→ನಂದೀಶ್ ಭದ್ರಾವತಿ, ಶಿವಮೊಗ್ಗ/ಚಿತ್ರದುರ್ಗ
ಇತ್ತೀಚೆಗೆ ಸೈಬರ್ ಕ್ರೈಂ ಹೆಚ್ಚುತ್ತಿದ್ದು, ಸಿಇಎನ್ ಪೊಲೀಸರು ಸೈಬರ್ ಕ್ರೈಂ ಜತೆ ಇಸ್ಪೀಟ್ ಆಟ, ಗಾಂಜಾ, ಓಸಿ, ಬೆಟ್ಟಿಂಗ್ ಹೀಗೆ ಜೂಜಾಟವಾಡುತ್ತಿದ್ದವರನ್ನು ಮಟ್ಟ ಹಾಕುತ್ತಿದ್ದರು. ಆದರೆ ಇದೆ ಇಲಾಖೆಯಲ್ಲಿದ್ದ ಎಎಸ್ ಐ ರೊಬ್ಬರು ಓಸಿ ಆಟಕ್ಕೆ ಬೆಂಬಲ ಸೂಚಿಸಿ ಹಣ ಪಡೆಯುತ್ತಿದ್ದ ವೇಳೆ ಚಿತ್ರದುರ್ಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಿವಮೊಗ್ಗದ ಸಿಇಎನ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಮೊಹಮ್ಮದ್ ರೆಹಮಾನ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಖಾಕಿ.
ಶಿವಮೊಗ್ಗದ ಆರ್ಎಂಎಲ್ ನಗರದ ನಿವಾಸಿ ಕನ್ಸಲ್ಟೆಂಟ್ ವ್ಯವಹಾರ ಮಾಡುತ್ತಿದ್ದ ರಫೀಕ್ ಎಂಬುವವರ ದೂರಿನ ಆಧಾರದ ಮೇಲೆ ಲೋಕಾಯುಕ್ತರು ದಾಳಿ ನಡೆಸಿ ಎಡೆಮುರಿ ಕಟ್ಟಿದ್ದಾರೆ.
ನಡೆದಿದ್ದಾರೂ ಏನು?
ಶಿವಮೊಗ್ಗ ನಗರ ಎನ್.ಟಿ. ರಸ್ತೆ, ಸುಂದರಾಶ್ರಯ ಎದುರು ದೂರುದಾರ ರಫೀಕ್ ಗ್ಯಾನ್ ಜೀರೋ ಟು ಹಿರೋ ಹೆಸರಿನ ಕನ್ಸ್ಲ್ಡಿಂಗ್ ಶಾಪ್ ಇಟ್ಟುಕೊಂಡು ರಿಯಲ್ ಎಸ್ಟೇಟ್, ಹಳೆಯ ಕಾರ್ ಡೀಲರ್, ಮನೆಯನ್ನು ಲೇಜ್ಗೆ ಬಾಡಿಗೆ ಕೊಡಿಸುವ ಕೆಲಸ ಮಾಡಿಕೊಂಡಿದ್ದರು. ಇವರಿಗೆ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ. ಆಗಿ ಕೆಲಸ ಮಾಡುತ್ತಿರುವ ರೆಹಮಾನ್ ಪರಿಚಯ ಇತ್ತು. ಈ ಹಿಂದೆ ಶಿವಮೊಗ್ಗ ಪೊಲೀಸ್ ಠಾಣೆಗಳಲ್ಲಿ ದೂರುದಾರ ರಫೀಕ್ ಓಸಿ (ಮಟ್ಕಾ) ಜೂಜಾಟ ನಡೆಸುತ್ತಿರುತ್ತಾರೆಂದು ಕೇಸು ದಾಖಲಿಸಿದ್ದರು. ಈ ನಡುವೆ ಕೆಲವು ಕೇಸುಗಳು ಕೋರ್ಟ್ ವಿಚಾರಣೆಯಲ್ಲಿದೆ.
ಮಾ.2 ರಂದು ರಾತ್ರಿ ಶಿವಮೊಗ್ಗ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಎಎಸ್ ಆಗಿ ಕೆಲಸ ಮಾಡುವ ರೆಹಮಾನ್ ರಫೀಕ್ ಗೆ ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ. ಡಿಪೋ ಹತ್ತಿರ ಬರುವಂತೆ ತಿಳಿಸಿದ್ದರು. ರಾತ್ರಿ ಸುಮಾರು 10.45 ಕ್ಕೆ ಹೇಳಿದಂತೆ ರಫೀಕ್ ತನ್ನ ಮಾರುತಿ ಸ್ವಿಫ್ಟ್ ಕಾರ್ ನಲ್ಲಿ ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ. ಡಿಪೋ ಹತ್ತಿರ ಹೋಗಿದ್ದಾರೆ. ಬಳಿಕ ರಾತ್ರಿ 11.00 ಗಂಟೆ ಸುಮಾರಿಗೆ ಎಎಸ್ ಐ ರೆಹಮಾನ್ ರಫೀಕ್ ಜತೆ ಕಾರಿನಲ್ಲಿ ವ್ಯವಹಾರ ಶುರು ಮಾಡಿದ್ದಾರೆ.
ಶಿವಮೊಗ್ಗ ಸಿಟಿಯಲ್ಲಿ ಮಟ್ಕಾ ಬರೆಯುವವರ ಹತ್ತಿರ ಹೋಗಿ ಅವರ ಹತ್ತಿರ ದುಡ್ಡನ್ನು ಕಲೆಕ್ಟ್ ಮಾಡಿ ತಂದುಕೊಡುವಂತೆ ಎಎಸ್ ಐ ರೆಹಮಾನ್ ದೂರುದಾರ ರಫೀಕ್ ಗೆ ತಿಳಿಸಿದ್ದಾರೆ.
ಆಗ ರಫೀಕ್ ತನಗೆ ಇದರಿಂದ ತೊಂದರೆ ಆಗುತ್ತದೆ ಎಂದು ಹೇಳಿದಾಗೆ ಎಎಸ್ ಐ ರೆಹಮಾನ್ ನಿನಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳುತ್ತೇನೆ . ನೀನು ಪ್ರತಿ ತಿಂಗಳು 30,000 ರೂ.ನಂತೆ ಒಟ್ಟು 1,20,000 ರೂ.ಗಳನ್ನು ತಂದುಕೊಡುವಂತೆ ರೆಹಮಾನ್ ಹೇಳಿದ್ದಾರೆ. ಆಗ ರಫೀಕ್. ಅಷ್ಟೊಂದು ಆಗೋದಿಲ್ಲ ನನಗೆ ತುಂಬಾ ಕಷ್ಟ ಆಗುತ್ತದೆ. ಪ್ರತಿ ತಿಂಗಳು 25,000 ರೂ. ನಂತೆ 1,00,000 ರೂ. ತಂದು ಕೊಡುತ್ತೇವೆ. ಒಂದು ಲಕ್ಷ ಇಪ್ಪತ್ತು ಸಾವಿರದಲ್ಲಿ ಮೇಲಿನ 20,000 ರೂ. ಆದರೂ ಬಿಡಿ ಎಂದು ರಫೀಕ್ ಕೇಳಿದ್ದಾರೆ.
ಆಗ ಎಎಸ್ ಐ ರೆಹಮಾನ್ ಆಯ್ತು ರೂ. 1,00,000/- (ಒಂದು ಲಕ್ಷ) ರೂಪಾಯಿಯನ್ನು ತಮ್ಮ ಬುರ್ಕಾ ಅಂಗಡಿಯ ಹತ್ತಿರ ಬಂದು ಫೋನ್ ಮಾಡಿ ತಂದು ಕೊಡುವಂತೆ ಹೇಳಿದ್ದಾರೆ. ಆಗ ದೂರುದಾರ ರಫೀಕ್ ಎ.ಎಸ್.ಐ. ರೆಹಮಾನ್ ಆಡಿದ ಮಾತುಗಳನ್ನು ರೆಕಾರ್ಡ್ ಮಾಡಿದ್ದಾರೆ.
ಹಮಾಲಿಗಳ ವೇಷದಲ್ಲಿ ಬಂದಿದ್ದರು:
ಶಿವಮೊಗ್ಗದ ಲೋಕಾಯುಕ್ತ ಹಾಗೂ ಸ್ಥಳೀಯ ಪೊಲೀಸರು ಮೊಹಮ್ಮದ್ ರೆಹಮಾನ್ ಅವರಿಗೆ ಪರಿಚಯವಿದ್ದ ಕಾರಣ ಚಿತ್ರದುರ್ಗದಿಂದ ಬಂದಿದ್ದ ಎಸ್ಪಿ ವಾಸುದೇವರಾಮ್ ನೇತೃತ್ವದ ಲೋಕಾಯುಕ್ತ ಪೊಲೀಸರು ಪಂಚೆ-ಬನಿಯನ್ ತೊಟ್ಟು ಹಮಾಲಿಗಳ ವೇಷದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು.ಹಣಕ್ಕೆ ಬೇಡಿಕೆ ಇಟ್ಟಿರುವುದನ್ನು ಖಾತರಿಪಡಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿಯಲು ಸಿದ್ಧತೆ ನಡೆಸಿದ್ದರು.
ಇಲ್ಲಿನ ಜಯನಗರ ಪೊಲೀಸ್ ಠಾಣೆ ಕಟ್ಟಡದಲ್ಲಿರುವ ಸಿಇಎನ್ ಠಾಣೆಯ ಬಳಿ ಕಾದು ನಿಂತಿದ್ದ ಲೋಕಾಯುಕ್ತ ಪೊಲೀಸರು, ನಿಗದಿಯಂತೆ ಠಾಣೆಯ ಬಳಿ ರೆಹಮಾನ್ ದೂರುದಾರ ರಫೀಕ್ ಅವರಿಂದ ಲಂಚದ ಮೊತ್ತ ಪಡೆಯುವಾಗ ದಾಳಿ ನಡೆಸಿ ಹಣದ ಸಮೇತ ಬಂಧಿಸಿದ್ದಾರೆ .
ಲಕ್ಷ ರೂ.ವಶಕ್ಕೆ
ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ರೆಹಮಾನ್ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ ರೂ.1,00,000/-ಗಳ ಲಂಚದ ಹಣವನ್ನು ಜಪ್ತಿಪಡಿಸಿಕೊಂಡು ಅವರನ್ನು ಸಹಾ ಬಂಧಿಸಿದ್ದು, ಮುಂದಿನ ತನಿಖೆಯನ್ನು ಉಮೇಶ್ ಈಶ್ವರ ನಾಯ್ಕ, ಪೊಲೀಸ್ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರು ಕೈಗೊಂಡಿದ್ದಾರೆ. ಇನ್ನುಪೊಲೀಸ್ ಉಪಾಧೀಕ್ಷಕ ಉಮೇಶ ಈಶ್ವರ ನಾಯ್ಕ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಟ್ರ್ಯಾಪ್ ಕಾಲಕ್ಕೆ ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ ಕಛೇರಿಯ ಪೊಲೀಸ್ ನಿರೀಕ್ಷಕರಾದ ವೈಎಸ್ ಶಿಲ್ಪಾ,ಮತ್ತು ಸಿಬ್ಬಂದಿಯವರಾದ ಜಿ.ಎನ್. ಸಂತೋಷ್, ಸಿಪಿಸಿ, ಎಂ.ವೀರೇಶ್, ಸಿಪಿಸಿ, ಕೆ.ಟಿ. ಮಾರುತಿ, ಸಿಪಿಸಿ,ಜಿ.ಮಹಾಲಿಂಗಪ್ಪ, ಸಿಪಿಸಿ ಮತ್ತು ಶ್ರೀ ಆರ್. ವೆಂಕಟೇಶ್ ಕುಮಾರ್ ಇದ್ದರು. ಒಟ್ಟಾರೆ ಅಕ್ರಮ ಹಣಕ್ಕೆ ಕೈ ಇಟ್ಟಿದ್ದವ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಇವರ ಹಿಂದೆ ಇರುವ ಕಾಣದ ಕೈಗಳನ್ನು ಸಹ ಮಟ್ಟ ಹಾಕಬೇಕಿದೆ.
.