
ದಾವಣಗೆರೆ: ಖಾತೆ ವರ್ಗಾವಣೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಸಂಬಂಧ ಇಲ್ಲಿನ ಮಹಾನಗರ ಪಾಲಿಕೆ ವಲಯ ಕಚೇರಿ–2ರ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಲೋಕಾಯುಕ್ತ ಎಸ್ಪಿ ಕೌಲಾಪುರೆ ತಂಡದ ಬಲೆಗೆ ಬಿದ್ದಿದ್ದಾರೆ.
ವಲಯ ಕಚೇರಿ –2ರ ಎಫ್ಡಿಎ ಪಾಲನಾಯಕ ಲೋಕಾಯುಕ್ತ ಬಲೆಗೆ ಬಿದ್ದವರು. ನಗರದ ನಿವಾಸಿ ಬಸವನಗೌಡ ಜಿ.ಯು. ಅವರು ಬಾಡ ಕ್ರಾಸ್ನಲ್ಲಿನ ನಿವೇಶನವನ್ನು ತಮ್ಮ ತಂಗಿ ಹೆಸರಿಗೆ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು.
ಖಾತೆ ವರ್ಗಾವಣೆ ಮಾಡಲು ರೂ. 2,500 ಲಂಚ ಕೊಡುವಂತೆ ಪಾಲನಾಯಕ ಬೇಡಿಕೆ ಇಟ್ಟಿದ್ದರು. ಅದರಂತೆ ಶುಕ್ರವಾರ ತಮ್ಮ ಕಚೇರಿಯಲ್ಲಿ ಪಾಲನಾಯಕ ಅವರು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಲೋಕಾಯುಕ್ತ ಇನ್ಸ್ಪೆಕ್ಟರ್ಗಳಾದ ಪ್ರಭು ಸೂರಿನ, ಮುಸ್ತಾಕ್ ಅಹಮ್ಮದ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

