ಶಿವಮೊಗ್ಗ: ಅಕ್ರಮವಾಗಿ ಮೀಟರ್ ಬಡ್ಡಿ ದಂಧೆ ನಡೆಸುವವರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಪೊಲೀಸರು ಹಲವು ಕಡೆ ದಾಳಿ ನಡೆಸಿ ಖಾಲಿ ಚೆಕ್ ಗಳು, ಪ್ರಾಮಿಸರಿ ನೋಟ್, ನಿವೇಶನ, ಮನೆ, ವಾಹನಗಳ ದಾಖಲಾತಿಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.
ಗೊಂದಿ ಚಟ್ನಹಳ್ಳಿ ನಿವಾಸಿ ರಂಗನಾಥ್ ಎಂಬುವವರು ಎರಡು ವರ್ಷಗಳ ಹಿಂದೆ ಮನೆ ಕಟ್ಟುವ ಸಂದರ್ಭದಲ್ಲಿ ತಮ್ಮ ಗ್ರಾಮದ ಅನಿಲ, ರಾಜಣ್ಣ, ಪ್ರಭಣ್ಣ, ವಿಜಯೇಂದ್ರಣ್ಣ, ಪ್ರದೀಪ್ ಮತ್ತು ಹಾಲೇಶಪ್ಪ ಎಂಬುವವರಿಂದ ಶೇ. 3ರಷ್ಟು ಬಡ್ಡಿದರದಲ್ಲಿ ಸಾಲ ಪಡೆದುಕೊಂಡಿದ್ದು, ಸಕಾಲದಲ್ಲಿ ಸಾಲ ನೀಡಲು ಆಗದ ಕಾರಣ ಸಾಲ ನೀಡಿದವರು ರಂಗನಾಥ್ ಅವರ ಮನೆಯ ಹತ್ತಿರ ಬಂದು ಸಾಲದ ಹಣ ಮತ್ತು ಬಡ್ಡಿ ನೀಡುವಂತೆ ಗಲಾಟೆ ಮಾಡಿದ್ದರು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದಿ ಕರ್ನಾಟಕ ಪ್ರಿವೆನ್ಷನ್ ಆಫ್ ಚಾರ್ಜಿಂಗ್ ಎಕ್ಸೊಬಿಟ್ ಇಂಟ್ರೆಸ್ಟ್ ಆಕ್ಟ್ -2004 ಮತ್ತು ಐಪಿಸಿ ರೀತ್ಯ ಪ್ರಕರಣ ದಾಖಲಾಗಿದೆ. ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಈ ಆರು ಜನ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿ ಒಟ್ಟು 217 ಸಹಿ ಇರುವ ಖಾಲಿ ಚೆಕ್ ಗಳು, ಪ್ರಾಮಿಸರಿ ನೋಟ್ ಗಳು, ನಿವೇಶನ ಮತ್ತು ವಾಹನಗಳ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ.
ಅಲ್ಲದೇ, ಶಿವಮೊಗ್ಗ ನಗರದ ವೆಂಕಟೇಶ್ ನಗರ ನಿವಾಸಿ ವೆಂಕಟೇಶ್ ಎನ್ನುವವರು ಕೂಡ ಶೇ. 5ರ ಬಡ್ಡಿದರದಲ್ಲಿ ಮಹಿಳೆಯೊಬ್ಬರಿಗೆ ಸಾಲ ನೀಡಿದ್ದು, ಸಾಲಕ್ಕಾಗಿ ಆ ಮಹಿಳೆ ಮನೆಯ ಪತ್ರ ಹಾಗೂ ಖಾಲಿ ಚೆಕ್ ಗಳನ್ನು ವೆಂಕಟೇಶ್ ಅವರಿಗೆ ಕೊಟ್ಟಿದ್ದರು. ವೆಂಕಟೇಶ್ ಅವರು ಮಹಿಳೆಗೆ ಬಡ್ಡಿ ಹಣಕ್ಕಾಗಿ ಪೀಡಿಸುತ್ತಿದ್ದು, ಸುಮ್ಮನೆ ಬಿಡುವುದಿಲ್ಲ. ಕೋರ್ಟ್ ದಾವೆ ಹೂಡುತ್ತೇವೆ ಎಂದು ಬೆದರಿಕೆ ಹಾಕಿದ್ದು, ವೆಂಕಟೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ನೀಡಿದ ಆಧಾರದ ಮೇಲೆ ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವೆಂಕಟೇಶ್ ಮನೆ ಮೇಲೆ ದಾಳಿ ನಡೆಸಿ 29750 ರೂ. ನಗದು, 13 ಖಾಲಿ ಚೆಕ್ ಗಳು, 100 ರೂ ಸ್ಟ್ಯಾಂಪ್ ಪೇಪರ್, ನಿವೇಶನ ದಾಖಲಾತಿಗಳು ಮತ್ತು ಬಡ್ಡಿ ವ್ಯವಹಾರದ ಬಗ್ಗೆ ನಮೂದು ಮಾಡಿರುವ 7 ನೋಟ್ ಬುಕ್ ಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಅಕ್ರಮ ಬಡ್ಡಿ ವ್ಯವಹಾರ ಮಾಡುವವರ ಬಗ್ಗೆ ಮಾಹಿತಿ ಇದ್ದಲ್ಲಿ ಅಥವಾ ಬಡ್ಡಿ ವ್ಯವಹಾರ ಮಾಡಿ ತೊಂದರೆ ಕೊಡುತ್ತಿದ್ದಲ್ಲಿ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆ ಅಥವಾ ಸಹಾಯವಾಣಿ 112ಕ್ಕೆ ಮಾಹಿತಿ ಅಥವಾ ದೂರು ನೀಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ತಿಳಿಸಿದ್ದಾರೆ.