ಶಿವಮೊಗ್ಗ : ರೈತರ ಜೀವನಾಡಿ ಎಂದೇ ಕರೆಯಲ್ಪಡುವ ಬಿಆರ್ ಪಿ ಯಲ್ಲಿನ ಭದ್ರಾಜಲಾಶಯ ಭರ್ತಿಯಾಗುವ ಹಂತ ತಲುಪಿದ್ದು, ಇಂದು ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ಗಳನ್ನು ತೆರೆಯುವ ಮೂಲಕ ನೀರನ್ನು ಹೊರ ಬಿಡಲಾಯಿತು.

ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅಧ್ಯಕ್ಷತೆ ಹಾಗು ಭದ್ರಾ ಜಲಾಶಯ ನೀರಾವರಿ ಸಲಹಾ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭದ್ರಾ ನಾಲೆಗಳಿಗೆ ನೀರು ಹರಿಸುವಂತೆ ಸೂಚಿಸಿ ನಿರ್ಣಯ ಕೈಗೊಳ್ಳಲಾಗಿತ್ತು.

ಸಭೆಯಲ್ಲಿ ಕೈಕೊಂಡ ನಿರ್ಣಯದಂತೆ ಇಂದು ಬೆಳಗ್ಗೆ 9.30ರ ಸಮಯದಲ್ಲಿ ನಾಲ್ಕು ಕ್ರಸ್ಟ್ ಗೇಟ್ ಗಳನ್ನು ಮೇಲೆತ್ತಿ ನೀರನ್ನು ಹೊರ ಬಿಡಲಾಯಿತು.

ಜಲಾಶಯದ ನಾಲ್ಕು ಗೇಟ್ ಗಳನ್ನು ತೆರೆಯುತ್ತಿದ್ದಂತೆ ಹಾಲಿನ ನೊರೆಯಂತೆ ಭದ್ರಯು ಬೋರ್ಗರೆಯುತ್ತಾ ಧುಮುಕ್ಕಿದ ರೀತಿ ಕಂಡು ಜನರು ಸಂಭ್ರಮಿಸಿದರು.

ಕಳೆದ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಭದ್ರ ಜಲಾಶಯ ಸಂಪೂರ್ಣ ಬರಿದಾಗಿತ್ತು. ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈ ಬಾರಿ ಜನನದ ಪ್ರದೇಶದಲ್ಲಿ ವ್ಯಾಪಕ ಮಳೆ ಯಾಗುತ್ತಿದ್ದು ಭದ್ರಾ ಜಲಾಶಯ ಸಂಪೂರ್ಣ ತುಂಬುವ ಹಂತಕ್ಕೆ ಬಂದು ತಲುಪಿದೆ. ಇದೀಗ ರೈತರ ಮುಖದಲ್ಲೂ ಮಂದಹಾಸ ಮೂಡಿದೆ.

ಇದೀಗ ಭದ್ರಾ ಜಲಾಶಯಕ್ಕೆ 20.774 ಕ್ಯೂಸೆಕ್ ಒಳ ಹರಿವು ಇದ್ದರೆ, ಆರು ಸಾವಿರ ಕ್ಯೂಸೆಕ್ ನಷ್ಟು ಜಲಾಶಯದಿಂದ ಹೊರಗೆ ಬಿಡಲಾಗಿದೆ. ಗರಿಷ್ಠ 186 ಅಡಿ ಎತ್ತರದ ಜಲಾಶಯದ ನೀರಿನ ಮಟ್ಟ ಇದೀಗ 183.2 ಅಡಿಗೆ ತಲುಪಿದೆ.

Share.
Leave A Reply

Exit mobile version