ಚನ್ನಗಿರಿ: ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಆದಿಲ್ ಖಲೀಂ ಉಲ್ಲಾ ಅವರ ಅಂತ್ಯಕ್ರಿಯೆ ಶನಿವಾರ ಬಿಗಿ ಪೊಲೀಸ್ ಬಂದೋ ಬಸ್ತ್ ನಲ್ಲಿ ನಡೆಯಿತು.
ಪಟ್ಟಣದಲ್ಲಿ ಬಿಗುವಿನ ವಾತಾವರಣ ಕಂಡುಬಂದ ಕಾರಣ ಇಡೀ ನಗರ ಪೊಲೀಸ್ ಪಹರೆಯಲ್ಲಿ ಇತ್ತು. ಆದಿಲ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮಧ್ಯಾಹ್ನ ಆದಿಲ್ ಅವರ ಶವವನ್ನು ಪೊಲೀಸ್ ಭದ್ರತೆಯಲ್ಲಿ ಪಟ್ಟಣಕ್ಕೆ ತರಲಾಯಿತು. ಮೃತನ ಮನೆಯ ಮುಂದೆ ಶವವನ್ನು ಇಳಿಸುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.
ಕುಟುಂಬದವರನ್ನು ನೆರೆಹೊರೆಯವರು, ಸಂಬಂಧಿಕರು ಸಂತೈಸಿದರು.ಸಂಜೆ ಶಂಶಾನ್ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ರಸ್ತೆ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ಸಂಸ್ಕಾರ ಸುಸೂತ್ರವಾಗಿ ನಡೆದಿದ್ದರಿಂದ ಪೊಲೀಸರು ಹಾಗೂ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಸದ್ಯ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಎಸ್ಪಿ ಜಿ.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ ಉಮಾ ಪ್ರಶಾಂತ್ ಮಾತನಾಡಿ, ‘ರಕ್ತದೊತ್ತಡ ಕಡಿಮೆಯಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಪ್ರಾಥಮಿಕ ವರದಿ ನೀಡಿದ್ದಾರೆ. ಈಗ ಪರಿಸ್ಥಿತಿ ಸಂಪೂರ್ಣವಾಗಿ ಶಾಂತಿಯುತವಾಗಿದೆ’ ಎಂದು ತಿಳಿಸಿದರು.
ನನ್ನ ಮಗನ ಮೇಲೆ ಪೊಲೀಸರು ಹಲ್ಲೆ ಮಾಡಿಲ್ಲ. ಈ ಬಗ್ಗೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದೇನೆ. ಕಲ್ಲು ಹೊಡೆದವರು ಯಾರು ಅನ್ನೋದು ನನಗೆ ಗೊತ್ತಿಲ್ಲ. ಮಗನನ್ನ ಕಳೆದುಕೊಂಡಿದ್ದೇನೆ. ಈ ವಯಸ್ಸಲ್ಲಿ ದುಡಿಯುವ ಶಕ್ತಿಯಿಲ್ಲ. ಸರ್ಕಾರ ಪರಿಹಾರ ನೀಡಬೇಕು’ ಎಂದ ಮೃತ ಆದಿಲ್ ತಂದೆ ಖಲೀಂ ಉಲ್ಲಾ ಒತ್ತಾಯಿಸಿದರು.
‘ಸಾವಾದಾಗ ಕಲ್ಲು ತೂರಾಟ ಘಟನೆ ಸಹಜ’
ಸಾವು ನೋವು ಆದಾಗ ಕಲ್ಲು ತೂರಾಟದಂತಹ ಘಟನೆಗಳು ಸಹಜವಾಗಿ ನಡೆಯುತ್ತವೆ’ ಎಂದು ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಹೇಳಿದರು.ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿದ ಅವರು, ಆದಿಲ್ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.‘ಒಸಿ ಬರೆಯುತ್ತಿದ್ದ ಎಂಬ ಆರೋಪದಡಿ ಆದಿಲ್ ಅವರನ್ನು ಪೊಲೀಸ್ ಠಾಣೆಗೆ ಕರೆತಂದಾಗ ಕಡಿಮೆ ರಕ್ತದೊತ್ತಡದಿಂದಾಗಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಾಕಪ್ ಡೆತ್ ಎಂದು ಮೃತನ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮರಣೋತ್ತರ ವರದಿ ಬಳಿಕ ಸತ್ಯಾಂಶ ತಿಳಿಯಲಿದೆ’ ಎಂದರು.