ದಾವಣಗೆರೆ: ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮನ್ನು ಬೆಂಬಲಿಸಬೇಕು ಎಂದು ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೂಲತಃ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಹಾಗಾಗಿ ಶಿಕ್ಷಕರ ಎಲ್ಲ ಸಮಸ್ಯೆಗಳ ಬಗ್ಗೆ ಸಮಗ್ರ ಅರಿವಿದೆ. ಪರಿಷತ್ತಿನಲ್ಲಿ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ತಮ್ಮನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ನಾನು ರಾಜಕಾರಣಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಶಿಕ್ಷಕರ ಸಮಸ್ಯೆಗಳನ್ನು ನಾವೇ ಮಂಡಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಸ್ಪರ್ಧೆ ಮಾಡುತ್ತಿದ್ದೇನೆ. ಯಾವುದೇ ಪಕ್ಷ ಆಯ್ಕೆ ಮಾಡಿಕೊಳ್ಳದೆ ಶಿಕ್ಷಕರ ಪಕ್ಷವನ್ನ ಆಯ್ಕೆ ಮಾಡಿಕೊಂಡಿರುವೆ. ಶಿಕ್ಷಕರ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಿರುವ ತಮ್ಮನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಎರಡು ಲಕ್ಷಕ್ಕೂ ಅಧಿಕ ಶಿಕ್ಷಕರ ಹುದ್ದೆ ಖಾಲಿ ಇವೆ. ರಾಜ್ಯದಲ್ಲಿ ಏಳು ಸಾವಿರ ಅನುದಾನಿತ ಶಾಲೆಗಳು ಮುಚ್ಚಿವೆ. ಕಾರ್ಯನಿರ್ವಹಿಸುತ್ತಿರುವ ಆರು ಸಾವಿರ ಶಾಲೆಯಲ್ಲಿ ಬಹಳ ವರ್ಷ ಗಳಿಂದ ಶಿಕ್ಷಕರ ನೇಮಕಾತಿ ಆಗಿಯೇ ಇಲ್ಲ. ನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್ ಆದೇಶ ಮಾಡಿದ್ದರೂ ನೇಮಕ ಮಾಡಿಲ್ಲ. ಶಿಕ್ಷಕರ ಸಮಸ್ಯೆ ಬಗೆಹರಿಸುವ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಎಂ. ಉಮಾ ಪತಯ್ಯ, ಕೆ.ಎಸ್. ಪ್ರಭುಕುಮಾರ್, ಎಚ್.ಜಿ. ಪ್ರಕಾಶ್, ಅಸಾದುಲ್ಲ, ಸೈಯದ್ ಸುಬಾನ್, ಮುಪ್ಪಣ್ಣ ಬಾದಾಮಿ, ಎಸ್. ಆರ್. ನಾಗರಾಜ್ ಇತರರು ಇದ್ದರು.