ಶಿವಮೊಗ್ಗ: ಕಾಂಗ್ರೆಸ್ಗೆ 136 ಸ್ಥಾನವನ್ನು ಜನ ನೀಡಿ ಆರ್ಶೀವದಿಸಿದ್ದಾರೆ. ಈಗ ಅದೇ ಮತದಾರ ಕಾಂಗ್ರೆಸ್ನ 14 ತಿಂಗಳ ಆಡಳಿತ ನೋಡಿ ಶಾಪ ಹಾಕುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮೂಡ ಹಗರಣ, ವಾಲ್ಮೀಕಿ ನಿಗಮದ ಹಗರಣ ಹೀಗೆ ಅನೇಕ ಹಗರಣಗಳು ಒಂದರ ಹಿಂದೆ ಒಂದರಂತೆ ಬೆಳಕಿಗೆ ಬರುತ್ತಿದೆ. ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಗೆ ಬೇಸತ್ತು ಸಬ್ಇನ್ಸ್ಫೆಕ್ಟರ್ ಒಬ್ಬರು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡರು.ಇದರ ನಡುವೆ ರಾಜ್ಯ ಕಾಂಗ್ರೆಸ್ ವಕ್ತಾರರಾದ ಮಾಜಿ ಸಂಸದ ಆಯನೂರು ಮಂಜುನಾಥ್, ನಮ್ಮ ಕುಟುಂಬದ ಬಗ್ಗೆ ಸುಳ್ಳು ಆರೋಪ ಮಾಡುತ್ತ ನೂರು ಸುಳ್ಳು ಹೇಳಿ, ಸುಳ್ಳನ್ನು ಸತ್ಯವನ್ನಾಗಿಸಲು ಹೊರಟಿರುವುದು ವಿಷಾಧನೀಯ ಎಂದರು.
ನಮ್ಮಕುಟುಂಬ ಆಸ್ಪತ್ರೆಗೆ ಸೇರಿದ ಜಾಗವನ್ನು ಕೆಐಡಿಬಿಯ ಎಲ್ಲಾ ನಿಯಮವಳಿಗಳ ಪ್ರಕಾರವೇ ಪಡೆದುಕೊಂಡಿದೆ. ಮತ್ತು ನಮ್ಮ ಸಂಬಂಧಿಕರು ರೈತರಿಗೆ ಆ ಜಾಗವನ್ನು ಖರೀದಿಸಿದ್ದು ಕೂಡ ನಿಯಮವಳಿಗಳ ಪ್ರಕಾರವೇ ಆಗಿದೆ. ಅದಕ್ಕೆ ಸೂಕ್ತ ದಾಖಲೆಯನ್ನು ತೋರಿಸಿದ ಅವರು, ಮಾಜಿ ಸಂಸದರು, ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್ನ ಜಿಲ್ಲಾ ಮಂತ್ರಿ ಮಧುಬಂಗಾರಪ್ಪ, ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಬಗ್ಗೆ ಮಾಡಿದ ಟೀಕೆಗಳನ್ನು ಜಿಲ್ಲೆಯ ಜನತೆ ನೋಡಿದ್ದಾರೆ. ಆಗ ಅವರು ಬಳಸಿದ ಶಬ್ದಗಳು ಕೂಡ ಹೇಳಲು ನಾಚಿಕೆಯಾಗುತ್ತದೆ. ಈಗ ಅದೇ ನಾಯಕರು ನಮ್ಮ ಕುಟುಂಬದ ಬಗ್ಗೆ ಸುಳ್ಳು ಟೀಕೆಗಳನ್ನು ಮಾಡುವುದು ಖಂಡನೀಯ ನಾವು ಸರ್ಕಾರದ ಕಾನೂನುಗಳಿಗೆ ಬದ್ಧವಾಗಿ ವ್ಯವಹಾರವನ್ನು ಮಾಡಿದ್ದೇವೆ. ಮೂಡ ಹಗರಣಕ್ಕೂ ನಮ್ಮ ಆಸ್ತಿಗು ಹೋಲಿಕೆ ಮಾಡುವುದೇ ತಪ್ಪು ಎಂದರು.
ಕಾಂಗ್ರೆಸ್ ತಟ್ಟೆಯಲ್ಲಿ ಬಿದ್ದಿದ್ದನ್ನು ಗಮನ ಬೇರೆಡೆಗೆ ಸೆಳೆಯಲು ಸುಳ್ಳು ಆರೋಪ ಮಾಡುವುದನ್ನು ಮೊದಲು ನಿಲ್ಲಿಸಲಿ, ಅವರ ವ್ಯಕ್ತಿತ್ವಕ್ಕೆ ಅದು ಶೋಭೆ ತರುವುದಿಲ್ಲ. ಕಾಂಗ್ರೆಸ್ ಭ್ರಷ್ಟಚಾರದ ವಿರುದ್ಧ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ರಾಜ್ಯದ ಜನರ ಗಮನ ಸೆಳೆಯಲು ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಕ್ಷದ ವತಿಯಿಂದ ಪಾದಯಾತ್ರೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಾವು ಹಿಂದೂಗಳು ಸ್ವತಂತ್ರವಾಗಿ ಹಬ್ಬ ಆಚರಿಸಲು ಸರ್ಕಾರ ನೂರಾರು ಷರತ್ತುಗಳನ್ನು ಹಾಕುತ್ತದೆ. ಒಂದು ವರ್ಗವನ್ನು ಓಲೈಕೆ ಮಾಡುವ ಪ್ರಯತ್ನ ಮಾಡುತ್ತ ಬಂದಿದೆ. ಸಣ್ಣಕಿಡಿ ದೊಡ್ಡದಾಗಿ ಹತ್ತುವ ಮೊದಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿ, ಹಬ್ಬ ಆಚರಣೆಗೆ ಅವಕಾಶ ನೀಡಲಿ ಎಂದರು.
ಮಾಜಿ ಶಾಸಕ ರುದ್ರೇಗೌಡರು ಮಾತನಾಡಿ ಆಯನೂರು ಮಂಜುನಾಥ್ ಆರೋಪಕ್ಕೆ ಸಂಸದರು ಉತ್ತರ ನೀಡಿದ್ದಾರೆ. 2011ರ ಎಂಪಿ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಗೊಂದಲ ಇರಲಿಲ್ಲ. ಹೈಕಮಾಂಡ್ ಆಯ್ಕೆಯನ್ನು ಪಕ್ಷ ಗೌರವಿಸಿ ಕೆಲಸ ಮಾಡಿದೆ ಎಂದರು.
ಶಾಸಕ ಚನ್ನಬಸಪ್ಪ ಮಾತನಾಡಿ, ಸರ್ಕಾರ ಹಿಂದೂ ಸಮಾಜದ ಮೇಲೆ ಗದಪ್ರಹಾರ ಮಾಡುತ್ತ ಬಂದಿದೆ. ಮಸೀದಿಯಿಂದ ಕಲ್ಲುಗಳು ತೋರಾಡಿದ್ದನ್ನು ಪೊಲೀಸರೇ ನೋಡಿದ್ದಾರೆ. ಕೈಯಲ್ಲಿ ತಲವಾರು ಹಿಡಿದು ಬೆದರಿಸಿದರೆ ಹಿಂದೂ ಸಮಾಜ ಹೆದರಲ್ಲ, ನಮ್ಮ ಎಲ್ಲಾ ದೇವತೆಗಳ ಕೈಯಲ್ಲೂ ದುಷ್ಟರ ಸಂಹಾರಕ್ಕಾಗಿ ಆಯುಧಗಳು ಇರುವುದನ್ನು ನಾವೆಲ್ಲ ನೋಡಿದ್ದೇವೆ. ಗೃಹ ಸಚಿವರು, ಈ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳದೆ ಸೂಕ್ತ ಕ್ರಮ ಕೈಗೊಳ್ಳಲಿ . ಜಿಲ್ಲೆಯ ಎಲ್ಲಾ ಮೆರವಣ ಗೆಗಳು ಶಾಂತಿಯುತವಾಗಿ ನಡೆಯುತ್ತವೆ ಆತಂಕ ಬೇಡ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶಿವರಾಜ್, ಬಿ.ಕೆ.ಶ್ರೀನಾಥ್, ಹರಿಕೃಷ್ಣ ಹಾಗೂ ರಾಜ್ಯ ಮಾಧ್ಯಮ ಸದಸ್ಯರಾದ ವಿಜಯೇಂದ್ರ, ಪ್ರಮುಖರಾದ ಅಣ್ಣಪ್ಪ, ಚಂದ್ರಶೇಖರ್, ಶ್ರೀನಾಗ್, ಮಾಲತೇಶ್, ಬಸವರಾಜ್ ಉಪಸ್ಥಿತರಿದ್ದರು.
—