ದಾವಣಗೆರೆ : ಒಂದು ಕಡೆ ಬಿರುಬಿಸಿಲು.. ಮತ್ತೊಂದು ಕಡೆ ಚುನಾವಣಾ ಕಾವು.. ಎರಡೂ ದಿನೇ ದಿನೇ ಹೆಚ್ಚಾಗ್ತಾನೇ ಇವೆ. ಕಾಂಗ್ರೆಸ್ಗೆ ಕೋಲಾರ ಮತ್ತು ಬಾಗಲಕೋಟೆಯಲ್ಲಿ ಮಾತ್ರ ಬಂಡಾಯದ ಬಿಸಿ ತಟ್ಟಿದ್ರೆ, ರಾಜ್ಯ ಬಿಜೆಪಿಗೆ ಕರ್ನಾಟಕದ ದಶ ದಿಕ್ಕುಗಳಲ್ಲೂ ಬಂಡಾಯದ ಜ್ವಾಲೆ ಧಗಧಗಿಸುತ್ತಿದೆ. ಟಿಕೆಟ್ ಸಿಗದ ಅಸಮಾಧಾನಿತರು ಟಿಕೆಟ್ ಸಿಕ್ಕ ಬಿಜೆಪಿ ಅಭ್ಯರ್ಥಿಗಳ ವಿರುದ್ಧವೇ ಕೆಂಡಾ ಕಾರುತ್ತಿದ್ದಾರೆ..
ಅದರಲ್ಲೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅಲ್ಲಿನ ಹಾಲಿ ಸಂಸದ ಪಿಸಿ ಮೋಹನ್ ಅವರಿಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಿಗ್ಗಾಮುಗ್ಗಾ ತರಾಟೆಗೆ ತಗೊಂಡಿರೋ ವಿಡಿಯೋ ಫುಲ್ ವೈರಲ್ ಆಗ್ತಾಯಿದೆ. ಹಾಗಾದ್ರೆ ಏನಿದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಿತಾಪತಿ ಅಂದ್ರಾ?
ಇದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ದುಸ್ಥಿತಿ. ಇಲ್ಲಿನ ಹಾಲಿ ಬಿಜೆಪಿ ಎಂಪಿಗೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ನಿನ್ನೆ ಹಿಗ್ಗಾಮುಗ್ಗಾ ಕ್ಲಾಸ್ ತಗೊಂಡಿದ್ದಾರೆ.
ಬೆಂಗಳೂರಿನ ಶಾಂತಿನಗರದಲ್ಲಿ ಪ್ರಚಾರದ ವೇಳೆ ಸಂಸದರ ವಿರುದ್ಧ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದ್ರು. ಇದ್ರಿಂದ ಹಾಲಿ ಸಂಸದ ಪಿಸಿ ಮೋಹನ್‌ಗೆ ಭಾರೀ ಮುಖಭಂಗ ಉಂಟಾಗಿದೆ. MPಯಾಗಿ ಏನ್ ಮಾಡಿದಿಯಾ ನೀನು ಅಂತೇಳಿ ಕಾರ್ಯಕರ್ತರು ಹಿಗ್ಗಾಮುಗ್ಗಾ ತರಾಟೆಗೆ ತಗೊಂಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾಯಿದೆ.
ನಿಮಗೆ ಗೊತ್ತಿರ್ಲಿ, 2009ರಲ್ಲಿ ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಮಧ್ಯೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಸೃಷ್ಟಿಯಾಗಿತ್ತು. ಆದ್ರೆ 2009, 2014 ಮತ್ತು 2019 ಮೂರು ಭಾರಿಯೂ ಬಿಜೆಪಿಯ ಪಿಸಿ ಮೋಹನ್ ಅವರೇ ಸಂಸದರಾಗಿ ಆಯ್ಕೆಯಾಗುತ್ತಿದ್ದಾರೆ. ಆದ್ರೆ ಈ ಸಲ ಬೆಂಗಳೂರು ಕೇಂದ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಹಾಲಿ ಸಂಸದ ಪಿಸಿ ಮೋಹನ್‌ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ಗೆ ವರದಾನವಾಗೋ ಸಾಧ್ಯತೆ ಇದೆ.
ಇನ್ನ ಸೋಷಿಯಲ್ ಮೀಡಿಯಾದಲ್ಲಿ ಪಿಸಿ ಮೋಹನ್‌ಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ತರಾಟೆಗೆ ತಗೊಂಡಿರೋ ವಿಡಿಯೋದಲ್ಲಿರೋ ಪ್ರಕಾರ “ಮೂರು ಬಾರಿ ಸಂಸದರಾಗಿ ಲೋಕಸಭೆಗೆ ಕಳುಹಿಸಿದ್ದೇವೆ. ನಮ್ಮ ಕ್ಷೇತ್ರದ ಸಂಸದರಾಗಿ ಕ್ಷೇತ್ರದ ಅಭಿವೃದ್ಧಿ ಏನು ಮಾಡಿದ್ದೀರಿ? ನಿಮ್ಮ ಸಾಧನೆ ಏನು? ನಾವು ಮೋದಿಯವರನ್ನು ನೋಡಿ ನಿಮಗೆ ಮತ ಹಾಕಿದ್ದೇವೆ. ನೀವು ಈ ಪ್ರದೇಶಕ್ಕೆ ಎಷ್ಟು ಬಾರಿ ಬಂದಿದ್ದೀರಿ? ಬಡವರಿಗೆ ಏನು ಮಾಡಿದ್ದೀರಾ?” ಅಂತೇಳಿ ಬಿಜೆಪಿ ಕಾರ್ಯಕರ್ತರೇ ಸಂಸದ ಪಿಸಿ ಮೋಹನ್‌ಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನ ಕೇಳಿ ತರಾಟೆಗೆ ತಗೊಂಡಿದ್ದಾರೆ.
ಈ ವೇಳೆ ಕೇಂದ್ರದ ಯೋಜನೆಗಳನ್ನು ಉಲ್ಲೇಖಿಸುತ್ತಾ ಸಮಜಾಯಿಷಿ ನೀಡಲು ಬಿಜೆಪಿ ಸಂಸದ ಪಿಸಿ ಮೋಹನ್ ಯತ್ನಿಸಿದರು. ಈ ವೇಳೆ ಪಿ.ಸಿ.ಮೋಹನ್ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಬಿಜೆಪಿ ಕಾರ್ಯಕರ್ತರೊಂದಿಗೆ ವಾಗ್ವಾದಕ್ಕೆ ಇಳಿದರು. ವಾಗ್ವಾದವು ವಿಕೋಪಕ್ಕೆ ತಿರುಗಿ ಪಿ. ಸಿ.ಮೋಹನ್‌ಗೆ ಬಿಜೆಪಿ ಕಾರ್ಯಕರ್ತರೇ ಧಿಕ್ಕಾರ ಕೂಗಿದರು.
ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರನ್ನು ಎಷ್ಟೇ ಸಮಾಧಾನಿಸಲು ಯತ್ನಿಸಿದ್ರು, ಪಿ.ಸಿ.ಮೋಹನ್ ಅವರಿಗೆ ಸಾಧ್ಯವಾಗಲಿಲ್ಲ. ಇದ್ರಿಂದ ಬಂದ ದಾರಿಗೆ ಸುಂಕವಿಲ್ಲ ಅನ್ನೋ ರೀತಿ ಪಿ.ಸಿ ಮೋಹನ್ ಚುನಾವಣಾ ಪ್ರಚಾರವನ್ನು ಅರ್ಧಕ್ಕೇ ನಿಲ್ಲಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ನಿಮಗೆ ಗೊತ್ತಿರ್ಲಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ. ಇಲ್ಲಿ ಐದೂವರೆ ಲಕ್ಷ ತಮಿಳು ಭಾಷಿಕರ ವೋಟ್ಗಳಿದ್ರೆ, ನಾಲ್ಕೂವರೆ ಲಕ್ಷ ಮುಸ್ಲಿಂ ಜನಾಂಗದ ಮತಗಳಿವೆ. ಅದೇ ರೀತಿ 2 ಲಕ್ಷ ಕ್ರಿಶ್ಚಿಯನ್ ಸಮುದಾಯದ ಮತಗಳಿವೆ. ಇನ್ನ ಗಮನಾರ್ಹ ಸಂಖ್ಯೆಯಲ್ಲಿ ಮಾರ್ವಾಡಿಗಳು ಮತ್ತು ಗುಜರಾತಿಗಳೂ ಇದ್ದಾರೆ.
ಹೀಗೆ ವಿಶಿಷ್ಠ ಕ್ಷೇತ್ರವಾಗಿರೋ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪದೇ ಪದೇ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಆಯ್ಕೆಯಾಗುತ್ತಿರೋದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. ಆದ್ರೆ ಈ ಸಲವಾದ್ರೂ ಈ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಾ.? ಇಲ್ಲ, ಪಿಸಿ ಮೋಹನ್ ಮತ್ತೆ ಗೆದ್ದು ಸೋಲಿಲ್ಲದ ಸರದಾರರಾಗಿ ಹೊರಹೊಮ್ಮುತ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.