ಬೀದರ್ : ಲೋಕಸಭಾ ಚುನಾವಣೆ ಹೊತ್ತಿನಲ್ಲಿಯೇ ಐಟಿ ಅಧಿಕಾರಿಗಳು ಬೀದರ್ ಡಿಸಿಸಿ ಬ್ಯಾಂಕ್ ಮೇಲೆ ದಾಳಿ ನಡೆಸಿದ್ದು, ಕಾಂಗ್ರೆಸ್ ಹಿಡಿತದಲ್ಲಿರುವ ಇತರೆ ಡಿಸಿಸಿ ಬ್ಯಾಂಕ್ ಗಳಿಗೆ ಈಗ ನಡುಕ ಶುರುವಾಗಿದೆ.
ಈ ಬ್ಯಾಂಕ್ ಗೆ ಬೀದರ್ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸಹೋದರ ಅಮರ ಖಂಡ್ರೆ ಅಧ್ಯಕ್ಷರಾಗಿದ್ದು, ಡಿಸಿಸಿ ಬ್ಯಾಂಕ್ ಹಾಗೂ ಮಹಾತ್ಮಗಾಂಧಿ ಸೌಹಾರ್ದ ಸಹಕಾರಿ ಸಂಘದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಶುಕ್ರವಾರ ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ಶುಕ್ರವಾರ ಬೆಳಗ್ಗೆ 10.30 ಕ್ಕೆ ಬೀದರ್ ಗೆ ಆಗಮಿಸಿದ ಐಟಿ ತಂಡ ಮೊದಲು ಡಿಸಿಸಿ ಬ್ಯಾಂಕ್ ಮೇಲೆ ದಾಳಿ ನಡೆಸಿದೆ. ನಂತರ ಇದೇ ಐಟಿ ತಂಡ ರಾತ್ರಿ ಎಂಟು ಗಂಟೆ ಸುಮಾರಿಗೆ ಬೀದರ್ ನಗರದಲ್ಲೇ ಇರುವ ಸೌಹಾರ್ದ ಸಹಕಾರಿ ಸಂಘದ ಕಚೇರಿ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿತು.
ವಿಜಯ ಪುರ, ಕಲಬುರಗಿ ಹಾಗೂ ರಾಯಚೂರು, ಯಾದಗಿರಿ ಹಾಗೂ ತೆಲಂಗಾಣದ ಅಧಿಕಾರಿಗಳನ್ನು ಒಳಗೊಂಡ ತಂಡದ ಸುಮಾರು 15 ಅಧಿಕಾರಿಗಳು ಬ್ಯಾಂಕ್ ಮೇಲೆ ದಾಳಿ ನಡೆಸಿದ್ದು, ಬ್ಯಾಂಕಿನ ಮುಖ್ಯ ದ್ವಾರಗಳಿಗೆ ಬೀಗ ಜಡಿದು ವ್ಯವಹಾರಗಳ ದಾಖಲೆ ಪರಿಶೀಲಿಸಿದರು. ಬ್ಯಾಂಕಿನ ಅಧಿಕಾರಿ, ಸಿಬ್ಬಂದಿಯ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿ ಜಪ್ತಿ ಮಾಡಿದ್ದರು. ಅಲ್ಲದೆ ಪ್ರವೇಶ ದ್ವಾರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ರಾಜಕೀಯ ಪ್ರೇರಿತವೇ ?
ಸಚಿವ ಈಶ್ವರ ಖಂಡ್ರೆಯವರ ಮಗ ಸಾಗರ್ ಖಂಡ್ರೆ ಬೀದರ್ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಸಚಿವರ ಸಹೋದರ ಅಮರಕುಮಾರ್ ಖಂಡ್ರೆ ಬ್ಯಾಂಕಿನ ಅಧ್ಯಕ್ಷರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬೇಕಾಬಿಟ್ಟಿ ಸಾಲ ನೀಡಲಾಗುತ್ತಿದೆ ಎಂಬ ಆರೋಪಗಳ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
2023ರ ಅಕ್ಟೋಬರ್ನಲ್ಲಿ ನಡೆದ ಚುನಾವಣೆಯಲ್ಲಿ ಅಮರಕುಮಾರ್ ಖಂಡ್ರೆ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆ ಚುನಾವಣೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಖಂಡ್ರೆ ವಿರೋಧಿ ಬಣವನ್ನು ಬೆಂಬಲಿಸಿದ್ದರು. ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡೇ ಈ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.ಬೀದರ್ ಎಸ್ಪಿ ಎಸ್.ಎಲ್. ಚನ್ನಬಸವಣ್ಣ ಪ್ರತಿಕ್ರಿಯಿಸಿ,
‘ಡಿಸಿಸಿ ಬ್ಯಾಂಕ್ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದಾರೆ. ಪೊಲೀಸ್ ಬಂದೋಬಸ್ತ್ ಕೇಳಿದ್ದರಿಂದ ಒದಗಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಕುತುಹೂಲ ಮೂಡಿಸಿದೆ ನಡೆ
ಬ್ಯಾಂಕ್ ಹಲವು ವರ್ಷಗಳ ಕಾಲ ನಾಗಮಾರಪಳ್ಳಿ ಪರಿವಾರದ ಹಿಡಿತದಲ್ಲಿತ್ತು. ಆರು ತಿಂಗಳ ಹಿಂದೆಯಷ್ಟೇ ನಡೆದಿದ್ದ ಚುನಾವಣೆಯಲ್ಲಿ ಸಚಿವ ಈಶ್ವರ ಅವರ ಸಹೋದರ ಅಮರಕುಮಾರ್ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲ ಈಗ ಸಚಿವರ ಪುತ್ರ ಸಾಗರ್ ಖಂಡ್ರೆ ಬೀದರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಲೋಕಸಭೆ ಚುನಾವಣೆಗೆ ಕೆಲವು ದಿನ ಬಾಕಿ ಇರುವಾಗ ಐಟಿ ದಾಳಿ ಆಗಿರುವುದು ಕುತೂಹಲ ಮೂಡಿಸಿದೆ.ಐಟಿ ದಾಳಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಸಿ ಬ್ಯಾಂಕ್ ಸಿಇಒ ಮಂಜುಳಾ, ಐಟಿ ಅಧಿಕಾರಿಗಳು ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸುತ್ತಿದ್ದಾರೆ. ಚುನಾವಣೆ ವೇಳೆ ಇದು ನಿರಂತರ ಪ್ರಕ್ರಿಯೆ. ನಾವು ಪಾರದರ್ಶಕವಾಗಿದ್ದು, ಅಧಿಕಾರಿಗಳು ಕೇಳುವ ಎಲ್ಲ ದಾಖಲೆಗಳನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಐಟಿ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಹೆದರಿಸುವ ಕೆಲಸವಾಗಿದೆ. ನಮಗೆ ಕಾನೂನಿನ ಮೇಲೆ ನಂಬಿಕೆ ಇದ್ದು, ಜನರೂ ಸಹ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದರು.
ಬಿಜೆಪಿ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಒಬ್ಬ ಬಿಜೆಪಿ ಸಮರ್ಥಕ, ಅವರ ಸಂಸ್ಥೆಯ ಮೇಲೆ ಎಲ್ಲಿಯಾದರೂ ದಾಳಿ ಆಗಿದೆಯಾ ? ಸ್ವಲ್ಪ ಕೊರತೆಯಿದ್ದರೆ ಬಿಜೆಪಿ ಸೇರಿದರೆ ಸಾಕು ಪ್ರಕರಣ ರದ್ದಾಗುತ್ತದೆ. ಬಿಜೆಪಿಯದ್ದು ಸರ್ವಾಧಿಕಾರಿ ಧೋರಣೆಯಾಗಿದ್ದು, ಪ್ರತಿಪಕ್ಷ ಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಸಚಿವ ಖಂಡ್ರೆ ಕಿಡಿಕಾರಿದರು. ಒಟ್ಟಾರೆ ಇತರ ಡಿಸಿಸಿ ಬ್ಯಾಂಕ್ ಗೆ ಒಂದಿಷ್ಟು ಭೀತಿಯೊಂತು ಇದ್ದೇ ಇದೆ.