
ದಾವಣಗೆರೆ: ‘ದಾವಣಗೆರೆ ಹಾಗೂ ಹರಿಹರದಲ್ಲಿ ಹೋರ್ಡಿಂಗ್ಸ್ ಹಾಗೂ ಫ್ಲೆಕ್ಸ್ ಅಳವಡಿಕೆ ವಿಷಯದಲ್ಲಿ ಹಾಗೂ ಶುಲ್ಕ ಆಕರಿಸುವಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಹರಿಹರ ಶಾಸಕ ಬಿ.ಪಿ.ಹರೀಶ್ ಒತ್ತಾಯಿಸಿದರು.
‘ಹೋರ್ಡಿಂಗ್ಸ್, ಫ್ಲೆಕ್ಸ್, ಬ್ಯಾನರ್‌ಗಳ ಅಳವಡಿಕೆ ಬಗ್ಗೆ ಪದೇ ಪದೇ ಮಾಹಿತಿ ಕೇಳಿದರೂ, ಅಧಿಕಾರಿಗಳು ಸಮರ್ಪಕವಾಗಿ ಉತ್ತರ ನೀಡಲಿಲ್ಲ. ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ತಿಳಿಸಿದ ಬಳಿಕ ಮಾಹಿತಿ ನೀಡಿದ್ದಾರೆ. ಆ ನಂತರವೇ ತೆರವು ಕಾರ್ಯಾಚರಣೆ ನಡೆಸಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಶಾಸಕ ಕೇಳಿದರೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವ ಸೌಜನ್ಯವಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಶೇ 90ರಷ್ಟು ಜಾಹೀರಾತು ಫಲಕಗಳನ್ನು ಅನಧಿಕೃತವಾಗಿ ಅಳವಡಿಸಲಾಗಿತ್ತು. ಅಧಿಕೃತವಾಗಿ ಅಳವಡಿಸಿದ್ದ ಜಾಹೀರಾತುಗಳಲ್ಲೂ ಅವ್ಯವಹಾರ ನಡೆದಿದೆ’ ಎಂದು ಆರೋಪಿಸಿದರು.


‘ಪಾಲಿಕೆಯು ಹೋರ್ಡಿಂಗ್ಸ್ ಹಾಗೂ ಫ್ಲೆಕ್ಸ್ ಅಳವಡಿಸಿದವರಿಂದ ಲಕ್ಷಾಂತರ ರೂಪಾಯಿ ಶುಲ್ಕ ಸಂಗ್ರಹಿಸ ಬೇಕಿತ್ತು. ಆದರೆ, ಅಧಿಕಾರಿಗಳ ಬೇಜವಾಬ್ದಾರಿ ಕಾರಣ ನಷ್ಟವಾಗಿದೆ. ತನಿಖೆಗೆ ಒತ್ತಾಯಿಸಿ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ’ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಬಿ.ಎಸ್.ಜಗದೀಶ್, ಮಂಜಾನಾಯ್ಕ, ವಿನಾಯಕ ಆರಾಧ್ಯ ಇದ್ದರು.

