ಭದ್ರಾವತಿ : ಸರ್ಕಾರಿ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಸಮುದಾಯ ಭವನ ನಿರ್ಮಾಣ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿಯ ಫಿಲ್ಟರ್‌ಶೆಡ್ ನಾಗರೀಕರ ಹಿತರಕ್ಷಣಾ ಸಮಿತಿ ಪರವಾಗಿ ಸಾಮಾಜಿಕ ಕಾರ್ಯಕರ್ತ ಶಶಿಕುಮಾರ್ ಗೌಡ ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಭದ್ರಾವತಿಯ ಜನ್ನಾಪುರ ಫಿಲ್ಟರ್‌ಶೆಡ್‌ನಲ್ಲಿರುವ ಸರ್ಕಾರಿ ಗೋಮಾಳ ಜಾಗದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು, ಯಾವ ಅನುಮತಿಯೂ ಪಡೆಯದೇ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಖಾಸಗಿ ಟ್ರಸ್ಟ್ ಮಾಡಿಕೊಂಡು ಅಕ್ರಮವಾಗಿ ಸಮುದಾಯ ಭವನ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಜನಪ್ರತಿನಿಧಿಗಳ ಅನುದಾನವನ್ನು ಕೂಡ ಪಡೆದಿದ್ದಾರೆ. ಇದರಿಂದ ಬರುವ ಬಾಡಿಗೆ ಇತ್ಯಾದಿ ಆದಾಯಗಳಿಂದ ಹಣ ಮಾಡುವ ದಂಧೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಅಕ್ರಮವಾಗಿ ಸಮುದಾಯ ನಿರ್ಮಾಣ ಮಾಡಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನಗರಸಭೆಯವರು ಅಕ್ರಮ ಖಾತೆಯನ್ನು ಮಾಡಿದ್ದು ಇದನ್ನು ವಜಾ ಮಾಡಬೇಕು. ಸಮುದಾಯ ಭವನದ ಮೇಲುಸ್ತುವಾರಿಯನ್ನು ಜಿಲ್ಲಾಡಳಿತವೇ ವಹಿಸಿಕೊಳ್ಳಬೇಕು. ಸ್ಥಳೀಯ ಬಡವರಿಗೆ ಸಮಾರಂಭಗಳನ್ನು ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.ಈ ಸಂದರ್ಭದಲ್ಲಿ ಇಂದ್ರಮ್ಮ, ಜಯಲಕ್ಷ್ಮೀ, ಸುರೇಶ, ಗಣೇಶ,ಮಹಾದೇವ ಮುಂತಾದವರು ಇದ್ದರು.