನು, ದಲಿತರನ್ನು, ಒಂದು ಗೂಡಿಸಿದರು, ಸಂಘಟಿಸಿದರು. ಅವರಿಗೆ ಹೊಸ ವೈಚಾರಿಕ ಬದುಕಿನ ಪಾಠ ಹೇಳಿದರು. ಹೊಸ ಸಮಾಜಕ್ಕೆ ಹೋರಾಡುವ ಶಕ್ತಿಯನ್ನು ತುಂಬಿದರು.

ಪಟ್ಟಭದ್ರ ಹಿತಾಸಕ್ತಿಗಳು ಬಸವಣ್ಣನವರ ವಿಚಾರಗಳಿಗೆ ಅವಕಾಶಕೊಡಲಿಲ್ಲ. ದುಡಿಯುವ ವರ್ಗದ, ಕೆಳವರ್ಗದಿಂದ ಬಂದ ಶರಣರ ಕಗ್ಗೊಲೆ ಮಾಡಿದರು. ಹೀಗಾಗಿ ಬಸವಣ್ಣನವರು ಮಾಡಬೇಕಾಗಿದ್ದ ಸಮಗ್ರ್ರ ಕ್ರಾಂತಿಗೆ ಹಿನ್ನಡೆಯಾಯಿತು. ಲಿಂಗ ಕಟ್ಟಿಸಿಕೊಂಡವರೆಲ್ಲ ಸಮಾಜದಲ್ಲಿ ಒಂದು ಜಾತಿಯಾಗಿ ರೂಪುಗೊಂಡದ್ದು ಅತ್ಯಂತ ವಿಶಾದದ ಸಂಗತಿ. ‘ಲಿಂಗಾಯತ’ ಎಂಬುದು ಒಂದು ಜಾತಿಯಲ್ಲ. ಅದೊಂದು ತತ್ವವಾಗಿದೆ. ಸಮಾಜದಲ್ಲಿ ಸಮಾನತೆ ಸಾರುವ ವ್ಯಕ್ತಿಯ ನಡೆ-ನುಡಿಯಾಗಿದೆ.

ಬಸವಣ್ಣನವರ ವ್ಯಕ್ತಿತ್ವ ಬಹುಮುಖವಾದದ್ದು

ಜಗತ್ತಿನ ಇತಿಹಾಸದಲ್ಲಿ ಚಿರಂತನವಾಗಿ ಬೆಳಗುತ್ತಿರುವ ಮಹೋನ್ನತ ವ್ಯಕ್ತಿತ್ವ ಬಸವಣ್ಣನವರದು. ಅವರು ಪುರಾಣ ಪುರುಷರಲ್ಲ; ಚಾರಿತ್ರಿಕ ವ್ಯಕ್ತಿ. ವ್ಯಕ್ತಿ ಚಾರಿತ್ರ್ಯ, ಸಮಾಜದ ಆರೋಗ್ಯ ಸುಧಾರಿಸಲು ಯತ್ನಿಸಿದರು. ಧರ್ಮ ಕೆಲವರ ಸ್ವತ್ತಲ್ಲ ಸರ್ವರ ಸಂಪತ್ತೆಂದರು.

ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅವರು ಮಾಡಿದ ಸುಧಾರಣೆ ವಿಶಿಷ್ಟವಾದದ್ದು. ಬಸವಣ್ಣನವರ ಜೀವನದ ಮೂಲ ಶ್ರುತಿಗಳು ಎರಡು. ಒಂದು ‘ವಿನಯ’; ಇನ್ನೊಂದು ‘ಆದರ್ಶ’, ತನಗಿಂತ ಕಿರಿಯರಿಲ್ಲ ಎಂಬ ವಿನಯ, ಸಕಲ ಜೀವರಿಗೆ ಲೇಸನೇ ಬಯಸುವ, ಅನ್ಯರಿಗೆ ಅಸಯ್ಯಪಡದ ಉನ್ನತವಾದ ಆದರ್ಶ. ಕಾಯಕ ನಿಷ್ಠೆ, ದಾಸೋಹಭಾವ; ದೀನರನ್ನು ದಲಿತರನ್ನು ಕಂಡು ಅವರನ್ನು ಎದೆಗಪ್ಪಿಕೊಂಡ ಹಿಮಾಲಯದೆತ್ತರದ ಧೈರ್ಯ. “ಇವನಾರವ ಇವನಾರವ” ಎಂದಿನಿಸದೇ ಇವ ನಮ್ಮವ ಎಂಬ ಮಹಾ ಮಾನವತಾ ಪ್ರೇಮ. ತಾರತಮ್ಯವನ್ನು ಒಪ್ಪದ ಅವರ ವ್ಯಕ್ತಿತ್ವ ಬಹುಮುಖವಾದದ್ದು. ಭಕ್ತಿ ಭಂಡಾರಿ, ಸಮಾಜಸುಧಾರಕ, ಆರ್ಥಿಕಚಿಂತಕ, ಧರ್ಮದಲ್ಲಿ ಕ್ರಾಂತಿಕಾರಿ, ಅನುಭಾವಿ, ಕವಿ, ಕಾರಣಿಕ, ವಚನಕಾರ ಹೀಗೆ ಹಲವು ಹತ್ತು ಮುಖಗಳಲ್ಲಿ ಆತ ಸೀಮಾಪುರುಷ. ಒಂದು ಯುಗದ ಮನೋಧರ್ಮವನ್ನು ರೂಪಿಸಿದ ಯುಗ ಪ್ರವರ್ತಕ ಬಸವಣ್ಣನವರು.

ಬಸವಣ್ಣನವರ ಕಾಯಕದ ಪರಿಕಲ್ಪನೆ

ಬಸವಣ್ಣನವರ ಕಾಯಕ ತತ್ವಕ್ಕೆ ಜಾತಿ-ವರ್ಗಗಳ ಭೇದವಿಲ್ಲ. ಅದು ಒಳಗೊಂಡಿರುವ ತತ್ವವೆಂದರೆ ‘ಶ್ರಮ’ ಗೌರವಿಸುವುದು. ಕಾಯಕನಿಷ್ಠೆಗೆ ಬದ್ಧನಾಗಿರುವುದು. ಸಂತ್ರ್ರೃಪ್ತದಾಯಕ ಬದುಕು, ಸಮಾನತೆ, ನಿಸ್ವಾರ್ಥ ಭಾವನೆ, ಅರ್ಪಣಾಮನೋಭಾವಗಳಿವೆ.

ಕಾಯಕವೆಂದರೆ ಶರೀರ ದಣಿಸುವುದಷ್ಟೇ ಅಲ್ಲ. ಪರಿಶುದ್ಧ ಮನಸ್ಸಿನಿಂದ ಕೂಡಿದ ತನುವಿಗೆ ಸಂತೃಪ್ತಿ ತರುವ, ಪರಹಿತಕಾಯುವ ಕರ್ತವ್ಯನಿಷ್ಠೆಯೇ ಕಾಯಕವಾಗಿದೆ. ಇದು ಸಮಾನತೆಯ ತತ್ವದ ಆಧಾರದ ಮೇಲೆ ರೂಪುಗೊಂಡಿರುವ ವಿಶಿಷ್ಠ ಕಲ್ಪನೆಯಾಗಿದೆ. ಕಾಯಕಗಳು ದಾಸೋಹಕ್ಕೆ ಮನ್ನಣೆ ನೀಡಬೇಕು. ಹೀಗಾಗಿ ‘ಕಾಯಕವೇ ಕೈಲಾಸ’ವೆಂಬುದು ಬಸವಣ್ಣನವರ ಕಲ್ಪನೆಯಾಗಿತ್ತು.

ಮಹಿಳೆಯರಿಗೆ ವೈಚಾರಿಕ, ಅಭಿವ್ಯಕ್ತಿ, ಧಾರ್ಮಿಕ ಸ್ವಾತಂತ್ರ್ಯ

ಬಸವಣ್ಣನವರು ಮಹಿಳೆಯರಿಗೆ ಮುಕ್ತ ವಾತಾವರಣವನ್ನು ಕಲ್ಪಿಸಿದರು. ಪುರುಷರು ಮತ್ತು ಮಹಿಳೆಯರು ಸಮಾನನಡೆಯಲ್ಲಿ ವೈಚಾರಿಕತೆಯುಳ್ಳವರಾದರೆ ನಮ್ಮ ಸಮಾಜದ ಸಮಸ್ಯೆಗಳೆಲ್ಲ ಕರಗಿ ಹೋಗುತ್ತವೆ. ಹೀಗಾಗಿ ಮಹಿಳೆಯರಲ್ಲಿ ವೈಚಾರಿಕ ಪ್ರಜ್ಞೆ, ಅಭಿವ್ಯಕ್ತಿ ಸ್ವಾತಂತ್ರ್ಯ ಬೆಳೆಯಲು ಪೂರಕ ಪರಿಸರವನ್ನು ನಿರ್ಮಿಸಿದರು. ‘ಪರವಧುವನ್ನು ಮಹಾದೇವಿಯೆಂಬೆ’ ಎಂಬ ಅವರ ಮಾತು ಮಹಿಳೆಯರ ಕುರಿತು ಅವರಿಗಿದ್ದ ಗೌರವ ಭಾವನೆ ವ್ಯಕ್ತವಾಗುತ್ತದೆ. ಸ್ತ್ರೀಯರೂ ಕೂಡ ಸಾಹಿತ್ಯ ರಚನೆಯಲ್ಲಿ ತೊಡಗಲು ಪ್ರೊತ್ಸಾಹಿಸಿದರು. ‘ಅನುಭವ ಮಂಟಪ’ದ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಚರ್ಚೆಗಳಲ್ಲಿ ಮಹಿಳೆಯರು ಭಾಗವಹಿಸಿದರು. ಇವರಲ್ಲಿ 35 ಜನ ವಚನಕಾರ್ತಿಯರು ಸಾವಿರಾರು ವಚನಗಳನ್ನು ರಚಿಸಿದರು. ಗಂಡಾದರೇನು, ಹೆಣ್ಣಾದರೇನು ಎಲ್ಲರಿಗೂ ಕಾಯಕಬೇಕು ಎಂದರು. ಮಹಿಳೆಯರ ಧಾರ್ಮಿಕ, ಆರ್ಥಿಕ ಸ್ವಾತಂತ್ರ್ಯವು ಸಮಾಜದಲ್ಲಿ ಸಮಾನತೆ ಒದಗಿಸಿತು. ಅಕ್ಕಮಹಾದೇವಿ, ಲಕ್ಕಮ್ಮ, ನೀಲಾಂಬಿಕೆ, ಮಹಾದೇವಮ್ಮ, ಕಾಳೆವ್ವೆ ಮುಂತಾದವರು ಬರೆದ ವಚನಗಳು ಕನ್ನಡಸಾರಸ್ವತ ಲೋಕಕ್ಕೆ ವಿನೂತನ ಕಾಣಿಕೆ ಎನ್ನಬಹುದು.

ಜಂಗಮಸೇವೆಗಾಗಿ ನಿರತ ಬಸವಣ್ಣನವರು

ಜಂಗಮಸೇವೆ ಅಂದರೆ ಸಮಾಜಸೇವೆಯ ಭಾಗವೆಂಬಂತೆ ವರ್ಣಭೇದ, ವರ್ಗಭೇದ, ಲಿಂಗಭೇದ, ನಿರಾಕರಣೆಯ ತೀವ್ರಕ್ರಮಗಳನ್ನು ಕೈಗೆತ್ತಿಕೊಂಡರು. ಈ ಪ್ರಗತಿಪರ ಧೋರಣೆಗಳನ್ನು ಪ್ರತಿಭಟಿಸುವ ರೀತಿಯಲ್ಲಿ ಅಗ್ರಹಾರ ಸಂಸ್ಕøತಿ, ದೇವಾಲಯ ಸಂಸ್ಕøತಿ ಮತ್ತು ರಾಜಸತ್ತಾ ಸಂಸ್ಕøತಿಗಳು ಒಟ್ಟಾಗಿ ನಿಂತು ಬಸವಣ್ಣನ ಈ ಅಂದೋಲನವನ್ನು ಹತ್ತಿಕ್ಕಿದವು. ಸತ್ಯವನ್ನು ಎತ್ತಿ ಹಿಡಿದ ಬಸವಣ್ಣ ಹಾಗೂ ಸಮಕಾಲಿನ ಶರಣರು ದಮನಕ್ಕೆ ಗುರಿಯಾದರು. ಹುತಾತ್ಮರಾದರು ಬಸವಣ್ಣ ಕಲ್ಯಾಣವನ್ನು ತೊರೆದು ಕೂಡಲ ಸಂಗಮಕ್ಕೆ ಬಂದು ಐಕ್ಯನಾದನು.
ಶರಣ ಸಮುದಾಯದ ಸಂಘಟನೆ, ಅನುಭವ ಮಂಟಪ ಸ್ಥಾಪನೆ, ಸಿದ್ದಾಂತಗಳ ರಚನೆ, ಪ್ರಸಾರ, ವಚನಸಾಹಿತ್ಯದ ಸೃಷ್ಠಿ, ಇತ್ಯಾದಿ ಕಾರ್ಯಗಳು ನಡೆಸಿದ ಬಸವಣ್ಣನಿಗೆ ಸಮಾಜಸೇವೆ, ಸಮಾಜಕಲ್ಯಾಣದ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡನು. ಲಿಂಗದಿಂದ ಜಂಗಮಕ್ಕೆ ವಿಸ್ತಾರಗೊಂಡ ಕಾಲಘಟ್ಟವದು. ಸಾಮಾನ್ಯವಾಗಿ ಯುಗ ಪುರುಷರು ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಆರ್ಥಿಕ ಹೀಗೆ ಜೀವನದ ಯಾವುದೋ ಒಂದು ಕ್ಷೇತ್ರಕ್ಕೆ ಹೊಸ ತಿರುವು, ಸುಧಾರಣೆ ತಂದುಕೊಡುತ್ತಾರೆ. ಬಸವಣ್ಣನವರು ಇಂತಹ ಎಲ್ಲ ಕ್ಷೇತ್ರಗಳಿಗೂ ಹೊಸತಿರುವು ಕೊಟ್ಟ ಕಾರಣ ಯುಗ ಪುರಷನೆನಿಸಿದ್ದಾನೆ.

ಅವರನ್ನು ಜಗತ್ತು ಕಂಡ ಅಪರೂಪದ ಮಹಾನ್ ವ್ಯಕ್ತಿ, ಜಗಜ್ಯೋತಿ ಬಸವಣ್ಣ ಎಂದು ಗುರುತಿಸಬಹುದು ಕರ್ನಾಟಕ ಸರ್ಕಾರ ಅವರನ್ನುಸಾಂಸ್ಕೃತಿಕ ನಾಯಕ ಎಂದು ಆದೇಶಿಸಿರುವುದು ಸಂತಸದ ಸಂಗತಿ. ಅವರ ಕಾಯಕದ ಆದರ್ಶಗಳನ್ನು, ಮೌಲ್ಯಗಳನ್ನು  ಸರ್ಕಾರ ಪಾಲಿಸ ಬೇಕಾಗಿದೆ.

ಡಾ. ಗಂಗಾಧರಯ್ಯ ಹಿರೇಮಠ
ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.
ಮೊ: 9880093613

Share.
Leave A Reply

Exit mobile version