ದಾವಣಗೆರೆ: ದಾವಣಗೆರೆ ಬಿಜೆಪಿಯ ಭಿನ್ನ‌ಮತ ಶಮನಕ್ಕೆ‌ ಇನ್ನೊಂದು‌‌ ಪ್ರಯತ್ನಕ್ಕೆ ಕೇಸರಿ‌ನಾಯಕರು ಮುಂದಾಗಿದ್ದರು. ಈ ಸಂಬಂಧ ದಾವಣಗೆರೆಗೆ ಶನಿವಾರ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರವಾಲ್ ಆಗಮಿಸಿದ್ದು, ಪಿಬಿ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದರು.

ಮಾಜಿ ಸಚಿವ ಎಂಪಿ‌.ರೇಣುಕಾಚಾರ್ಯ, ಎಸ್ ಎ ರವೀಂದ್ರನಾಥ್ ಹಾಗೂ ಕರುಣಾಕರ ರೆಡ್ಡಿ ಮಾಡಾಳ್ ಮಲ್ಲಿಕಾರ್ಜುನ್ ಸೇರಿದಂತೆ ಬಿಜೆಪಿ ರೆಬಲ್ ಟೀಮ್ ಜೊತೆ ಅಗರವಾಲ್ ಕೆಲ ಕಾಲ ಮಾತುಕತೆ ನಡೆಸಿದರು.

ದಾವಣಗೆರೆ ಲೋಕ‌ಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರದಲ್ಲಿ ಭಿನ್ನಮತ ಬುಗಿಲೆದ್ದಿತ್ತು.
ಹಾಲಿ ಸಂಸದ ಜಿಎಂ ಸಿದ್ದೇಶ್ವರ ವಿರುದ್ಧ ರೆಬಲ್ ತಂಡ
ಆಕ್ರೋಶಗೊಂಡಿತ್ತು. ಅಲ್ಲದೇ ಗಾಯತ್ರಿ ಸಿದ್ದೇಶ್ವರಗೆ ನೀಡಿದ ಟಿಕೆಟ್ ವಾಪಸ್ಸು ಪಡೆಯುವಂತೆ ಆಗ್ರಹಿಸಿ ರೆಬಲ್ಸ್ ಟೀಮ್ ಹೋರಾಟ ಮಾಡಿತ್ತು. ನಂತರ ಮಾಜಿ ಸಿಎಂ‌ ಬಿಎಸ್ ವೈ ಮಾತುಕತೆ ಬಳಿಕ ಭಿನ್ನಮತ ಶಮನವಾಗಿದ್ದರೂ, ಕೂಡ ಮೇಲ್ನೋಟಕ್ಕೆ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಈ ಹಿನ್ನೆಲೆಯಲ್ಲಿ ಸಭೆ ನಡೆಸಿ ಅಭ್ಯರ್ಥಿ ಪರವಾಗಿ ಓಡಾಡಿ ಬಿಜೆಪಿ ಗೆಲ್ಲಿಸಲು ನಾಯಕರು ಸೂಚನೆ‌ ನೀಡಿದರು.

ಯಾಕಾಗಿ ಸಭೆ

ಎಸ್‌.ಎ. ರವೀಂದ್ರನಾಥ್‌ ಅವರನ್ನೇ ವರಿಷ್ಠರು ಚುನಾವಣೆಯ ಸಾರಥಿಯನ್ನಾಗಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಪರ ರವೀಂದ್ರನಾಥ್‌ ಅಲ್ಲಲ್ಲಿ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಆದರೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರನ್ನು ಜಿಲ್ಲಾ ಚುನಾವಣಾ ಸಂಚಾಲಕರನ್ನಾಗಿ ನೇಮಿಸಲಾಗಿದ್ದರೂ ಅವರು ಇದುವರೆಗೂ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಬಂದಿಲ್ಲ. ಅವರ ಬಂಡಾಯ ಶಮನವಾದಂತೆ ಕಾಣುತ್ತಿಲ್ಲ.

ಮಾಡಾಳ್‌ ಮಲ್ಲಿಕಾರ್ಜುನ್‌, ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯ್ ಕುಮಾರ್ ಅವರು ಆಗಾಗ ಬಿಜೆಪಿ ಪರ ಪ್ರಚಾರದಲ್ಲಿ ಕಾಣುತ್ತಿದ್ದಾರೆ. ಕೆಲವರು ಮಾತ್ರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತಿದ್ದು, ಕೆಲವರು ಬಾರದಿರುವುದು ಒಳಬೇಗುದಿಯ ಹೊಡೆತ ತಟ್ಟಲಿದೆ ಎಂದೇ ವಿಶ್ಲೇಷಿಸಲಾಗುತ್ತಿತ್ತು.‌

ಈ ನಡುವೆ ಸಂಸದ ಜಿ.ಎಂ.ಸಿದ್ದೇಶ್ವರ ‘ಇದು ಅಣ್ಣತಮ್ಮಂದಿರ ಜಗಳವಷ್ಟೇ, ಸರಿ ಹೋಗಿದೆ. ಎಲ್ಲೆಡೆ ಪಕ್ಷದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರಕ್ಕೆ ಎಲ್ಲಾ ಮುಖಂಡರು ಬರುತ್ತಿದ್ದಾರೆ. ಸ್ಟಾರ್ ಪ್ರಚಾರಕರೂ ಬರಲಿದ್ದಾರೆ. ಬಂಡಾಯದ ಮಾತೇ ಇಲ್ಲ. ನಾವೆಲ್ಲ ಒಂದೇ ಮನೆಯ ಸದಸ್ಯರು. ಅಣ್ಣ–ತಮ್ಮಂದಿರಲ್ಲಿ ಮುನಿಸು ಸಹಜ. ಅದನ್ನು ಬಗೆಹರಿಸಿಕೊಂಡಿದ್ದೇವೆ. ಇದು ಒಂಥರಾ ಗಂಡ–ಹೆಂಡತಿ ಜಗಳದಂತೆ.

ಸಣ್ಣ ಜಗಳಕ್ಕೆ ವಿವಾಹ ವಿಚ್ಛೇದನಕ್ಕೆ ಹೋಗುವುದಿಲ್ಲ. ಹಾಗೆಯೇ ಪಕ್ಷದಲ್ಲಿ ಅಸಮಾಧಾನ ಇದ್ದದ್ದು ಸಹಜ. ಅದು ಬಗೆಹರಿದಿದೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಗೆಲುವು ಸಾಧಿಸುತ್ತೇವೆ’ ಎಂದು ಹೇಳಿದ್ದರು. ಆದರೆ ಮೇಲ್ನೋಟಕ್ಕೆ ಮಾತ್ರ ಬಂಡಾಯ ಶಮನವಾಗಿದ್ದು, ಎರಡನೇ ಸುತ್ತಿನ ಮಾತುಕತೆ ರೆಬೆಲ್ ಟೀಂ ಜತೆ ನಡೆಯಿತು. ಒಟ್ಟಾರೆ ಸಭೆಯಿಂದ ಬಿಜೆಪಿ ಅಭ್ಯರ್ಥಿಗೆ ಒಂದಿಷ್ಟು ಉಪಯೋಗವಾಯಿತು.

Share.
Leave A Reply

Exit mobile version