ದಾವಣಗೆರೆ: ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯು ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಸಹಯೋಗದೊಂದಿಗೆ ನಗರದ ನೇತಾಜಿ ಸುಭಾಷ್ಶ್ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಮೇ19 ರಿಂದ 25 ರವರೆಗೆ ಯೂನೆಕ್ಸ್-ಸನ್ ರೈಸ್ ‘ಕರ್ನಾಟಕ ಸ್ಟೇಟ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್’-2024 (15 ರಿಂದ 17 ರವರ ವಿಭಾಗದಲ್ಲಿ) ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಅಸೋಸಿಯೇಷನ್ ನ ಅಧ್ಯಕ್ಷ ಎಸ್.ಎನ್. ಬಸವರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 19 ರಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಉದ್ಘಾಟಿಸಲಿದ್ದು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಕ್ರೀಡಾ ಧ್ವಜಾರೋಹಣ ನೆರವೇರಿಸುವರು. ಉಪ- ಪೋಲೀಸ್ ವರಿಷ್ಠಾಧಿಕಾರಿ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರು ಪಂದ್ಯಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಪಂದ್ಯಾವಳಿಯಲ್ಲಿ 1050 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಕೆಲ ಪಂದ್ಯಾವಳಿಗೆ ಆಫೀಸರ್ಸ್ ಕ್ಲಬ್ ಅನ್ನು ನೀಡುವಂತೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಲಾಗುವುದು. ಪಂದ್ಯಾವಳಿಗೆ ಆಗಮಿಸುವ ಎಲ್ಲ ಸ್ಪರ್ಧಿಗಳಿಗೂ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪಂದ್ಯಗಳು ಬೆಳಿಗ್ಗೆ 7 ರಿಂದ ಪ್ರಾರಂಭವಾಗಿ ದಿನದ ಅಂತ್ಯದವರೆಗೆ ನಡೆಯಲಿದೆ. ಮೇ 24 ರಂದು ನಿರ್ಣಾಯಕ ಪಂದ್ಯಗಳು ಇರುತ್ತವೆ. ಎರಡು ಗ್ರೂಫ್ಗಳಿಂದ ಪ್ರಥಮ ಮತ್ತು ದ್ವಿತೀಯ ಸೆಮಿಫೈನಲ್ಸ್ ಸೇರಿ ಒಟ್ಟು 64 ಜನ ವಿಜೇತರಿಗೆ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ವಿಜೇತರು ರಾಷ್ಟ್ರಮಟ್ಟದ ಟೂರ್ನಿಮೆಂಟ್ ನಲ್ಲಿ ಭಾಗವಹಿಸಲಿದ್ದಾರೆ.
ಮುಕ್ತಾಯ ಸಮಾರಂಭಕ್ಕೆ “ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ” ಪದಾಧಿಕಾರಿಗಳು ಹಾಗೂ ನಗರದ ಗಣ್ಯರುಗಳು ಆಗಮಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ, ಅಸೋಸಿಯೇಷನ್ ನ ಡಿ.ಆರ್. ಗಿರಿರಾಜ್, ಕೆ.ಹೆಚ್. ಸಿದ್ದೇಶ್ವರ್, ಆರ್. ಶಶಿಧರ್ ಆಚಾರ್ಯ ಹಾಗೂ ಸುರೇಶ್ ಆರ್. ಗಂಡಗಾಳೆ ಉಪಸ್ಥಿತರಿದ್ದರು