ಭದ್ರಾವತಿ: ಸ್ನೇಹಿತರೊಂದಿಗೆ ಈಜಲು ಹೋದ ಯುವಕನೋರ್ವ ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆ ಶ್ರೀ ಕ್ಷೇತ್ರ ಕೂಡಲಿ ಗ್ರಾಮದ ತುಂಗಭದ್ರಾ ಸಂಗಮದಲ್ಲಿ ನಡೆದಿದೆ.

ಶಿವಮೊಗ್ಗ ಅಣ್ಣಾನಗರದ ಸಮಿವುಲ್ಲಾ ಹಾಗೂ ತಸ್ಮಿಯಾ ಬಾನು ಇವರ ಪುತ್ರ ಮುಬಾರಕ್ (18) ಮೃತ ಯುವಕ. 

ಈತ ಹೊಳೆಹೊನ್ನೂರು ಪಟ್ಟಣದ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಪ್ರತಿನಿತ್ಯ ಶಿವಮೊಗ್ಗದಿಂದ ಪಟ್ಟಣದ ಕಾಲೇಜು ವ್ಯಾಸಂಗಕ್ಕೆ ಬರುತ್ತಿದ್ದ ಈತ ಎಂದಿನಂತೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಕೂಡಲಿ ಸಂಗಮದಲ್ಲಿ ಸ್ನಾನ ಮಾಡಲು ಸ್ನೇಹಿತರೊಂದಿಗೆ ತೆರಳಿದಾಗ ಈ ಘಟನೆ ನಡೆದಿದೆ.ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರ್ಲಕ್ಷ್ಯ: ಮಾ.29ರಿಂದ ಭದ್ರಾನದಿಗೆ ಹೆಚ್ಚಿನ ನೀರು ಹರಿಸಲಾಗುತ್ತಿದೆ. ಇದರಿಂದ ನೀರಿನ ಪ್ರಮಾಣ ಏರಿಕೆಯಾಗಿದೆ. ಯುಗಾದಿ ಅಮಾವಾಸ್ಯೆಯ ಪುಣ್ಯಸ್ನಾನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಲಿದ್ದಾರೆ. ಆದರೂ ಅಹಿತಕರ ಘಟನೆ ನಡೆಯದಂತೆ ಗ್ರಾಮಾಡಳಿತ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.ಪೊಲೀಸರನ್ನೂ ನಿಯೋಜಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

ಮಕ್ಕಳೊಂದಿಗೆ ಸ್ನಾನಕ್ಕೆ ಆಗಮಿಸುವ ಭಕ್ತರಿಗೆ ನದಿ ತಟದಲ್ಲಿ ಸುರಕ್ಷತೆ ಇಲ್ಲ. ಮತ್ತೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Share.
Leave A Reply

Exit mobile version