ದಾವಣಗೆರೆ :  ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಸಂಬಂಧಿಸಿದ ಒಂದೇ ಒಂದು ಪೋಸ್ಟರ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾಯಿದೆ.

ಶೆಟ್ರು ಈ ಸಲ ಬೆಳಗಾವಿಯಲ್ಲಿ ನಿಲ್ಲಲೇಬಾರ್ದು ಅಂತೇಳಿ ಅತಿದೊಡ್ಡ ಗೋಬ್ಯಾಕ್ ಅನ್ನೋ ಪ್ರತಿಭಟನೆಗಳು ನಡೀತಾಯಿವೆ. ಹೀಗಿದ್ರೂ ಶೆಟ್ರು ಮಾತ್ರ ನಾನು ಬೆಳಗಾವಿಯಲ್ಲೇ ನಿಲ್ತೀನಿ. ಸೋತ್ರೂ ಪರ್ವಾಗಿಲ್ಲ. ನಾನು ಸ್ಪರ್ಧಿಸೋದು ಶತ ಸಿದ್ಧ ಅಂತಿದ್ದಾರೆ. ಹಾಗಾದ್ರೆ ಶೆಟ್ರಿಗೆ ಬೆಳಗಾವಿಯಲ್ಲಿ ಎಂಥಾ ವಿರೋಧ ವ್ಯಕ್ತವಾಗ್ತಾಯಿದೆ? ಶೆಟ್ರಗೆ ಲಕ್ಷ್ಮಣ್ ಸವದಿ ಕೊಟ್ಟ ತಿರುಗೇಟು ಹೇಗಿದೆ ಗೊತ್ತಾ?

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬಹುತೇಕ ಖಚಿತವಾಗುತ್ತಿದ್ದಂತೆ ಅವರ ವಿರುದ್ಧ ಬಿಜೆಪಿ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ ಜೋರಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಚರ್ಚೆ ನಡೆಯುತ್ತಿದ್ದು, ಬಿಜೆಪಿ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. 

ಬಿಜೆಪಿ ಮುಖಂಡರು ಹೊರಗಿನವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಸಭೆಯನ್ನೂ ನಡೆಸಿದ್ದಾರೆ. ಆದರೆ ಈ ಸಭೆ ಕುರಿತಂತೆ ಗೇಲಿ ಮಾಡಿದ್ದ ಶೆಟ್ಟರ್, 17 ಲಕ್ಷ ಮತದಾರರಿರುವಾಗ 7-8 ಮುಖಂಡರು ಯಾವಲೆಕ್ಕ ಎನ್ನುವ ರೀತಿಯಲ್ಲಿ ಪ್ರಶ್ನಿಸಿದ್ದರು. 

ಇದೀಗ ಶೆಟ್ಟರ್ ವಿರುದ್ಧ ಎಲ್ಲೆಡೆ ಪ್ರತಿಭಟನೆ, ಪೋಸ್ಟರ್ ಅಭಿಯಾನ ಶುರುವಾಗಿದೆ. ಗೋ ಬ್ಯಾಕ್‌  ಎನ್ನುವ ಅಭಿಯಾನ ಜೋರಾಗಿದೆ.

ಬೆಳಗಾವಿ ನಗರದ ವಿವಿಧೆಡೆ ಬುಧವಾರದಿಂದ ಮತ್ತಷ್ಟು ಬ್ಯಾನರ್​​ಗಳು ಕಾಣಿಸಿಕೊಂಡಿವೆ. `ಬರ್ರಿ ಶೆಟ್ಟರ್… ಉಂಡು ಹೋಗರಿ, ಬೆಳಗಾವಿ ನಿಮ್ಮಂತವರಿಗೆ ಬಿಟ್ಟಿ ಬಿದ್ದೈತಿ’ ಎಂದು ಬರೆಯಲಾಗಿರುವ ಬ್ಯಾನರ್​​ಗಳು ಎಲ್ಲೆಡೆ ರಾರಾಜಿಸುತ್ತಿವೆ. ಕೆಳಗಡೆ  ಗೋ ಬ್ಯಾಕ್‌ ಎಂದೂ ಬರೆಯಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿ ಬಿಜೆಪಿಗೆ ತಿರುಗೇಟು ಕೊಟ್ಟಿರೋ ರಾಜ್ಯ ಕಾಂಗ್ರೆಸ್ ಗೋಬ್ಯಾಕ್ ಅನ್ನೋದೇ ಮೋದಿ ಹೇಳಿದ ಅಚ್ಛೇದಿನವಾ ಅಂತ ಪ್ರಶ್ನಿಸಿದೆ.  ಹೌದು ಓದುಗರೇ ಕೆಲದಿನಗಳ ಹಿಂದೆ ಶೆಟ್ಟರ್ “ಗೋ ಬ್ಯಾಕ್ ಟು  ಬಿಜೆಪಿ“ ಎಂದು ಬಿಜೆಪಿಗೆ ಮರಳಿದ್ದರು! ಈಗ ಬಿಜೆಪಿಯಿಂದಲೇ ”ಗೋ ಬ್ಯಾಕ್ ಶೆಟ್ಟರ್” ಎನಿಸಿಕೊಳ್ಳುತ್ತಿದ್ದಾರೆ.! ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಗೋ ಬ್ಯಾಕ್ ಅಭಿಯಾನ ಎದುರಿಸುತ್ತಿದೆ. ಕನ್ನಡಿಗರು ಬಿಜೆಪಿಗೆ, ಮೋದಿ ಆಡಳಿತಕ್ಕೆ ಗೋ ಬ್ಯಾಕ್ ಎನ್ನುತ್ತಿರುವುದು ಅಚ್ಚೇ ದಿನಗಳ ಲಕ್ಷಣ, ಅಲ್ಲವೇ ಬಿಜೆಪಿಗರೇ ಅಂತೇಳಿ ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ಇನ್ನ ಬಿಜೆಪಿಗೆ ಯೂಟರ್ನ್ ತಗೊಂಡಿರೋ ಶೆಟ್ರ ಬಗ್ಗೆ ಕಾಂಗ್ರೆಸ್ ಶಾಸಕ ಮತ್ತು ಬೆಳಗಾವಿ ಮೂಲದ ನಾಯಕ ಲಕ್ಷ್ಮಣ್ ಸವದಿ ಕೂಡ ವ್ಯಂಗ್ಯವಾಡಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್​​ಗೆ ಬಂದು ಪುನಃ ಬಿಜೆಪಿಗೆ ವಾಪಸ್ಸು ಹೋದ ಜಗದೀಶ್ ಶೆಟ್ಟರ್ ಅವರಿಗೆ ತಾನು ಮಾಡಿದ ಪ್ರಮಾದಕ್ಕೆ ಪಾಠ ಕಲಿಸುವ ಯೋಜನೆ ಬಿಜೆಪಿ ನಾಯಕರಿಗಿದೆಯೇ.? 

ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳುವ ಪ್ರಕಾರ ಶೆಟ್ಟರ್ ಅವರನ್ನು ಹರಕೆಯ ಕುರಿ ಮಾಡಲು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಹುನ್ನಾರ ನಡೆದಿದೆಯಂತೆ. 

ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸವದಿ, ಶೆಟ್ಟರ್ ಅವರಿಗೆ ಉದ್ದೇಶಪೂರ್ವಕವಾಗಿ ಬೆಳಗಾವಿ ಕರೆತಂದು ಸೋಲಿಸುವ ಪ್ರಯತ್ನ ಬಿಜೆಪಿ ನಾಯಕರಿಂದ ನಡೆಯುತ್ತಿದೆ. ಶೆಟ್ಟರ್ ಅವರಿಗೆ ಟಿಕೆಟ್ ಸಿಗಲಿಲ್ಲವೆಂಬ ಹಪಾಹಪಿ ಇರಬಾರದು. ಮತ್ತು ಅವರು ಗೆದ್ದು ಸಂಸತ್ ಪ್ರವೇಶಿಸಬಾರದು. ಸೋತು ಸುಣ್ಣವಾಗಿ ಮನೆಯಲ್ಲಿ ಕೂರುವಂತಾಗಬೇಕು. ಇದು ಬಿಜೆಪಿ ನಾಯಕರು ಶೆಟ್ಟರ್ ಅವರಿಗಾಗಿ ತೋಡಿರುವ ಖೆಡ್ಡಾ ಅಂತೇಳಿ ಸವದಿ ವ್ಯಂಗ್ಯವಾಡಿದ್ದಾರೆ. 

ಯಾವ ಕುರಿಯನ್ನು ಎಲ್ಲಿ ನಿಲ್ಲಿಸಬೇಕು. ಹೇಗೆ ಅದನ್ನು ಬಲಿ ಕೊಡಬೇಕು ಅಂತ ಬಿಜೆಪಿ ನಾಯಕರು ಶಿಸ್ತುಬದ್ಧವಾಗಿ ಪ್ಲ್ಯಾನ್ ಮಾಡಿದ್ದಾರೆ ಅಂತೇಳಿರೋ ಲಕ್ಷ್ಮಣ್ ಸವದಿ, ಶೆಟ್ಟರ್ ಏಕಾಏಕಿ ಪಕ್ಷ ಬಿಟ್ಟರು. ಏಕಾಏಕಿಯಾಗಿ ವಾಪಸ್ಸು ಹೋದರು ಮತ್ತು ಏಕಾಏಕಿಯಾಗಿ ಸೋಲುವುದು ಕೂಡ ನಿಶ್ಚಿತ ಅಂತಾನೂ ಕುಟುಕಿದ್ದಾರೆ.ಹಾಗಾದ್ರೆ ತೀವ್ರ ವಿರೋಧದ ನಡುವೆಯೂ ಶೆಟ್ರು ಬೆಳಗಾವಿಯಲ್ಲಿ ಅಖಾಡಕ್ಕಿಳಿದು ಹರಕೆಯ ಕುರಿಯಾಗ್ತಾರಾ..? ಶೆಟ್ರು ಈ ಸಲ ಸ್ಪರ್ಧಿಸಿಲ್ಲ ಅಂದ್ರೆ ಬಿಜೆಪಿಯಲ್ಲಿ ಇವರಿಗೆ ಕವಡೆ ಕಾಸಿನ ಕಿಮ್ಮತ್ತಿರಲ್ವಾ? ಕಾದು ನೋಡಬೇಕು.

 

Share.
Leave A Reply

Exit mobile version