ಬೆಂಗಳೂರು:ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ ಇಡಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಮುಂದಾಗಿದೆ. ವಿದ್ಯಾರ್ಥಿಗಳಿಗೆ ತ್ವರಿತವಾಗಿ ಪದವಿ ಪಡೆಯುವ ಅವಕಾಶ ನೀಡುವ ನಿಟ್ಟಿನಲ್ಲಿ ನಾಲ್ಕು ವರ್ಷದ ಪದವಿ ವ್ಯಾಸಂಗವನ್ನು ಮೂರು ವರ್ಷ ಹಾಗೂ ಮೂರು ವರ್ಷಗಳ ಡಿಗ್ರಿ ಕೋರ್ಸ್ನ್ನು ಎರಡೂವರೆ ವರ್ಷದಲ್ಲಿ ಪೂರ್ಣಗೊಳಿಸುವ ನಿಯಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ ಮಾಡಲು ಆಯೋಗ ರೂಪಿಸಿದೆ.

ಚನ್ನೈನಲ್ಲಿ ನಡೆದ ದಕ್ಷಿಣ ವಲಯ ಕಾಲೇಜುಗಳ ಸಮಾವೇಶದಲ್ಲಿ ಯುಜಿಸಿ ಅಧ್ಯಕ್ಷ ಪ್ರೊ.ಎಂ. ಜಗದೀಶ್ ಮಾತನಾಡಿ, ಶೈಕ್ಷಣಿಕ ಅವಧಿಯನ್ನು ಕಡಿಮೆಗೊಳಿಸುವ ಚಿಂತನೆಯು ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ನೇತೃತ್ವದ ಸಮಿತಿ ನೀಡಿದ ಶಿಫಾರಸು ಆಧರಿಸಿದೆ. ಈಗಾಗಲೇ ಹೊಸ ಯೋಜನೆಯನ್ನು ಯುಜಿಸಿ ಸಾಮಾನ್ಯ ಸಭೆ ಅಂಗೀಕರಿಸಿದೆ. ಈ ನಿಟ್ಟಿನಲ್ಲಿ ವಿಸ್ತೀರ್ಣ ಮಾರ್ಗಸೂಚಿಗಳನ್ನು ಶೀಘ್ರದಲ್ಲಿ ಹೊರಡಿಸಲಾಗುವುದು ಎಂದು ಜಗದೀಶ್ ಕುಮಾರ್ ಮಾಹಿತಿ ಹಂಚಿಕೊAಡಿದ್ದಾರೆ.

ಕೋರ್ಸ್ನ್ನು ಎಷ್ಟು ತ್ವರಿತವಾಗಿ ಪೂರ್ಣಗೊಳಿಸುತ್ತಾರೆ ಎಂಬುದು ವಿದ್ಯಾರ್ಥಿಗಳ ಸಾಮರ್ಥ್ಯ ಆಧರಿಸಿದೆ. ಎರಡೇ ವರ್ಷದಲ್ಲಿ ಅಗತ್ಯ ಕ್ರೆಡಿಟ್‌ಗಳನ್ನು (ಅಂಕ) ಗಳಿಸಿ ಎಂದರೆ ವಿದ್ಯಾರ್ಥಿಗಳಲ್ಲಿ ಒತ್ತಡಕ್ಕೆ ಕಾರಣವಾಗಬಹುದು. ಹೀಗಾಗಿ ಪ್ರತಿಭಾವಂತರು ಆರು ತಿಂಗಳಿನಿAದ ಒಂದು ವರ್ಷದ ಅವಧಿಯನ್ನು ಉಳಿಸಬಹುದು ಎಂದು ನಿರೀಕ್ಷಿಸಿದ್ದೇವೆ ಎಂದು ಜಗದೀಶ್ ಕುಮಾರ್ ಹೇಳಿದ್ದಾರೆ.

ಇನ್ನು ಹೊಸ ನಿಯಮದನ್ವಯ, ಅಗತ್ಯ ಬಿದ್ದರೆ ಪದವಿ ಪೂರ್ಣಗೊಳಿಸಲು ನಿಗದಿಗಿಂತ ಹೆಚ್ಚಿನ ಅವಕಾಶ ಪಡೆದುಕೊಳ್ಳಬಹುದು. ಕೆಲ ಸಮಯದ ವಿರಾಮದ ಬಳಿಕ ವಿದ್ಯಾಭ್ಯಾಸ ಮುಂದುವರಿಸಬಹುದು. ಅವಧಿಯನ್ನು ಹಿಗ್ಗಿಸುವ ಅಥವಾ ಕುಗ್ಗಿಸುವ ಅವಕಾಶವನ್ನು ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share.
Leave A Reply

Exit mobile version