ದಾವಣಗೆರೆ : ಟ್ರೈನ್ ಹೋದ್ಮೇಲೆ ಟಿಕೆಟ್ ತಗೊಂತಾ BJP..? ಮಾಡಿದ್ದೆಲ್ಲಾ ಮಾಡಿ ಈಗ ದೂರು ಕೊಟ್ರೆ ಏನ್ ಪ್ರಯೋಜನ..? ಕಾಂಗ್ರೆಸ್ನ ಚೊಂಬು ಜಾಹೀರಾತಿಗೆ ಕಮಲ ಕೆಂಡಾಮಂಡಲವಾಗಿದ್ದು, ಈಗ ವಿಲವಿಲ ಒದ್ದಾಡುತ್ತಿದೆ.. ಅಷ್ಟೇ ಅಲ್ಲ, ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದೆ. ಹಾಗಾದ್ರೆ ಬಿಜೆಪಿ ತಡವಾಗಿ ಅಲರ್ಟ್ ಆಗಿದ್ದು ಹೇಗೆ ಅಂದ್ರಾ.?
ಚೊಂಬು.. ಇದೊಂದೇ ಚೊಂಬು ನೋಡಿ ಬಿಜೆಪಿ ನಾಯಕರು ಕಂಗಾಲಾಗಿ ಹೋಗುವಂತೆ ಮಾಡಿದ್ದು. ಕಾಂಗ್ರೆಸ್ ಪತ್ರಿಕೆಗಳಲ್ಲಿ ಕೊಟ್ಟಿದ್ದ ಖಾಲಿ ಚೊಂಬಿನ ಜಾಹೀರಾತು ಕಮಲ ಕಲಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟುವಂತೆ ಮಾಡಿತ್ತು. ಹೀಗಾಗಿ ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದು ಜಾಹೀರಾತು ಸಮರಕ್ಕಿಳಿದಿದ್ರು. ‘ಕಾಂಗ್ರೆಸ್ ಡೇಂಜರ್’ ಮತ್ತು ಕಾಂಗ್ರೆಸ್ಗೆ ಕೊನೆಗೆ ಸಿಗೋದು ಚೊಂಬೇ ಅಂತೇಳಿ ಕುಟುಕಿದ್ರು. ಆದ್ರೀಗ ಮಾಡಿದ್ದೆಲ್ಲಾ ಮಾಡಿ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ಬಿಜೆಪಿ ವಿರುದ್ಧ ದೂರು ಕೊಟ್ಮೇಲೆ ಇದೀಗ ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಹಾಗಾದ್ರೆ ಏನಿದು ದೂರಿನ ಸಮರ ಅಂದ್ರಾ?
ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸೋಷಿಯಲ್ ಮೀಡಿಯಾ ಪೋಸ್ಟರ್ ಸಮರ ಜೋರಾದ ಬೆನ್ನಲ್ಲೆ, ಕಾಂಗ್ರೆಸ್ ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದೆ. ದ್ವೇಷವನ್ನು ಉತ್ತೇಜಿಸುವ ಪೋಸ್ಟ್ ಹಂಚಿಕೊಂಡ ಕರ್ನಾಟಕ ಬಿಜೆಪಿ ವಿರುದ್ಧ ಚುನಾವಣಾ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಮತ್ತು ದ್ವೇಷವನ್ನು ಉತ್ತೇಜಿಸಯವ ಬಿಜೆಪಿಯ ಅಧಿಕೃತ ಹ್ಯಾಂಡಲ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ಕುರಿತಂತೆ ಬುಧವಾರ ಎಫ್ಐಆರ್ ದಾಖಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 23 ರಂದು ಬಿಜೆಪಿ ಟ್ವೀಟ್ ಮಾಡಿದ್ದ “ಕಾಂಗ್ರೆಸ್ ಪ್ರಣಾಳಿಕೆ ಅಥವಾ ಮುಸ್ಲಿಂ ಲೀಗ್ ಪ್ರಣಾಳಿಕೆ” ಅನ್ನೋ ಶೀರ್ಷಿಕೆಯ ವಿರುದ್ಧ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ವಾಡ್ಸ್ ತಂಡವು ಎಫ್ಐಆರ್ ದಾಖಲಿಸಿದೆ. ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 125 ಮತ್ತು ಭಾರತೀಯ ದಂಡ ಸಂಹಿತೆಯ 153 ರ ಪ್ರಕರ ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವ ಉದ್ದೇಶದಿಂದ ಇಂಥ ಪೋಸ್ಟ್ಗಳನ್ನ ಹಂಚಿಕೊಳ್ಳಲಾಗಿದೆ ಅಂತೇಳಿ ಎಫ್ಐಆರ್ ದಾಖಲಿಸಲಾಗಿದೆ.
ನಿಮಗೆ ಗೊತ್ತಿರ್ಲಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ನೀಡಿದ್ದ ಚೊಂಬು ಜಾಹೀರಾತಿನ ನಂತರ ರಾಜ್ಯದಲ್ಲಿ ಜಾಹೀರಾತು ಸಮರಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ನ ಚೊಂಬು ಜಾಹೀರಾತಿನಿಂದ ಕೆರಳಿದ್ದ ಬಿಜೆಪಿ, 2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚೊಂಬು ಹಿಡಿದುಕೊಂಡು ಬಯಲುಶೌಚಕ್ಕೆ ಹೋಗುತ್ತಿರುವ ಮತ್ತು 2023ರಲ್ಲಿ ಚೊಂಬು ಹಿಡಿದುಕೊಂಡು ಶೌಚಾಲಯಕ್ಕೆ ಹೋಗುತ್ತಿರುವ ಎಡಿಟೆಡ್ ಚಿತ್ರವನ್ನು ಟ್ವೀಟ್ ಮಾಡಿ ‘ಇಷ್ಟೇ ವ್ಯತ್ಯಾಸ’ ಎಂದು ವ್ಯಂಗ್ಯವಾಡಿತ್ತು. ಆನಂತರ ಉಭಯ ಪಕ್ಷಗಳ ಜಾಹೀರಾತು ಸಮರ ಮುಂದುವರಿದಿದ್ದು, ‘ಕಾಂಗ್ರೆಸ್ ಡೇಂಜರ್’ ಎಂಬ ಜಾಹೀರಾತನ್ನು ಬಿಜೆಪಿ ನೀಡಿತ್ತು.
ಬಳಿಕ ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಜನತೆ ಕೈಗೆ ಚಿಪ್ಪು ನೀಡಲಾಗಿದೆ ಎಂದು ಜಾಹೀರಾತು ನೀಡಿತ್ತು. ನಂತರ ಕಾಂಗ್ರೆಸ್ ಪಿಕ್ಪಾಕೆಟ್ ಮಾಡುತ್ತಿದೆ ಎಂದು ಜಾಹೀರಾತು ನೀಡಿತ್ತು. ಹೀಗೆ ಸಾಲು ಸಾಲು ಜಾಹೀರಾತು ನೀಡಿದ ಬಿಜೆಪಿ ವಿರುದ್ಧ ಕಾಂಗ್ರೆಸ್ ಇದೀಗ ಚುನಾವಣಾ ಆಯೋಗಕ್ಕೆ ದೂರು ದಾಖಲಿಸುತ್ತಿದ್ದಂತೆ ಎಚ್ಚತ್ತ ರಾಜ್ಯ ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಪತ್ರಿಕೆಗಳ ಮುಖಪುಟದಲ್ಲಿ ಬಿಜೆಪಿ ಬಗ್ಗೆ ಸುಳ್ಳು ಮತ್ತು ಅವಹೇಳನಕಾರಿ ಜಾಹಿರಾತು ನೀಡಿದೆ ಅಂತೇಳಿ ಕೆಪಿಸಿಸಿ ಮತ್ತು ಅದರ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
ಅಷ್ಟೇ ಅಲ್ಲ, ಈ ಜಾಹಿರಾತು ನೀಡಿರುವ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದೆ.
ಕಾಂಗ್ರೆಸ್ ಪಕ್ಷ ಚೊಂಬು ಹೆಸರಿನಲ್ಲಿ ಜಾಹೀರಾತು ನೀಡಿದೆ. ಇದು ಸುಳ್ಳು ಮಾಹಿತಿಗಳಿಂದ ಕೂಡಿರುವ ಮಾನಹಾನಿಕಾರ ಜಾಹಿರಾತು. ವಂಚಿಸಲಾಗಿದೆ ಮತ್ತು ಮೋಸ ಮಾಡಲಾಗಿದೆ ಎಂಬುದಕ್ಕೆ ಆಡು ಮಾತಿನಲ್ಲಿ ಈ ಪದ ಬಳಸಲಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಸುಳ್ಳು ಮಾಹಿತಿಗಳನ್ನು ಜಾಹಿರಾತುಗಳ ಮೂಲಕ ಹರಡಿತ್ತು. ಈ ಜಾಹಿರಾತಿಗಳಿಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್ನಲ್ಲಿದೆ. ಇದೀಗ ಕಾಂಗ್ರೆಸ್ ಮತ್ತೆ ತನ್ನ ಹಳೇ ಚಾಳಿ ಆರಂಭಿಸಿದೆ ಎಂದು ದೂರಿನಲ್ಲಿ ತಿಳಿಸಿದೆ.
ಅದೇನೇ ಇರ್ಲಿ, ತಡವಾಗಿ ದೂರು ದಾಖಲಿಸಿ ಬಿಜೆಪಿ ನಾಯಕರು ಟ್ರೈನ್ ಹೋದ್ಮೇಲೆ ಟಿಕೆಟ್ ತಗೊಂಡಂಗಿದೆ. ಮಾಡಿದ್ದೆಲ್ಲಾ ಮಾಡಿ ಈಗ ದೂರು ಕೊಟ್ರೆ ಏನ್ ಪ್ರಯೋಜನ ಅಂತೇಳಿ ಜನ ಸಾಮಾನ್ಯರು ಮಾತಾಡಿಕೊಳ್ತಾಯಿದ್ದಾರೆ.. ಕಾಂಗ್ರೆಸ್ ಬಿಜೆಪಿ ವಿರುದ್ದ ಚೊಂಬು ಜಾಹೀರಾತು ಕೊಟ್ಟಿರೋದ್ರ ಬಗ್ಗೆ ನೀವೇನಂತಿರಾ..? ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದ್ಯಾ..? ಇಲ್ವಾ?