ನಂದೀಶ್ ಭದ್ರಾವತಿ, ದಾವಣಗೆರೆ
ರಾಜ್ಯ ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ಒಂದು ಕಡೆ ಪಕ್ಷ ಸಂಘಟಿಸುವುದಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಇನ್ನೊಂದೆಡೆ ದಾವಣಗೆರೆ ಬಿಜೆಪಿ ಒಡೆದು ಮನೆಯಾಗಿದೆ.
ಸದ್ಯ ಮಾಜಿ ಶಾಸಕ ರೇಣುಕಾಚಾರ್ಯ, ಮಾಜಿ ಶಾಸಕ ಗುರುಸಿದ್ದನಗೌಡ ಮಗ ಡಾ.ರವಿ, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗ ಮಾಡಾಳ್ ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಒಂದಾಗಿದ್ದು, ಎಂ.ಪಿ.ಸಿದ್ದೇಶ್ವರ ವಿರುದ್ಧ ತೊಡೆ ತಟ್ಟಿದ್ದಾರೆ.
ಎಂಪಿ ಟಿಕೆಟ್ ಗಾಗಿ ಸ್ಪರ್ಧೆ
ಈ ಬಾರಿ ರಾಮಮಂದಿರ ಪ್ರತಿಷ್ಠಾಪನೆ ಹಿನ್ನೆಲೆ, ಪ್ರಧಾನಿ ಮೋದಿ ನಾಮ ಬಲ ಇರುವ ಹಿನ್ನೆಲೆಯಲ್ಲಿ ಸಾಕಷ್ಟು ಸ್ಪರ್ಧಾಳುಗಳು ಹುಟ್ಟಿಕೊಂಡಿದ್ದಾರೆ. ಅಲ್ಲದೇ ತಂಡದ ನಾಯಕನಾಗಿ ಎಂಪಿ ರೇಣುಕಾಚಾರ್ಯ ನೇಮಕವಾಗಿದ್ದು, ಆಗಾಗ ಎಂಪಿ ವಿರುದ್ಧ ಬಾಣ ಬಿಡುತ್ತಿದ್ದಾರೆ. ಅಲ್ಲದೇ
ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಕರುಣಾಕರ ರೆಡ್ಡಿ,, ಮಾಜಿ ವಿಧಾನಪರಿಷತ್ ಸದಸ್ಯ ಡಾ.ಶಿವಯೋಗಿ ಸ್ವಾಮಿ, ಲೋಕಿಕೆರೆ ನಾಗರಾಜ್, ಅಜಯ್ಕುಮಾರ್ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ಹಾಲಿ ಸಂಸದರಿಗೆ ಟಿಕೆಟ್ ನೀಡದಿರಲು ಮಾಜಿ ಸಿಎಂ ಯಡಿಯೂರಪ್ಪ ಬಳಿ ನಿಯೋಗ ಹೋಗಿದ್ದಾರೆ.
ಸಿದ್ದೇಶ್ವರಗೆ ಟಿಕೆಟ್ ಕೊಡದಂತೆ ನೀಡಿದ ಕಾರಣ
ದಾವಣಗೆರೆ ಜಿಲ್ಲೆಯಲ್ಲಿ ಸಿದ್ದೇಶ್ವರ ಸ್ಪರ್ಧೆಗೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಕಾರ್ಯಕರ್ತರ ವಿರೋಧವಿದೆ. ನಾಲ್ಕು ಬಾರಿ ಗೆದಿದ್ದರೂ ಜಿಲ್ಲೆಯನ್ನು ಅಭಿವೃದ್ಧಿಪಡಿಸಿಲ್ಲ ಎಂಬ ಆರೋಪವಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೂ ತೆಗೆದುಕೊಂಡಿಲ್ಲ. ಹೀಗಾಗಿ ಈ ಬಾರಿ ಅವರಿಗೆ ಟಿಕೆಟ್ ನೀಡಬಾರದು. ಒಂದು ವೇಳೆ ಅವರಿಗೆ ಟಿಕೆಟ್ ನೀಡಿದರೆ ಸೋಲುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಅಲ್ಲದೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದೇಶ್ವರ್ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡದೇ ಕೆಲವು ಕಡೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಗೂ ಕಾರಣ ಕರ್ತರಾಗಿದ್ದಾರೆ. ಅವರ ಸ್ಪರ್ಧೆಗೆ ಎಲ್ಲೆಡೆ ವಿರೋಧ ಇರುವುದರಿಂದ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು ಎಂಬ ಹಕ್ಕೋತ್ತಾಯವನ್ನು ಮಾಜಿ ಸಿಎಂ ಯಡಿಯೂರಪ್ಪಗೆ ಮಂಡಿಸಲಾಗಿದೆ.
ಬಿವೈ ವಿಜಯೇಂದ್ರ ಭೇಟಿ
ಹಾಲಿ ಎಂಪಿ ಜಿ.ಎಂ ಸಿದ್ದೇಶ್ವರ್ಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ದಾವಣಗೆರೆ ಜಿಲ್ಲಾ ಮುಖಂಡರ ಬಿಜೆಪಿ ನಿಯೋಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದು, ಜಿ.ಎಂ ಸಿದ್ದೇಶ್ವರ್ಗೆ ಟಿಕೆಟ್ ಕೊಡಬಾರದು ಎಂದು ಮನವರಿಕೆ ಮಾಡಿಕೊಟ್ಟಿದೆ. ಮೊದಲು ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಬಿಎಸ್ವೈ ಅವರನ್ನು ಭೇಟಿ ಮಾಡಿದ ನಿಯೋಗ, ಸಿದ್ದೇಶ್ವರ್ ಅವರಿಗೆ ಏಕೆ ಟಿಕೆಟ್ ನೀಡಬಾರದು ಎಂಬುದನ್ನು ಮನವರಿಕೆ ಮಾಡಿದೆ.
ಸಮೀಕ್ಷೆ ನಡೆಸಲು ಒತ್ತಾಯ
ದಾವಣಗೆರೆಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಕಾರಣ ಸಮೀಕ್ಷೆ ನಡೆಸಿ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕು ಎಂದು ನಿಯೋಗ ಮನವಿ ಮಾಡಿಕೊಂಡಿದೆ. ಮನವಿ ಪತ್ರ ಸ್ವೀಕರಿಸಿದ ವಿಜಯೇಂದ್ರ, ಕಾರ್ಯಕರ್ತರು ಮತ್ತು ಮುಖಂಡರ ಒತ್ತಾಸೆಯಂತೆ ಪಕ್ಷದ ವತಿಯಿಂದ ಸಮೀಕ್ಷೆ ನಡೆಸುತ್ತೇವೆ. ಆ ಸಮೀಕ್ಷೆಯಲ್ಲಿ ಯಾರ ಪರವಾಗಿ ಹೆಚ್ಚಿನ ಒಲವು ತೋರುತ್ತಾರೋ ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ಚುನಾವಣಾ ಸಮಿತಿಗೆ ರಾಜ್ಯ ಘಟಕ ಶಿಫಾರಸು ಮಾಡಲಿದೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಬೇಕು. ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲೂ ಸಮೀಕ್ಷೆ ಆಧಾರದ ಮೇಲೆಯೇ ಟಿಕೆಟ್ ನೀಡಲಾಗುತ್ತದೆ. ಕಾರ್ಯಕರ್ತರು ಯಾರಿಗೆ ಹೆಚ್ಚಿನ ಒಲವು ತೋರುತ್ತಾರೆಯೇ ಅವರ ಆಶಯದಂತೆ ಪಕ್ಷ ನಡೆದುಕೊಳ್ಳಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಎಂ.ಪಿ ರೇಣುಕಾಚಾರ್ಯ ಹೇಳೋದು ಏನು?
ದಾವಣಗೆರೆಯಲ್ಲಿ ಈ ಬಾರಿ ಸಮೀಕ್ಷೆ ನಡೆಸಿ ಟಿಕೆಟ್ ನೀಡಬೇಕು ಇದು ನನ್ನಬ್ಬೊನ ಒತ್ತಾಯ ಅಲ್ಲ. ನಾವು ಯಾರ ಪರವಾಗಿಯೂ ಆಗಲಿ, ಇಲ್ಲವೇ ವಿರೋಧವಾಗಿಯೂ ಇಲ್ಲ. ಕಾರ್ಯಕರ್ತರ ಅಭಿಪ್ರಾಯದಂತೆ ನಡೆದುಕೊಳ್ಳಬೇಕು. ಜಿಲ್ಲೆಯ ವಾಸ್ತವ ಸ್ಥಿತಿ ಏನಿದೆಯೋ ಅದನ್ನು ನಮ್ಮ ನಾಯಕರಿಗೆ ಮನವರಿಕೆ ಮಾಡಿದ್ದೇವೆ. ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ನಿಯೋಗದೊಂದಿಗೆ ಆಗಮಿಸಿದ್ದ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಮತ್ತೊಮ್ಮೆ ಪ್ರಧಾನಿಯಾಗಿ ಮೋದಿಯಾಗಬೇಕೆಂಬುದು ಆಸೆ
ದಾವಣಗೆರೆಯಲ್ಲಿ ಆರು ಬಾರಿ ಬಿಜೆಪಿ ಗೆದ್ದಿದೆ. ಈ ಬಾರಿಯೂ ನಮ್ಮ ಪಕ್ಷ ಗೆಲ್ಲಬೇಕೆಂಬುದು ನನ್ನ ಒತ್ತಾಸೆ ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಅಧಿಕಾರಕ್ಕೆ ಬರಬೇಕು ಎಂದರೆ ಜಿಲ್ಲೆಯಲ್ಲಿ ಬಿಜೆಪಿ ಬಾವುಟ ಹಾರಲೇಬೇಕು. ಕಾರ್ಯಕರ್ತರು ಒಗ್ಗೂಡಿ ಗೆಲುವಿಗೆ ಶ್ರಮಿಸಬೇಕು. ಕಳೆದ ವಿಧಾನಸಭೆ ಚುನಾವಣೆ ವೇಳೆ ಬೇರೇ ಬೇರೆ ಕಾರಣಗಳಿಂದ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಕಾರ್ಯಕರ್ತರು, ಯುವ ಮತದಾರರು ಸೇರಿದಂತೆ ಮತ್ತಿತರರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಒಟ್ಟಾರೆ ಎಂಪಿ ಜಿ.ಎಂ.ಸಿದ್ದೇಶ್ವರ ವಿರುದ್ಧ ಇನ್ನೊಂದು ತಂಡ ಕಣಕ್ಕೆ ಇಳಿದಿದ್ದು, ವರಿಷ್ಠರ ತೀರ್ಮಾನ ಹೇಗೆ ಇರುತ್ತದೆ ಎಂದು ಕಾದು ನೋಡಬೇಕಿದೆ.