ಶಿವಮೊಗ್ಗ: ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಎಂಬ ಅತ್ಯಾಧುನಿಕ ಯಂತ್ರವನ್ನು ಅಳವಡಿಸಲಾಗಿದ್ದು, ಇದರಿಂದ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳನ್ನು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ. ವಿ. ಶಿವಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ಅಪರೂಪದ ಯಂತ್ರವಾಗಿದೆ. ಇತರೆ ಸಾಮಾನ್ಯ ಎಂಡೋಸ್ಕೋಪಿಯಲ್ಲಿ ಪತ್ತೆಯಾಗದ ಅನೇಕ ಕಾಯಿಲೆಗಳನ್ನು ಈ ಯಂತ್ರದಲ್ಲಿ ಪರೀಕ್ಷೆಯಿಂದ ಪತ್ತೆ ಹಚ್ಚಬಹುದಾಗಿದೆ. ಅನ್ನನಾಳ, ಜಠರ, ಲಿವರ್, ಲಂಗ್ಸ್, ಸೇರಿದಂತೆ ದೇಹದ ಅನೇಕ ಭಾಗಗಳನ್ನು ಈ ಯಂತ್ರದಿಂದ ಪರೀಕ್ಷಿಸಿ ಕಾಯಿಲೆ ಪತ್ತೆ ಹಚ್ಚಬಹುದು. ಮತ್ತು ಅನ್ನನಾಳದ ಗೆಡ್ಡೆಗಳು ಸೇರಿದಂತೆ ಕ್ಷಯ ರೋಗದ ಕಾಯಿಲೆಯನ್ನು ಗುರುತಿಸಬಹುದಾಗಿದೆ ಎಂದರು.
ಈಗಾಗಲೇ ಈ ಯಂತ್ರ ಬಳಸಿ ಒಬ್ಬ ರೋಗಿಗೆ ಕ್ಯಾನ್ಸರ್ ಕಾಯಿಲೆಯನ್ನು ಪತ್ತೆ ಹಚ್ಚಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಗುಣಪಡಿಸಲಾಗಿದೆ. ಸಿಟಿ ಸ್ಕ್ಯಾನ್ ನಿಂದಲೂ ಪತ್ತೆಯಾಗದ ಕಾಯಿಲೆಗಳ ಲಕ್ಷಣಗಳು ಇದರಿಂದ ಗೊತ್ತಾಗುತ್ತವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಸುಮೇಶ್ ನಾಯರ್, ಡಾ. ಚಕ್ರವರ್ತಿ ಸಂಡೂರ್, ರಾಜಾಸಿಂಗ್ ಎಸ್.ವಿ. ಇದ್ದರು.