
ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಗೆಲುವು ಸಾಧಿಸಿ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶ ಮಾಡಲಿದ್ದಾರೆ. ಅವರು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್ ನ ಗೀತಾ ಶಿವರಾಜ್ ಕುಮಾರ್ ಅವರಿಗಿಂತ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರಾರಂಭಿಕ ಹಂತದಿಂದಲೂ ಕೂಡ ಬಿ.ವೈ. ರಾಘವೇಂದ್ರ ಅವರು ಮುನ್ನಡೆ ಗಳಿಸಿದ್ದರು.
ಅಂಚೆ ಮತಗಳಿಂದಲೂ ಕೂಡ ಲೀಡ್ ಪಡೆದಿದ್ದ ಅವರು ಇವಿಎಂಗಳ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೆ ಪ್ರತಿ ಸುತ್ತಿನಲ್ಲಿಯೂ ಗೆಲುವಿನ ಅಂತರವನ್ನು ಹೆಚ್ಚಿಸುತ್ತಾ ಹೋದರು. ಬೆಳಗ್ಗೆ 11 ಗಂಟೆಗೆ 11,380 ಮತಗಳಿಂದ ಮುಂದಿದ್ದರೆ 12 ಗಂಟೆಗೆ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರ ಕಾಯ್ದುಕೊಂಡರು. 12.20 ಕ್ಕೆ ರಾಘವೇಂದ್ರ ಅವರು ಸುಮಾರು 5 ಲಕ್ಷ 20 ಸಾವಿರ ಮತಗಳನ್ನು ಪಡೆದು 1.50 ಲಕ್ಷ ಮತಗಳ ಅಂತರ ಕಾಪಾಡಿಕೊಂಡರು. 1 ಗಂಟೆಗೆ 1.86 ಲಕ್ಷ ಮತಗಳ ಅಂತರ ಕಾಯ್ದುಕೊಂಡಿದ್ದರು.
ಹೀಗೆ ಪ್ರತಿ ಸುತ್ತಿನಲ್ಲಿಯೂ ಬಿ.ವೈ. ರಾಘವೇಂದ್ರ ಅವರು ತಮ್ಮ ಸಮೀಪ ಸ್ಪರ್ಧಿ ಗೀತಾ ಶಿವರಾಜ್ ಕುಮಾರ್ ಅವರಿಗಿಂತ ಹೆಚ್ಚು ಮತಗಳನ್ನು ಕಾಯ್ದುಕೊಂಡು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಗೀತಾ ಶಿವರಾಜ್ ಕುಮಾರ್ 4 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಆದರೆ, ಬಿಜೆಪಿಯಿಂದ ಬಂಡಾಯವೆದ್ದು ರಾಷ್ಟ್ರ ಭಕ್ತರ ಬಳಗದಿಂದ ಸ್ಪರ್ಧಿಸಿ ರಾಷ್ಟ್ರದ ಗಮನಸೆಳೆದಿದ್ದ ಕೆ.ಎಸ್. ಈಶ್ವರಪ್ಪನವರಿಗೆ ಈ ಚುನಾವಣೆ ಭಾರಿ ಮುಖಭಂಗ ತಂದಿದೆ. ಪ್ರತಿ ಸುತ್ತಿನಲ್ಲಿಯೂ ಅವರು ಅತ್ಯಂತ ಅಲ್ಪ ಮತಗಳನ್ನು ಪಡೆದು ಹಿನ್ನಡೆ ಸಾಧಿಸುತ್ತಲೇ ಹೋದರು. ಅವರು ಕೊನೆಗೆ ಕೇವಲ 24645 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದು ತೃಪ್ತಿ ಪಡೆಬೇಕಾಯಿತು.

ರಾಘವೇಂದ್ರ ಅವರ ಗೆಲುವಿನಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗುವುದಕ್ಕೆ ಇದು ಸಹಾಯಕವಾಗುತ್ತದೆ. ರಾಘವೇಂದ್ರ ಅವರು ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಮತ ಯಾಚಿಸಿದ್ದರು. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ. ಮತ ಎಣಿಕೆ ಪೂರ್ಣಗೊಂಡ ನಂತರ ಅಂಕಿ ಸಂಖ್ಯೆಗಳಲ್ಲಿ ಬದಲಾವಣೆ ಆಗಲಿದೆ.