ಶಿವಮೊಗ್ಗ:ಮೈಸೂರು ಕಾಗದ ಕಾರ್ಖಾನೆಯ (ಎಂಪಿಎA) ನಿವೃತ್ತ ಉದ್ಯೋಗಿ ಎಲ್.ಎಸ್. ಆನಂದ್(72) ಅವರಿಂದ ‘ಡಿಜಿಟಲ್ ಅರೆಸ್ಟ್’ ಮೂಲಕ 41 ಲಕ್ಷ ಸುಲಿಗೆ ಮಾಡಿದ್ದ ಉತ್ತರ ಪ್ರದೇಶದ ಇಬ್ಬರನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಉತ್ತರ ಪ್ರದೇಶದ ವಲೀದ್ಪುರ ನಗರದ ಮೊಹಮ್ಮದ್ ಅಹಮದ್ (45), ಅಜಂಗಡ ಜಿಲ್ಲೆಯ ಮೊಹುಡಿಯಾ ಗ್ರಾಮದ ಅಭಿಷೇಕ್ ಕುಮಾರ್ ಶೇಟ್ (27) ಬಂಧಿತರು. ಆರೋಪಿಗಳಿಂದ 23,89,751 ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಇನ್ನೊಬ್ಬ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಇಂಟರ್ಪೋಲ್ ನೆರವು ಕೋರಲಾಗಿದೆ.
ಘಟನೆಯ ವಿವರ
ಶಿವಮೊಗ್ಗ ಗೋಪಾಲಗೌಡ ಬಡಾವಣೆ (ಗೋಪಾಳ) ನಿವಾಸಿ ಎಲ್.ಎಸ್. ಆನಂದ್ ಅವರಿಗೆ ಸೆಪ್ಟೆಂಬರ್ 27ರಂದು ವಿಡಿಯೊ ಕರೆ ಮಾಡಿದ್ದ ಆರೋಪಿಗಳು ತಮ್ಮನ್ನು ಸಿಬಿಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು.‘ ನಿಮ್ಮ ಆಧಾರ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. ಅಂತೆಯೇ ನಿಮ್ಮ ವಿರುದ್ಧ ದೂರು ದಾಖಲಿಸಿಕೊಂಡಿದ್ದೇವೆ. ಬಂಧನಕ್ಕೆ ವಾರಂಟ್ ಜಾರಿ ಆಗಿದೆ. ನಿಮಗೆ ಸಂಬಂಧಿಸಿದಂತೆ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಪ್ರಕರಣದಿಂದ ನೀವು ಹೊರಬರಬೇಕಾದರೆ ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಬೇಕು’ ಎಂದು ಹೇಳಿ, 41 ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು. ವಂಚನೆಗೆ ಒಳಗಾಗಿರುವುದು ಗಮನಕ್ಕೆ ಬರುತ್ತಲೇ ಆನಂದ್ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸಿಇಎನ್ ಠಾಣೆ ಡಿವೈಎಸ್ಪಿ ಕೆ.ಕೃಷ್ಣಮೂರ್ತಿ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳನ್ನು ಮಂಗಳವಾರ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಬಂಧಿಸಿ ಕರೆತಂದಿದೆ.
‘ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾದ ಮೊದಲ ಡಿಜಿಟಲ್ ಅರೆಸ್ಟ್ ಹೆಸರಿನ ವಂಚನೆ ಪ್ರಕರಣ ಇದಾಗಿದೆ. ಸಾರ್ವಜನಿಕರು ಈ ರೀತಿ ಅಪರಿಚಿತರು ಕರೆ ಮಾಡಿದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ಕೊಡಿ. ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಬೇಡಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ಕುಮಾರ್ ಮನವಿ ಮಾಡಿದ್ದಾರೆ.
ಪ್ರಮುಖ ಆರೋಪಿ ಪರಾರಿ
ಬಂಧನಕ್ಕೆ ಒಳಗಾಗಿರುವ ಮೊಹಮ್ಮದ್ ಅಹಮದ್ನ ಪುತ್ರ ಶಾಕೀರ್ ಅಲಿ (24) ಈ ಪ್ರಕರಣದ ಪ್ರಮುಖ ಆರೋಪಿ. ಕಾಂಬೋಡಿಯಾದಲ್ಲಿ ಇರುವ ಆತ ಅಲ್ಲಿಂದಲೇ ಆನ್ಲೈನ್ ಮೂಲಕ ಅಮಾಯಕರನ್ನು ವಂಚಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.