ದಾವಣಗೆರೆ : ದಾವಣಗೆರೆ ಉತ್ತರ ಈ ಕ್ಷೇತ್ರದಲ್ಲಿ ಸಾಧುಲಿಂಗಾಯಿತರ ಪ್ರಾಬಲ್ಯ ಹೆಚ್ಚಿದ್ದು, ಅಹಿಂದ ಮತಗಳು ನಿರ್ಣಾಯಕವಾಗಿದೆ.
ಪ್ರತಿ ಬಾರಿಯೂ ಇಲ್ಲಿ ಅಚ್ಚರಿಯ ಫಲಿತಾಂಶ ಬರುತ್ತದೆ. ಸಾಕಷ್ಟು ಶ್ರೀಮಂತ ಕ್ಷೇತ್ರ ಇದಾಗಿದ್ದು, ಕಮಲ ಹಾಗೂ ಕೈ ಸಮ ಬಲದ ಪೈಪೋಟಿ ನೀಡಿದೆ. ಈ ಹಿಂದೆ ನಡೆದ ಮೂರು ವಿಧಾನಸಭೆ ಚುನಾವಣೆಗಳಲ್ಲೂ ವಿಭಿನ್ನ ಫಲಿತಾಂಶ ನೀಡಿರುವುದು ಈ ಕ್ಷೇತ್ರದ ಅನಿರೀಕ್ಷಿತ ಫಲಿತಾಂಶಕ್ಕೆ ಸಾಕ್ಷಿ, 80ರ ದಶಕದಲ್ಲಿ ಕೈಗಾರಿಕಾ ನಗರವಾಗಿದ್ದ ದಾವಣಗೆರೆಯಲ್ಲಿ ಮೇಲೆ ಕಾಂಗ್ರೆಸ್ ಹಿಡಿತ ಸಾಧಿ ಸಿತ್ತು. 2008ಕ್ಕೂ ಮೊದಲು ಕಾಂಗ್ರೆಸ್ ಕೋಟೆಯಾಗಿದ್ದ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಮೊದಲು ಹಿಡಿತ ಸಾಧಿಸಿದ ಪಕ್ಷ ಬಿಜೆಪಿ. 2008ರ ವಿಧಾನಸಭೆ ಚುನಾ ವಣೆಯಲ್ಲಿ ಬಿಜೆಪಿಯ ಎಸ್.ಎ.ರವೀಂದ್ರನಾಥ್, 53,910 ಮತಗಳ ಅಂತರದಿಂದ ಸಾಧಿಸಿ ಗಮನಸೆಳೆದಿದ್ದರು.
2008, 2013ರಲ್ಲೂ ಜಯ ಸಾಧಿಸುವ ಉಮೇದಿನಲ್ಲಿ ಬಿಜೆಪಿ ಇತ್ತು. ಆದರೆ ಬಿಜೆಪಿ ಆಸೆ ನುಚ್ಚು ನೂರು ಮಾಡಿದ ಎಸ್.ಎಸ್.ಮಲ್ಲಿಕಾರ್ಜುನ್, 57 ಸಾವಿರ ಮತಗಳ ಅಂತರದಿಂದ ರವೀಂದ್ರನಾಥ್ ರನ್ನು ಸೋಲಿಸಿದ್ದರು. ನಂತರ 2018ರಲ್ಲಿ ಮತ್ತೆ ಎಸ್ಎಆರ್ ಶಾಸಕರಾದರೂ ಈ ಬಾರಿ ಎಎಎಂ ಕೇವಲ 4071 ಮತಗಳ ಅಂತರದಿಂದ ಸೋತರು. ಇತ್ತೀಚೆಗೆ ನಡೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಲೋಕಿಕೆರೆ ನಾಗರಾಜ್ ರನ್ನು 24,472 ಅಂತರದಿಂದ ಸೋಲಿಸಿ ಮತ್ತೊಮ್ಮೆ ಶಾಸಕರಾದರು.
ಅಹಿಂದ ಮತಗಳು ನಿರ್ಣಾಯಕ ಪಾತ್ರ
ಉತ್ತರ ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಸಂಖ್ಯೆ ಹೆಚ್ಚಾಗಿದ್ದರೂ ಅಹಿಂದ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಹೀಗಾಗಿ ಪ್ರಬಲ ಸಮುದಾಯಗಳ ಮತ ಸೆಳೆಯಲು ಎರಡೂ ಪಕ್ಷಗಳು ಕಸರತ್ತು ನಡೆಸಿವೆ. ಇತ್ತ ಲೋಕ ಸಭೆಯಲ್ಲಿನ ತನ್ನ ಹಿಡಿತ ಮತ್ತಷ್ಟು ಬಿಗಿಗೊಳಿಸಲು ಬಿಜೆಪಿ ತಂತ್ರಗಳನ್ನು ರೂಪಿಸುತ್ತಿದ್ದರೆ, ಪ್ರತಿ ಬಾರಿ ನಗರ ಕೇಂದ್ರದಲ್ಲಿ ತನಗಾಗುವ ಹಿನ್ನಡೆಗೆ ತಡೆಗೋಡೆ ಕಟ್ಟಿ, ಮುನ್ನಡೆ ಸಾಧಿಸುವ ಛಲದಲ್ಲಿಕೈ ಪಾಳೆಯ ಕೆಲಸ ಮಾಡುತ್ತಿದೆ.
ಇನ್ನು ಪ್ರಸಕ್ತ ಲೋಕಸಭೆ ಚುನಾವಣೆ ವಿಚಾರಕ್ಕೆ ಬಂದರೆ, ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಗೆ ನಗರ ಕೇಂದ್ರಿತ ಬಂಡಾಯದ ಬಿಸಿ ತಟ್ಟಿತು. ಉತ್ತರ ಕ್ಷೇತ್ರದ ಮಾಜಿ ಶಾಸಕ ಎಸ್ಎಆರ್ ನೇತೃತ್ವದ ಒಂದು ಬಣ, ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನಗೊಂಡಿತ್ತು. ನಿರಂತರ ಸಭೆ ನಡೆಸಿದ ಬಂಡಾಯ ಬಣ, ಅಭ್ಯರ್ಥಿ ಬದಲಿಸುವಂತೆ ಪಟ್ಟು ಹಿಡಿದಿತ್ತು. ಬಳಿಕ ನಡೆದ ಬೆಳವಣಿಗೆಗಳಲ್ಲಿ ರಾಜ್ಯ ಮುಖಂಡರಾದ ಬಿಎಸ್ವೈ ಹಾಗೂ ಇತರರ ಬಂಡಾಯ ಶಮನಗೊಳಿಸಲಾಯಿತು. ಆದರೆ, ಕಳೆದ ಅವಧಿಯಲ್ಲಿ ವಿಮಾನ ನಿಲ್ದಾಣ ಮತ್ತಿತರ ಅಭಿವೃದ್ಧಿ ಯೋಜನೆ ತರುವುದಾಗಿ ಹೇಳಿದ್ದ ಸಂಸದರ ಬಗ್ಗೆ ಒಂದಿಷ್ಟು ಆಡಳಿತ ವಿರೋಧಿ ಅಲೆಯ ಚರ್ಚೆ ಇದೆ.
ಕಾಂಗ್ರೆಸ್ಗೆ ಪಕ್ಷೇತರ ಅಭ್ಯರ್ಥಿಗಳ ತಲೆಬಿಸಿಯಾಗಿದೆ. ಅದರಲ್ಲೂ ಹಲವು ತಿಂಗಳುಗಳಿಂದ ಕಾಂಗ್ರೆಸ್ಟಿಕೆಟ್ ಆಕಾಂಕ್ಷಿ ಎಂದು ಓಡಾಡಿಕೊಂಡಿದ್ದ ಪ್ರಬಲ ಕುರುಬ ಸಮುದಾಯದ ಜಿ.ಬಿ. ವಿನಯಕುಮಾರ್ ಕಣದಲ್ಲಿರುವುದು ಕಾಂಗ್ರೆಸ್ ಮತ ಗಳಿಕೆಗೆ ಒಳಪೆಟ್ಟು ಕೊಡಲಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ 12 ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿರುವ ಕಾರಣ ಕಾಂಗ್ರೆಸ್ನ ಮೂಲ ಮತ ಬ್ಯಾಂಕ್ ಹರಿದು ಹೋಗುವ ಅಪಾಯವನ್ನೂ ತಳ್ಳಿ ಹಾಕುವಂತಿಲ್ಲ.
ಪಾಲಿಕೆ ಸದಸ್ಯರ ಬಲ
ದಾವಣಗೆರೆ ಉತ್ತರ ವಿಧಾನಸಭೆ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಯ ಒಟ್ಟು 25 ವಾಡ್ ೯ಗಳಿದ್ದು, ಈ ಪೈಕಿ 15 ವಾರ್ಡ್ಗಳಲ್ಲಿ ಬಿಜೆಪಿ ಕಾರ್ಪೊರೇಟರ್ಗಳಿದ್ದಾರೆ. ಕ್ಷೇತ್ರ ವ್ಯಾಪ್ತಿಯಲ್ಲಿ 10 ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ.
ಅವರ ಶಿಕ್ಷಣ, ಸ್ನೇಹ ಬಳಗದ ಪ್ರಭಾವವು ದಾವಣಗೆರೆ ಉತ್ತರದಲ್ಲಿ ಅವರಿಗೆ ಒಂದಿಷ್ಟು ಹೆಚ್ಚು ಮತಗಳು ಬರುವುದೆಂದು ಕಾಂಗ್ರೆಸ್ ಲೆಕ್ಕ ಹಾಕುತ್ತಿದೆ. ಆದರೆ ಅಂತಿಮ ಕ್ಷಣದಲ್ಲಿ ಏನಾಗುತ್ತದೆ ಕಾದು ನೋಡಬೇಕು.
2023ರ ದಾ.ಉತ್ತರ ವಿಧಾನಸಭೆ ಫಲಿತಾಂಶ
ಎಸ್.ಎಸ್.ಮಲ್ಲಿಕಾರ್ಜುನ್ -ಕಾಂಗ್ರೆಸ್ 94,019
• ಲೋಕಿಕೆರೆ ನಾಗರಾಜ್ (ಬಿಜೆಪಿ) 69,547
• ಗೆಲುವಿನ ಅಂತರ 24,472
ಮತದಾನ: ಶೇ.68.61
2019ರ ದಾ.ಉತ್ತರ ಲೋಕಸಭೆ ಮತ ಕ್ಷೇತ್ರ
ಎಚ್. ಬಿ. ಮಂಜಪ್ಪ 50374
ಜಿಎಂ ಸಿದ್ದೇಶ್ವರ 104480
ಮತದಾರರ ವಿವರ
ಪುರುಷ ಮತದಾರರು-1,21,136
ಮಹಿಳಾ ಮತದಾರರು -1,24,651
36 ಲಿಂಗತ್ವ ಅಲ್ಪಸಂಖ್ಯಾತರು
45 ಸೇವಾ ಮತದಾರರು