ದಾವಣಗೆರೆ : ಭಾರತದಲ್ಲಿ ಕಾರ್ಮಿಕ ದಿನಾಚರಣೆಯ ಆಚರಣೆಯು ಕಾರ್ಮಿಕರು ಮತ್ತು ಕಾರ್ಮಿಕರ ಸಾಧನೆಗಳನ್ನು ಗುರುತಿಸುವ ಗೌರವಿಸುವ ಮತ್ತು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಆಯಾ ಕ್ಷೇತ್ರದ ಮಹತ್ವದ ಕೊಡುಗೆಗಳನ್ನು ನೀಡಿದ ವಿಶ್ವದಾದ್ಯಂತ ಕಾರ್ಮಿಕರ ಶ್ರಮ, ಸಮರ್ಪಣೆ ಮತ್ತು ಬದ್ಧತೆಯನ್ನು ಆಚರಿಸುವ ದಿನವಾಗಿದೆ.
ಕಾರ್ಮಿಕರಿಗೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ನೀಡುವುದು ಈ ದಿನದ ಉದ್ದೇಶವಾಗಿದೆ. ಭಾರತದಲ್ಲಿ ಕಾರ್ಮಿಕರ ದಿನವನ್ನು 1923ರಲ್ಲಿ ಮೊದಲ ಬಾರಿಗೆ ಸ್ಮರಿಸಲಾಯಿತು.
ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ಥಾನ್ ಮೊದಲ ಅಧಿಕೃತ ದಿನಾಚರಣೆಯನ್ನು ಮೇ.1 ರಂದು ತಮಿಳುನಾಡಿನ ಚೆನೈನಲ್ಲಿ ಆಯೋಜಿಸಿತ್ತು. ಕಾರ್ಮಿಕ ದಿನವನ್ನು ಸ್ಥಾಪಿಸಿದ ಸಮಯದಲ್ಲಿ ಒಕ್ಕೂಟಗಳು ಆರಂಭದಲ್ಲಿ ಕೆಲಸದ ಪರಿಸ್ಥಿತಿಗಳಲ್ಲಿ ಕೆಲವು ನಿರ್ದಿಷ್ಟ ಸುಧಾರಣೆಗಳನ್ನು ವಿನಂತಿಸಿದವು.
8 ಗಂಟೆಗಳ ಕೆಲಸದ ದಿನಕ್ಕಾಗಿ ಅವರು ಹೋರಾಡಿದರು. ಈ ದಿನದಂದು ಕೆಲಸಗಾರರು ಒಟ್ಟಿಗೆ ಸೇರಲು ಮತ್ತು ಅವರ ಕಾಳಜಿ, ಉದ್ಧೇಶಗಳ ಬಗ್ಗೆ ಪರಸ್ಪರ ಸಂವಹನ ನಡೆಸಲು ಅವಕಾಶವಿದೆ. ಈ ದಿನದಂದು ಸಮಾಜಕ್ಕೆ ಕಾರ್ಮಿಕರು ನೀಡುವ ಕೊಡುಗೆಗಳನ್ನು ಗುರುತಿಸಲು ಮತ್ತು ಮೌಲ್ಯೀಕರಿಸಲು ದೇಶವನ್ನು ಪ್ರೊತ್ಸಾಹಿಸಲಾಗುತ್ತದೆ. ಪ್ರತಿ ವರ್ಷ ನಾವು ಈ ದಿನವನ್ನು ಚಳವಳಿಯನ್ನು ಗುರುತಿಸುವ ಮತ್ತು ಕಾರ್ಮಿಕ ಬಲದ ಬಗ್ಗೆ ನಮ್ಮ ಮೆಚ್ಚುಗೆಯನ್ನು ತೋರಿಸುವ ಸಲುವಾಗಿ ಆಚರಿಸುತ್ತೇವೆ. ಆದರೆ ಕಾರ್ಮಿಕರ ಪ್ರಸ್ತುತ ಕೆಲಸದ ಪರಿಸ್ಥಿತಿಗಳ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಮತ್ತು ಕಾಳಜಿಗಳನ್ನು ಹುಟ್ಟುಹಾಕುತ್ತೇವೆ.
ಕಾರ್ಮಿಕ ದಿನಾಚರಣೆಯ ಇತಿಹಾಸ:
ಕಾರ್ಮಿಕ ದಿನವನ್ನು ಮೇ ಡೇ ಅಥವಾ ಕಾರ್ಮಿಕ ದಿನ ಎಂದು ಕರೆಯುತ್ತೇವೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಕಾರ್ಮಿಕ ದಿನದ ಪರಿಕಲ್ಪನೆಯು 19ನೆಯ ಶತಮಾನಕ್ಕೂ ಹಿಂದಿನದು. 1886 ರಲ್ಲಿ ಎಂಟು ಗಂಟೆಗಳ ದಿನದ ಚಳುವಳಿಯನ್ನು 8 ಗಂಟೆಗಳ ಕೆಲಸದ ದಿನ. 8 ಗಂಟೆಗಳ ಮನರಂಜನೆ ಮತ್ತು 8 ಗಂಟೆಗಳ ವಿಶ್ರಾಂತಿಗಾಗಿ ಪ್ರತಿಪಾದಿಸಲು ಪ್ರಾರಂಭಿಸಲಾಯಿತು. ಕಾರ್ಮಿಕ ದಿನಾಚರಣೆಯ ಪ್ರಾಥಮಿಕ ಉದ್ಧೇಶ ಅವರ ಶ್ರಮ, ಸಮರ್ಪಣೆಯನ್ನು ಗುರುತಿಸಿ, ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ ಅವರನ್ನು ಶೋಷಣೆಯಿಂದ ರಕ್ಷಿಸುವುದು. ಇದು ಮೇ 1ರಂದು ಪ್ರಾರಂಭವಾಯಿತು.
ಈ ದಿನವನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಕಮ್ಗರ್ದಿನ (ಉತ್ತರ ಪ್ರದೇಶ), ಕಾರ್ಮಿಕರ ದಿನಾಚರಣೆ (ಕರ್ನಾಟಕ), ಕಾರ್ಮಿಕ ದಿನೋತ್ಸವಮ್ (ಆಂಧ್ರ), ಕಮ್ಗರ್ ದಿವಸ್ (ಮಹಾರಾಷ್ಟ್ರ), ಉಜೈಪಾಲರ್ ದೀನಂ (ತಮಿಳುನಾಡು) ತೋಝಿಲಾಲಿ ದಿನಂ (ಕೇರಳ), ಶ್ರೋಮಿಕ್ ದಿ ಬೋಶ್ (ಪಶ್ಚಿಮ ಬಂಗಾಳ). ಒಟ್ಟಾರೆ ಮೇ 1-1890 ಯುರೋಪಿನ ಮೊದಲ ಅಂತರಾಷ್ಟ್ರೀಯ ಸಮಾಜವಾದಿ ಕಾಂಗ್ರೇಸ್ ಜುಲೈ 14, 1889 ರಂದು, ಫ್ರಾನ್ಸ್ನ ಪ್ಯಾರಿಸ್ನಲ್ಲಿ ಮೇ 1ನ್ನು ಅಂತರರಾಷ್ಟ್ರೀಯ ಎಕತೆ ಮತ್ತು ಒಗ್ಗಟ್ಟಿನ ಕಾರ್ಮಿಕರ ದಿನ ಎಂದು ಆಚರಿಸಬೇಕು ಎಂದು ಘೋಷಿಸಿದ ನಂತರ ಕಾರ್ಮಿಕರಿಗೆ ಮೀಸಲಾದ ಮೊದಲ ಮೇ-ದಿನಾಚರಣೆಯಾಗಿದೆ.
ಭಾರತದಲ್ಲಿ ಕಾರ್ಮಿಕವರ್ಗದ ಶಕ್ತಿ:
ಭಾರತದಲ್ಲಿ ಆಧುನಿಕ ಕೈಗಾರಿಕಾ ಪದ್ಧತಿಗೆ ಮೊದಲೇ ಕೂಲಿಕಾರ್ಮಿಕ ವರ್ಗ ಇತ್ತು. ಕುಶಲ ಕರ್ಮಿಗಳು ತಮ್ಮ ಸಾಂಪ್ರದಾಯಿಕ ಅನ್ನ ಸಂಪಾದನೆಯ ಮೂಲದಿಂದ ಬೇರ್ಪಟ್ಟಾಗ ಕೃಷಿಯನ್ನು ಅವಲಂಬಿಸದೇ ಅವರಿಗೆ ಅನ್ಯ ಮಾರ್ಗವಿರಲಿಲ್ಲ. ಇದರಿಂದಾಗಿ ಭೂ-ಹೀನ ಕಾರ್ಮಿಕ ವರ್ಗ ಸೃಷ್ಟಿಯಾಯಿತು. ಗ್ರಾಮಗಳಲ್ಲಿದ್ದ ಬಡತನ, ಜನಸಂಖ್ಯಾ ಹೆಚ್ಚಳ, ಕೃಷಿ ಭೂಮಿಯ ವಿಭಾಗೀಕರಣ, ದೋಷಪೂರಿತ ಭೂಕಂದಾಯ, ಲೇವಾದೇವಿದಾರರಿಂದ ಕೃಷಿಕರ ಶೋಷಣೆ, ಗುಡಿ-ಕೈಗಾರಿಕೆಗಳ ನಾಶ, ಅಡವು ಇಡುವಿಕೆ, ಅವಿಭಕ್ತ ಕುಟುಂಬಗಳು ಭೂ-ಹೀನ ಕಾರ್ಮಿಕ ವರ್ಗದ ಉದಯಕ್ಕೆ ಕಾರಣವಾದವು. ಭಾರತದ ಕೈಗಾರಿಕ ಕಾರ್ಮಿಕಶಕ್ತಿಯ ಹೆಚ್ಚಿನ ಭಾಗ ಇನ್ನೂ ಗ್ರಾಮವನ್ನೇ ಆಧರಿಸಿದೆ.
1882 ರಲ್ಲಿ ಭಾರತದಲ್ಲಿ ಕಾರ್ಮಿಕರ ಸಂಖ್ಯೆ 75 ಮಿಲಿಯನ್. 1961 ರಲ್ಲಿ ಭಾರತದಲ್ಲಿ ದುಡಿಯುವ ಕಾರ್ಮಿಕ ಸಂಖ್ಯೆ 188 ಮಿಲಿಯನ್ ಇದ್ದು, ಇದರಲ್ಲಿ 162 ಮಿಲಿಯನ್ ಗ್ರಾಮೀಣ ಕಾರ್ಮಿಕರು, 26 ಮಿಲಿಯನ್ ನಗರ ಕಾರ್ಮಿಕರಿದ್ದರು. 1991 ರಲ್ಲಿ ದುಡಿಯುವ ಕಾರ್ಮಿಕರ ಸಂಖ್ಯೆ 314.9 ಮಿಲಿಯನ್ ಇತ್ತು.
ಇದರಲ್ಲಿ 249.3 ಮಿಲಿಯನ್ ಗ್ರಾಮೀಣ ಕಾರ್ಮಿಕರು, 65.6 ಮಿಲಿಯನ್ ನಗರ ಕಾರ್ಮಿಕರು ಇದ್ದರು. 2020 ರಲ್ಲಿ ಸುಮಾರು 476.67 ಮಿಲಿಯನ್ ಕಾರ್ಮಿಕರಿದ್ದಾರೆ. ಇವರಲ್ಲಿ ಕೃಷಿ 41.19% ಉದ್ಯಮವಲಯ 26.18% ಮತ್ತು ಸೇವಾವಲಯ ಒಟ್ಟು ಕಾರ್ಮಿಕ ಬಲದ 32.83% ಅನ್ನು ಒಳಗೊಂಡಿದೆ. ಭಾರತದಲ್ಲಿ ಕಾರ್ಮಿಕರ ಸರಾಸರಿ ಕೆಲಸದ ಸಮಯವು ವಾರಕ್ಕೆ ಸರಿಸುಮಾರು 47.7 ಗಂಟೆಗಳು. ಇದು ಜಾಗತಿಕವಾಗಿ ಹೆಚ್ಚು ಕೆಲಸ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ 7ನೆಯ ಸ್ಥಾನದಲ್ಲಿದೆ.
ಭಾರತದಲ್ಲಿ ಸಂಘಟಿತ – ಅಸಂಘಟಿತ ಕಾರ್ಮಿಕರು:
ಭಾರತದಲ್ಲಿ ಕಾರ್ಮಿಕರು ಸಂಘಟಿತ ಉದ್ಯಮಗಳಲ್ಲಿ ಮತ್ತು ಸಂಘಟಿತವಲ್ಲದ ಉದ್ಯಮಗಳಲ್ಲಿ ಕೆಲಸ ಮಾಡುತ್ತಾರೆ. ಸಂಘಟಿತ ವಲಯವು ಸರ್ಕಾರ, ಸರ್ಕಾರಿ ಸ್ವಾಮ್ಯದ ಉದ್ಯಮಗಳು ಮತ್ತು ಖಾಸಗಿ ವಲಯದ ಉದ್ಯಮಗಳಿಂದ ಕೆಲಸ ಮಾಡುವ ಕಾರ್ಮಿಕರನ್ನು ಒಳಗೊಂಡಿದೆ. ಭಾರತದಲ್ಲಿ ಸಂಘಟಿತ ವಲಯವು ಪರವಾನಿಗೆ ಪಡೆದ ಸಂಸ್ಥೆಗಳನ್ನು ಸೂಚಿಸುತ್ತದೆ. ನಿಗಮಗಳು, ಕಾರ್ಖಾನೆಗಳು, ಕಂಪನಿಗಳು, ದೊಡ್ಡ ವ್ಯವಹಾರಗಳು ಸೇರಿವೆ. ಭಾರತದಲ್ಲಿನ ಅಸಂಘಟಿತ ಕಾರ್ಮಿಕರನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿದೆ.
ಉದ್ಯೋಗ, ಅದರ ಸ್ವರೂಪ, ಸಂಕಷ್ಟದಲ್ಲಿರುವ ವರ್ಗಗಳು ಮತ್ತು ಸೇವಾ ವರ್ಗಗಳು ಎಂದು ವಿಭಾಗಿಸಲಾಗುವುದು. ಅಸಂಘಟಿತ ವಲಯವು ಕಡಿಮೆ ಉತ್ಪಾದಕತೆಯನ್ನು ಹೊಂದಿದೆ ಮತ್ತು ಕಡಿಮೆ ವೇತನವನ್ನು ಪಡೆಯುತ್ತದೆ. ಇದು ಪ್ರತಿಶತ 94 ರಷ್ಟು ಕಾರ್ಮಿಕರನ್ನು ಹೊಂದಿದ್ದರೂ ಸಹ ಅಸಂಘಟಿತ ವಲಯದ ಕುಟುಂಬಗಳಲ್ಲಿ ಬಡತನದ ಪ್ರಮಾಣವು ಹೆಚ್ಚಿಗೆ ಇರುವುದಾಗಿ ಕಂಡು ಬರುತ್ತಿದೆ.
ಅಸಂಘಟಿತ ಔದ್ಯೋಗಿಕ ಗುಂಪುಗಳಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು, ಭೂ-ರಹಿತ ಕೃಷಿ ಕಾರ್ಮಿಕರು, ಪಾಲುದಾರರು, ಮೀನುಗಾರರು, ಪಶುಸಂಗೋಪನೆ, ಬೀಡಿ ಸುತ್ತುವುದು, ಲೇಬಲ್ ಮತ್ತು ಪ್ಯಾಕಿಂಗ್, ಕಟ್ಟಡ ನಿರ್ಮಾಣ ಕಾರ್ಮಿಕರು, ಚರ್ಮದ ಕೆಲಸಗಾರರು, ನೇಕಾರರು, ಕುಶಲ ಕರ್ಮಿಗಳು, ಉಪ್ಪು ಕೆಲಸಗಾರರು, ಇಟ್ಟಿಗೆ ಗೂಡು ಕೆಲಸಗಾರರು ಸೇರಿದ್ದಾರೆ ಮತ್ತು ಕಲ್ಲುಕ್ವಾರಿಗಳು, ಗರಗಸದ ಕಾರ್ಖಾನೆಗಳಲ್ಲಿನ ಕೆಲಸಗಾರರು, ತೈಲ ಗಿರಣಿಗಳ ಕೆಲಸಗಾರರು ಉದ್ಯೋಗದ ಸ್ವರೂಪದ ಕಾರ್ಮಿಕರಲ್ಲಿ ಕೃಷಿ ಕಾರ್ಮಿಕರು, ವಲಸೆ ಕಾರ್ಮಿಕರು, ಗುತ್ತಿಗೆ ಮತ್ತು ಸಾಂಧರ್ಭಿಕ ಕಾರ್ಮಿಕರು ಸೇರಿದ್ದಾರೆ.
ಸಂಕಷ್ಟದಲ್ಲಿರುವ ವರ್ಗಗಳೆಂದರೆ ಟಾಡಿ ಟ್ಯಾಪರ್ಸ್, ಸ್ಕ್ಯಾವೆಂಜರ್ಗಳು, ಹೆಡ್ಲೋಡ್ಗಳ ಕ್ಯಾರಿಯರ್, ಪ್ರಾಣಿಚಾಲಿತ ವಾಹನಗಳ ಚಾಲಕರು, ಲೋಡ್ ಮತ್ತು ಅನ್ಲೋಡರ್ಗಳನ್ನು ಒಳಗೊಂಡಿದೆ. ಸೇವಾ ವರ್ಗೀಗಳಲ್ಲಿ ಸೂಲಗಿತ್ತಿಗಳು, ಗೃಹ ಕಾರ್ಮಿಕರು, ಕ್ಷೌರಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ವಾರ್ತಾಪತ್ರಿಕೆ ಮಾರಾಟಗಾರರು, ಕೈಗಾಡಿ ನಿರ್ವಾಹಕರು, ಚಿಲ್ಲರೆ ವ್ಯಾಪಾರದಂತಹ ಸೇವಾ ನೌಕರರು ಸೇರಿದ್ದಾರೆ.
ಕೃಷಿ, ಹೈನುಗಾರಿಕೆ, ತೋಟಗಾರಿಕೆ ಮತ್ತು ಸಂಬಂಧಿತ ಉದ್ಯೋಗಗಳು ಭಾರತದಲ್ಲಿ 41.49 ಪ್ರತಿ ಶತದಷ್ಟು ಕಾರ್ಮಿಕರನ್ನು ಬಳಸಿಕೊಳ್ಳುತ್ತವೆ. ಭಾರತವು ಸುಮಾರು 58 ಮಿಲಿಯನ್ ಅಸಂಘಟಿತ ಕೃಷಿಯೇತರ ಉದ್ಯಮಗಳನ್ನು ಹೊಂದಿದೆ. ಭಾರತವು ಪ್ರತಿ ವರ್ಷ ಸುಮಾರು 13 ಮಿಲಿಯನ್ ಹೊಸ ಕಾರ್ಮಿಕರನ್ನು ತನ್ನ ಕಾರ್ಮಿಕ ಪೂಲ್ಗೆ ಸೇರಿಸುತ್ತಿದೆ.
ಭಾರತದ ಆರ್ಥಿಕತೆಯು ಪ್ರತಿ ವರ್ಷ ಸುಮಾರು 8 ಮಿಲಿಯನ್ ಹೊಸ ಉದ್ಯೋಗಗಳನ್ನು ಪ್ರಧಾನವಾಗಿ ಕಡಿಮೆ ಸಂಬಳದ, ಅಸಂಘಟಿತ ವಲಯದಲ್ಲಿ ಸೇರಿಸುತ್ತಿದೆ. ಉಳಿದ 5 ಮಿಲಿಯನ್ ಯುವಕರು ಕಳಪೆ ಸಂಬಳದ ಭಾಗಶಃ ಉದ್ಯೋಗ, ತಾತ್ಕಾಲಿಕ ಮೂಲ ಸೌಕರ್ಯ, ರಿಯಲ್ ಎಸ್ಟೇಟ್ ನಿರ್ಮಾಣ ಉದ್ಯೋಗಿಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಅನೇಕ ಸಮಸ್ಯೆಗಳು ಅಸಂಘಟಿತ ಕಾರ್ಮಿಕರನ್ನು ಕಾಡುತ್ತಿದೆ.
ಕಾರ್ಮಿಕರಿಗೆ ಹವಾಮಾನ ವೈಪರಿತ್ಯ:
ವಿಶ್ವದಾದ್ಯಂತ 340 ಕೋಟಿಗೂ ಹೆಚ್ಚು ಕಾರ್ಮಿಕರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇವರಲ್ಲಿ 240 ಕೋಟಿ ಕಾರ್ಮಿಕರನ್ನು ಅತಿಯಾದ ಉಷ್ಣಾಂಶ, ವಾಯಮಾಲಿನ್ಯ, ಅತಿ ನೇರಳ ಕಿರಣಗಳು ಬಾಧಿಸಿ ವರ್ಷಕ್ಕೆ 30 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಅಕಾಲಿಕವಾಗಿ ಮರಣ ಹೊಂದುತ್ತಿದ್ದಾರೆ. ಇನ್ನು 70-90 ಕೋಟಿಯಷ್ಟು ಕಾರ್ಮಿಕರು ವಾಯುಮಾಲಿನ್ಯ ತೀವ್ರವಾಗಿರುವ ಸ್ಥಳಗಳಲ್ಲಿ ಕೆಲಸ ಮಾಡುವ ಪರಿಣಾಮಗಳಿಂದ 2022 ರಲ್ಲಿ 8.6 ಲಕ್ಷ ಜನ ಕಾರ್ಮಿಕರು ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಇನ್ನು ಹಲವರಿಗೆ ಶ್ವಾಸಕೋಶದ ಕ್ಯಾನ್ಸರ್, ಉಸಿರಾಟ ಸಂಬಂಧಿ ಕಾಯಿಲೆ, ಹಾಗೂ ಹೃದಯ ಸಂಬಂಧೀ ಕಾಯಿಲೆಗಳಿಂದ ನರಳುತ್ತಿದ್ದಾರೆ. ಅತಿಯಾದ ಉಷ್ಣಾಂಶಕ್ಕೆ 2.28 ಕೋಟಿ ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾದರೆ 18,970 ಜನ ಕಾರ್ಮಿಕರು ತೀವ್ರ ಬಿಸಿಲಿನ ಕಾರಣದಿಂದ ಮೃತ ಪಟ್ಟಿದ್ದಾರೆ.
ಕಲ್ಲಿದ್ದಿಲು ಗಣಿ ಕಾರ್ಮಿಕರು, ಉಕ್ಕಿನ ಕಾರ್ಖಾನೆಗಳ ಕಾರ್ಮಿಕರು, ಅಪಾಯಕಾರಿ ರಸಾಯನಿಕ ಬಳಸುವ ಕೈಗಾರಿಕಾ ಕಾರ್ಮಿಕರು ಪ್ರತಿ ವರ್ಷ ಬಲಿಯಾಗುತ್ತಿರುವವರು 3 ಲಕ್ಷ ಜನರು. ಹೀಗಾಗಿ ಕಾರ್ಮಿಕರ ರಕ್ಷಣೆಗಾಗಿ ಸೂಕ್ತ ನೀತಿ, ಶಾಸನಗಳ ಅವಶ್ಯಕತೆಯಿದೆ.
ಭಾರತದಲ್ಲಿ ಕಾರ್ಮಿಕ ಕಾಯ್ದೆ, ಕಾನೂನುಗಳು
ಭಾರತವು 50ಕ್ಕೂ ಹೆಚ್ಚು ಪ್ರಮುಖ ಕಾಯ್ದೆ, ಕಾನೂನುಗಳನ್ನು ಹೊಂದಿದೆ, ಕಾರ್ಮಿಕ ಶಾಸನಗಳನ್ನು ನಾಲ್ಕು ಬಗೆಯಲ್ಲಿ ಇರುವುದನ್ನು ಗಮನಿಸಬಹುದು. (1) ರಕ್ಷಣಾತ್ಮಕ ಶಾಸನಗಳು, (2) ನಿಯಂತ್ರಕ ಶಾಸಗಳು, (3) ಸಾಮಾಜಿಕ ಸುರಕ್ಷತೆಯ ಶಾಸನಗಳು, (4) ಕಲ್ಯಾಣ ಶಾಸನಗಳು. ರಕ್ಷಣಾತ್ಮಕ ಶಾಸನಗಳಲ್ಲಿ ಕಾರ್ಖಾನೆ ಕಾಯ್ದೆ 1948, ಗಣೆಶಾಸನ – 1952, ತೋಟಗಾರಿಕೆ ಕಾರ್ಮಿಕರ ಶಾಸನ 1951, ಮೋಟಾರು ವಾಹನ ಸಾರಿಗೆ ಕಾರ್ಮಿಕರ ಶಾಸನ 1961, ಕೂಲಿ ನೀಡಿಕೆ ಶಾಸನ 1936, ಕನಿಷ್ಟ ಕೂಲಿ ಶಾಸನ 1948, ಮಕ್ಕಳ ದುಡಿಮೆಯ ಶಾಸನ 1938, ನಿಯಂತ್ರಕ ಶಾಸನಗಳಲ್ಲಿ ಕಾರ್ಮಿಕ ಸಂಘಗಳ ಶಾಸನ 1926, ಕೈಗಾರಿಕಾ ವ್ಯಾಜ್ಯಶಾಸನ 1948, ಕಾರ್ಮಿಕರ ಪ್ರಾವಿಡೆಂಟ್ ಫಂಡ್ ಶಾಸನ 1952, ಹೆರಿಗೆ ಪ್ರಯೋಜನ ಕಾಯಿದೆ 1961, ಬೋನಸ್ ಪಾವತಿ ಕಾಯಿದೆ 1965, ಗ್ರಾಚ್ಯೂಟಿ ಪಾವತಿ ಕಾಯಿದೆ 1972, ಕಲ್ಯಾಣ ಶಾಸನಗಳಲ್ಲಿ ಗಣಿ ಕಾರ್ಮಿಕರ ಕಲ್ಯಾಣ ನಿಧಿ ಶಾಸನ 1947, ಕಲ್ಲಿದ್ದಿಲು ಗಣಿ ಕಾರ್ಮಿಕರ ಕಲ್ಯಾಣ ತೆರಿಗೆ ಶಾಸನ 1961, ಇನ್ನು ಅನೇಕ ಕಾಯಿದೆಗಳಿವೆ. ಭಾರತದಲ್ಲಿ ಮೊದಲ ಬಾರಿಗೆ ಕಾರ್ಖಾನೆ ಕಾಯ್ದೆ 1881ರಲ್ಲಿ ಬಂದು 1891ರಲ್ಲಿ ತಿದ್ದುಪಡಿ ಮಾಡಿ ಅಲ್ಲಿಂದೀಚಿಗೆ ಒಂದಿಷ್ಟು ಕಾರ್ಮಿಕ ಶಾಸನಗಳು ಬಂದಿವೆ, ಬರುತ್ತಿರುವುದನ್ನು ಗಮನಿಸಬಹುದು
ಭಾರತದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು:
ಭಾರತದಲ್ಲಿ ಪ್ರಸ್ತುತ 13 ಕೇಂದ್ರ ಕಾರ್ಮಿಕ ಸಂಘಟನೆಗಳಿವೆ. ಇದಲ್ಲದೆ ವಿಭಿನ್ನ ಕೈಗಾರಿಕೆಗಳಲ್ಲಿ ಮತ್ತು ಉದ್ಯೋಗಗಳಲ್ಲಿ ನೊಂದಾಯಿತ ಕಾರ್ಮಿಕ ಸಂಘಗಳ ಒಕ್ಕೂಟಗಳು ಇವೆ. ಇವು ಯಾವುದೇ ಕೇಂದ್ರ ಕಾರ್ಮಿಕ ಒಕ್ಕೂಟದೊಂದಿಗೆ ನೊಂದಾಯಿತವಾಗಿಲ್ಲ. ಕೆಲವೊಂದು ನೊಂದಾಯಿತ ಸ್ವತಂತ್ರ ಒಕ್ಕೂಟಗಳೆಂದರೆ; ಅಖಿಲಭಾರತ ಬ್ಯಾಂಕ್ ನೌಕರರ ಸಂಘ, ಭಾರತೀಯ ರೈಲ್ವೆ ಕಾರ್ಮಿಕರ ಒಕ್ಕೂಟ, ಆಖಿಲಭಾರತ ಬಂದರು ನೌಕರರ ಒಕ್ಕೂಟ, ಅಂಚೆ ಮತ್ತು ತಂತಿ ಇಲಾಖೆ ನೌಕರರ ರಾಷ್ಟ್ರೀಯ ಒಕ್ಕೂಟ, ಅಖಿಲಭಾರತ ಗಣಿ ಕಾರ್ಮಿಕರ ಒಕ್ಕೂಟ, ಭಾರತದ ಕಾರ್ಯನಿರತ ಪತ್ರಿಕೋದ್ಯಮಿಗಳ ಒಕ್ಕೂಟ, ಇತ್ಯಾದಿ. ಕೇಂದ್ರ ಕಾರ್ಮಿಕರ ಸಂಘಟನೆಗಳ ವಿವರನ್ನು ಗಮನಿಸಿದರೆ ಇದರಲ್ಲಿರುವ ಸಂಘಗಳು ಭಾರತದ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿವೆ.
ಭಾರತದ ಕಾರ್ಮಿಕ ಸಂಘದ ಸಮಸ್ಯೆಗಳು:
ಕಾರ್ಮಿಕ ಸಂಘಗಳ ಚಳುವಳಿ ಭಾರತದಲ್ಲಿ ನೂರಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದರೂ ಇನ್ನು ಸಾಕಷ್ಟು ಸಮಸ್ಯೆಗಳಿಂದ ಕೂಡಿದೆ. ದಿನದಿಂದ ದಿನಕ್ಕೆ ಸಮಸ್ಯೆಗಳು ದ್ವಿಗುಣಗೊಳ್ಳುತ್ತಿವೆ. ಅಂತವುಗಳಲ್ಲಿ ಪ್ರಮುಖವಾದವುಗಳೆಂದರೆ ಕಾರ್ಮಿಕ ಒಕ್ಕೂಟ ತತ್ವದ ಅಸಮಾನ ಬೆಳವಣಿಗೆ, ಸಣ್ಣ ಗಾತ್ರದ ಕಾರ್ಮಿಕ ಸಂಘಗಳು, ಹಣಕಾಸಿನ ದೌರ್ಬಲ್ಯ, ಕಾರ್ಮಿಕ ಸಂಘಗಳ ಹೆಚ್ಚಳ ಮತ್ತು ಪರಸ್ಪರ ವೈಷಮ್ಯ, ಅನುಭವಿಲ್ಲದ ನಾಯಕತ್ವ, ರಾಜಕಾರಣ, ರಾಜಕೀಯ ಪಕ್ಷಗಳ ಬೆರಕೆ, ಕಾರ್ಮಿಕ ಸಂಘಗಳ ಮಾನ್ಯತೆ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳನ್ನು ಗಮನಿಸಬಹುದು.
…ಡಾ. ಗಂಗಾಧರಯ್ಯ ಹಿರೇಮಠವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.ಮೊ: 9880093613.