ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಮತದಾನ ಪ್ರಮಾಣ ಭಾರಿ ಹೆಚ್ಚಳ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಯಶಸ್ಸಿಗೆ ಕಾರಣರಾದ ಅಧಿಕಾರಿಗಳ ತಂಡ, ಮತದಾರರಿಗೆ ಜಿಲ್ಲಾಡಳಿತ ಅಭಿನಂದನೆ ಸಲ್ಲಿಸಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಎಂವಿ ವೆಂಕಟೇಶ್ ಮಾತನಾಡಿ,  ದಾವಣಗೆರೆ ಲೋಕಸಭಾ ಕ್ಷೇತ್ರ ಹರಪನಹಳ್ಳಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುತ್ತದೆ. ಇಲ್ಲಿ ಒಟ್ಟು 1946 ಮತಗಟ್ಟೆಗಳಿಂದ 851990 ಪುರುಷ, 857117 ಮಹಿಳಾ, 137 ಇತರೆ ಮತದಾರರು ಸೇರಿ 1709244 ಮತದಾರರಿದ್ದರು.

 ಮಂಗಳವಾರ ಬೆಳಗ್ಗೆ ಅಣಕು ಮತದಾನ ನಂತರ 7 ಗಂಟೆಯಿಂದ ಸ್ವಲ್ಪ ಮಂದಗತಿಯಿಂದ ಆರಂಭವಾದ ಮತದಾನ 9 ಗಂಟೆಯವರೆಗೆ ಶೇ 9.13 ರಷ್ಟು ಮತದಾನವಾಗಿತ್ತು. ಇದು 11 ಗಂಟೆಯ ವೇಳೆಗೆ ಏರುಗತಿಯಲ್ಲಿ ಸಾಗಿ ಶೇ 23.77 ರಷ್ಟು ದಾಖಲಾಯಿತು.

ಮಧ್ಯಾಹ್ನ ಬಿಸಿಲಿನಲ್ಲಿಯು ಸರತಿ ಸಾಲಿನಲ್ಲಿ ನಿಂತ ಜನರಿಂದ ಮತದಾನ ಚುರುಕುಗೊಂಡು ಮಧ್ಯಾಹ್ನ 1 ಗಂಟೆಗೆ ಮತದಾನ ಪ್ರಮಾಣ ಶೇ 42.27 ಕ್ಕೇರಿತು. ಮಧ್ಯಾಹ್ನ 3 ಗಂಟೆಗೆ 57.34 ರಷ್ಟು ದಾಖಲಿಸಿ ಸಂಜೆ 5 ಗಂಟೆಗೆ ಶೇ 70.94 ರಷ್ಟು ಮತದಾನವಾಗಿತ್ತು. ಅಂತಿಮ ಹಂತದ ಮತದಾನ ಪ್ರಮಾಣವನ್ನು ನಿರೀಕ್ಷಿಸಲಾಗಿದ್ದು 2019 ರ ಚುನಾವಣೆಯಲ್ಲಿ ದಾಖಲಾಗಿದ್ದ ಶೇ 72.96 ರಷ್ಟು ಮತದಾನ ಪ್ರಮಾಣದ ದಾಖಲೆಯನ್ನು ಹಿಂದಿಕ್ಕಿ ಗಣನೀಯ ಮತಪ್ರಮಾಣ ಏರಿಕೆಯಾಗಲಿದೆ ಎಂದು ಆಶಿಸಲಾಗಿದೆ.

 ಚುನಾವಣಾ ಪ್ರಕ್ರಿಯೆಯಲ್ಲಿ ಕಳೆದ ಮೂರು, ನಾಲ್ಕು ತಿಂಗಳುಗಳಿಂದ ತಂಡಗಳು ನಿರಂತರ ಕೆಲಸ ಮಾಡುತ್ತಾ ಬರಲಾಯಿತು. ಪ್ರಮುಖವಾಗಿ ಮತದಾರರ ನೊಂದಣಿ, ಮತದಾರರ ಜಾಗೃತಿ ಕಾರ್ಯಕ್ರಮಗಳ ಮೂಲಕ ಮತದಾರರಿಗೆ ಮಾಹಿತಿ, ಅರಿವು ಮೂಡಿಸುವ ಕೆಲಸವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ರವರು ನಿರಂತರ ಸ್ವೀಪ್ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಿ ಮತದಾರರು ಜಾಗೃತರನ್ನಾಗಿಸಲು ಶ್ರಮಿಸಿದ್ದಾರೆ. ಮತ್ತು ಸುಧೀರ್ಘವಾದ ಚುನಾವಣೆಯಲ್ಲಿ ಸಂಪೂರ್ಣ ಶಾಂತಯುತ ಚುನಾವಣೆ ನಡೆಸಲು ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಮತ್ತು ಪೊಲೀಸ್ ಇಲಾಖೆ, ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಚುನಾವಣಾ ತಂಡಗಳಲ್ಲಿ ಕೆಲಸ ಮಾಡುವ ಮೂಲಕ ಮಾದರಿ ನೀತಿ ಸಂಹಿತೆ ಜಾರಿಗೆ ತರಳು ದಿನದ ಮೂರು ಪಾಳಿಯಲ್ಲಿ ಕೆಲಸ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯವನ್ನು ಮೆಚ್ಚಲಾಗಿದೆ.

ಮತದಾನ ದಿನ ಅಂದಾಜು 8996 ಮತದಾನ ಸಿಬ್ಬಂದಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಚುನಾವಣೆಯನ್ನು ಯಶಸ್ವಿಯಾಗುವಂತೆ ಮಾಡಿದ್ದಾರೆ.  ಚುನಾವಣಾ ಆಯೋಗದ ನಿಯಮಗಳನ್ನು ಚಾಚು ತಪ್ಪದೇ ಪಾಲನೆ ಮಾಡುವ ಮೂಲಕ ಮತದಾನದಲ್ಲಿ ಭಾಗಿಯಾದ ಮತದಾರರು ಹಾಗೂ ದಾವಣಗೆರೆ ಜಿಲ್ಲೆಯ ನಾಗರಿಕರ ಸಹಕಾರ ಬಹಳ ದೊಡ್ಡದಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮನ್ನಣೆ ನೀಡಿದ ಜನತೆಗೆ ಅಭಿನಂದನೆಗಳನ್ನು ತಿಳಿಸಲಾಗಿದೆ.

ಮತ ಎಣಿಕೆ ಜೂನ್ 4

ಲೋಕಸಭಾ ಮತದಾನ ಎಣಿಕೆಯು ಜೂನ್ 4 ರಂದು ಬೆಳಗ್ಗೆ 8 ರಿಂದ ತೋಳಹುಣಸೆ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿಯಲ್ಲಿ ನಡೆಯಲಿದ್ದು ಅಲ್ಲಿಯವರೆಗೆ ಲೋಕಸಭಾ ಕ್ಷೇತ್ರದ 30 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿರಲಿದ್ದು ಮತ ಎಣಿಕೆ ಪ್ರತಿ ಕ್ಷೇತ್ರದಲ್ಲಿ ಒಟ್ಟು 14 ಟೇಬಲ್‍ಗಳಲ್ಲಿ ನಡೆಯಲಿದೆ.

=====

Share.
Leave A Reply

Exit mobile version