ಶಿವಮೊಗ್ಗ : ಮಾಜಿ ಸಿಎಂ ಬಿಎಸ್​​ವೈ ಮತ್ತು ಅವರ ಪುತ್ರರ ವಿರುದ್ಧ ಸಿಡಿದೆದ್ದಿರೋ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, BSYಗೆ ಸಂಬಂಧಿಸಿದ ಆ 1 ಸೀಕ್ರೆಟ್​​ಅನ್ನ ಬಿಚ್ಚಿಟ್ಟಿದ್ದಾರೆ. ಇದು ರಾಜ್ಯ ಬಿಜೆಪಿಗೆ ಮುಳುವಾಗೋ ಎಲ್ಲಾ ಸಾಧ್ಯತೆ ಇದೆ. ಹಾಗಾದ್ರೆ ಏನದು ಕೆ.ಎಸ್ ಈಶ್ವರಪ್ಪ ಬಿಚ್ಚಿಟ್ಟ ಆ ಗುಟ್ಟು ಅಂದ್ರಾ.?

ಕೆ.ಎಸ್. ಈಶ್ವರಪ್ಪ.. ತಮ್ಮ ಪುತ್ರನಿಗೆ ಹಾವೇರಿ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಕೊತಕೊತ ಕುದಿಯುತ್ತಿದ್ದಾರೆ. ಸಾಲ್ದು ಅಂತೇಳಿ ಮಾಜಿ ಸಿಎಂ ಬಿಎಸ್​ವೈ ವಿರುದ್ಧ ರೊಚ್ಚಿಗೆದ್ದಿದ್ದು, ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಆದ್ರೆ ಈಶ್ವರಪ್ಪ ಈಗ್ಲೂ ಬಿಜೆಪಿ ವಿರುದ್ಧ ದನಿ ಎತ್ತುತ್ತಿಲ್ಲ. ರಾಜ್ಯ ಬಿಜೆಪಿಯಲ್ಲಿ ಕಂಪ್ಲೀಟ್ ಆವರಿಸಿಕೊಂಡಿರೋ ಬಿಎಸ್​ವೈ ಮತ್ತು ಅವರ ಪುತ್ರರಾದ ಬಿವೈ ವಿಜಯೇಂದ್ರ ಮತ್ತು ಬಿವೈ ರಾಘವೇಂದ್ರ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾದ ಸಂದರ್ಭದಲ್ಲಿ ಹಿಂದುತ್ವದ ಉಳಿವು, ಪಕ್ಷದ ಶುದ್ಧೀಕರಣ, ಅಪ್ಪ-ಮಕ್ಕಳಿಂದ ರಾಜ್ಯ ಬಿಜೆಪಿಯನ್ನು ಮುಕ್ತಗೊಳಿಸುವುದೇ ನನ್ನ ಚುನಾವಣಾ ಪ್ರಣಾಳಿಕೆ ಎಂದು ಟ್ವೀಟ್ ಮಾಡಿದ್ರು.

ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರೆ, ಅಪಪ್ರಚಾರ ಮಾಡಿ ರಾಷ್ಟ್ರಭಕ್ತರಲ್ಲಿ ಗೊಂದಲ ಮೂಡಿಸುವುದನ್ನು ನಿಲ್ಲಿಸಿ, ನರೇಂದ್ರ ಮೋದಿ, ಅಮಿತ್​ ಶಾ ಅಥವಾ ಬೇರೆ ಯಾರೇ ಹೇಳಿದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಕೂಡ ಬರೆದು ಮತ್ತೆ ಬಿ ಎಸ್ ಯಡಿಯೂರಪ್ಪ ಕುಟುಂಬ ವಿರುದ್ಧ ಗುಡುಗಿದ್ದಾರೆ. ನಿಮಗೆ ಗೊತ್ತಿರ್ಲಿ, ರಾಜ್ಯ ಬಿಜೆಪಿಯಲ್ಲಿ ಘಟಾನುಘಟಿ ನಾಯಕರಿಗೆ ಟಿಕೆಟ್ ಕೈ ತಪ್ಪಿಸಿದ್ದರ ಹಿಂದೆ ಬಿಎಸ್​ವೈ ಅವರ ಆ ಸೀಕ್ರೆಟ್ ಪ್ಲ್ಯಾನ್ ಇದೆ ಅಂತೇಳಿದ್ದಾರೆ. ಹಾಗಾದ್ರೆ ಏನದು ಸೀಕ್ರೆಟ್ ಅಂದ್ರಾ.? ಅದನ್ನ ಈಶ್ವರಪ್ಪನವರೇ ಹೇಳ್ತಾರೆ ಕೇಳಿ.

ಕೇಳಿದ್ರಲ್ವಾ, ಕೆ.ಎಸ್ ಈಶ್ವರಪ್ಪ ಹೇಳಿದ್ದೇನು ಅನ್ನೋದನ್ನ.. ಬಿಎಸ್​ವೈ ತಮ್ಮ ಮಗ ವಿಜಯೇಂದ್ರ ಅವರನ್ನ ಶಾರ್ಟ್​ಕಟ್ಟಲ್ಲಿ ಈ ರಾಜ್ಯದ ಸಿಎಂ ಮಾಡೋಕೆ ಪ್ಲ್ಯಾನ್ ಮಾಡಿದ್ದಾರಂತೆ.. ಕೆ.ಎಸ್ ಈಶ್ವರಪ್ಪ, ಸಿಟಿ ರವಿ, ಪ್ರತಾಪ್ ಸಿಂಹ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅಂತವರೆಲ್ಲಾ ಬೆಳೆದ್ರೆ ವಿಜಯೇಂದ್ರ ಸಿಎಂ ಹುದ್ದೆಗೆ ಭವಿಷ್ಯದಲ್ಲಿ ತೊಡಕಾಗ್ತಾರೆ ಅಂತ ಭಾವಿಸಿ ಎಲ್ಲರನ್ನೂ ಮೂಲೆ ಗುಂಪು ಮಾಡೋ ಕೆಲಸಕ್ಕೆ ಬಿಎಸ್​ವೈ ಕೈ ಹಾಕಿದ್ದಾರಂತೆ. ಈಶ್ವರಪ್ಪ ಹೇಳಿರೋದ್ರಲ್ಲಿ ನಿಜ ಇದ್ರೂ, ಇದರಲ್ಲಿ ಇವರ ಸ್ವಾರ್ಥವೂ ಅಡಗಿದೆ. ಹೈಕಮಾಂಡ್ ನಾಯಕರ ಮಾತಿನಂತೆ ಚುನಾವಣಾ ರಾಜಕೀಯಕ್ಕೆ ಗುಡ್​​ಬೈ ಹೇಳಿದ್ದ ಈಶ್ವರಪ್ಪ ಬಿಎಸ್​ವೈ ಅವರನ್ನ ಅಡ್ಡ ಇಟ್ಕೊಂಡು ಮತ್ತೆ ಸಕ್ರಿಯ ರಾಜಕೀಯಕ್ಕೆ ಬರೋ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಇದೇ ಕಾರಣಕ್ಕೆ ಶಿವಮೊಗ್ಗ ಲೋಕಸಭಾ ಅಖಾಡಕ್ಕೆ ಧುಮುಕಿರೋದು. ಮೊನ್ನೆ ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಸಿದ್ದ ಈಶ್ವರಪ್ಪನವರು ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಮೋದಿಯವರನ್ನು ಹೋಲುವ ವ್ಯಕ್ತಿಯನ್ನು ಕರೆತಂದಿದ್ದು ಮಾತ್ರವಲ್ಲದೆ, ಮೋದಿಯವರ ಭಾವಚಿತ್ರವನ್ನು ಕೂಡ ಬಳಸಿದ್ದರು.

ಈ ಬಗ್ಗೆ ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ, ಪಾಪಾ 15 ದಿನದಿಂದ ಈ ರೀತಿ ಅನಿಸಿದೆ, ಮೊದಲು ಹೀಗೆ ಅನಿಸಿರಲಿಲ್ಲ. ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್​ಗೆ ಟಿಕೆಟ್​ ಸಿಕ್ಕಿಲ್ಲ. ಹೀಗಾಗಿ ನಮ್ಮ ಕುಟುಂಬದ ಬಗ್ಗೆ ಈಶ್ವರಪ್ಪ ಟೀಕಾ ಪ್ರಹಾರ ಮಾಡುತ್ತಿದ್ದಾರೆ. ಕೆ.ಇ.ಕಾಂತೇಶ್​ಗೆ ಟಿಕೆಟ್ ಕೊಡದಿರುವುದು ಹೈಕಮಾಂಡ್ ನಿರ್ಧಾರ. ಹೈಕಮಾಂಡ್ ತೀರ್ಮಾನವನ್ನು ಕೆ.ಎಸ್​.ಈಶ್ವರಪ್ಪ ಗೌರವಿಸಬೇಕಿತ್ತು. ನಮ್ಮ ಕುಟುಂಬದ ವಿರುದ್ಧ ಈಶ್ವರಪ್ಪ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಈಶ್ವರಪ್ಪ ಏನೇ ಮಾತನಾಡಿದರೂ ಆಶೀರ್ವಾದ ಅಂದುಕೊಳ್ಳುತ್ತೇನೆ ಎಂದರು.

ಜನರು ಮತದಾನದ ಮೂಲಕ ಉತ್ತರ ಕೊಡುತ್ತಾರೆ. ರಾಘವೇಂದ್ರ ಗೆಲ್ಲಿಸಿ ಎಂದು ಮೋದಿ ಪ್ರಚಾರ ಮಾಡಿ ಹೋಗಿದ್ದಾರೆ. ಈಶ್ವರಪ್ಪ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಈಶ್ವರಪ್ಪಗೆ ನಮ್ಮ ಕುಟುಂಬ ಯಾವುದೇ ಅನ್ಯಾಯ ಮಾಡಿಲ್ಲ ಅಂತೇಳಿದ್ದಾರೆ.

ಅದೇನೇ ಇದ್ರೂ ಈಶ್ವರಪ್ಪನವರ ಬಂಡಾಯದಿಂದ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಅವರಿಗೆ ಪುಕಪುಕ ಶುರುವಾಗಿರೋದಂತೂ ಸುಳ್ಳಲ್ಲ. ಇಲ್ಲಿ ಈಶ್ವರಪ್ಪ ಗೆಲ್ತಾರೆ ಅನ್ನೋದಕ್ಕಿಂತ ಹೆಚ್ಚಾಗಿ, ಈಶ್ವರಪ್ಪ ಬಂಡಾಯದಿಂದ ಕಾಂಗ್ರೆಸ್​​ಗೆ ಲಾಭವಾಗಿ ತಾವು ಸೋಲಬಹುದು ಅನ್ನೋ ಆತಂಕವೇ ಹೆಚ್ಚಾಗಿದೆ. ಹಾಗಾದ್ರೆ ಬಿಎಸ್​ವೈ ಮತ್ತು ಈಶ್ವರಪ್ಪನವರ ನಡುವಿನ ಈ ಕಿತ್ತಾಟದ ಬಗ್ಗೆ ನೀವೇನಂತಿರಾ?

Share.
Leave A Reply

Exit mobile version